ಬೆಂಗಳೂರು (ಜ.02): ಮೀಟೂ ಆರೋಪ ಮಾಡಿ ದೊಡ್ಡ ಸುದ್ದಿ ಆಗಿದ್ದ ಸಂಗೀತಾ ಭಟ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಅವರು ನಾಯಕಿಯಾಗಿ ಅಭಿನಯಿಸಿದ ‘ಕಪಟ ನಾಟಕ ಪಾತ್ರಧಾರಿ’ ಹೆಸರಿನ ಚಿತ್ರದ ಪ್ರಮೋಷನ್‌ಗೆ ಬಾರದೇ ಇರುವ ಕಾರಣಕ್ಕೆ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರ ಕೋಪಕ್ಕೆ ಗುರಿಯಾಗಿದ್ದಾರೆ.

ಕ್ರಿಷ್ ನಿರ್ದೇಶನದ ‘ಕಪಟ ನಾಟಕ ಪಾತ್ರಧಾರಿ’ ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಸಂಗೀತಾ ಭಟ್ ಬಂದಿರಲಿಲ್ಲ. ಅನಾರೋಗ್ಯ ಕಾರಣ ನೀಡಿದ್ದರು. ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್ ಆ ದಿನದ ಅತಿಥಿ. ಫಸ್ಟ್ ಲುಕ್ ಮತ್ತು ಟ್ರೇಲರ್ ಲಾಂಚ್ ಮಾಡಿದ ನಂತರ ಮಾತನಾಡಿದ ಡಾ. ನಾಗೇಂದ್ರ ಪ್ರಸಾದ್, ‘ಕೆಲವರು ಸಿನಿಮಾ ಮತ್ತು ಖಾಸಗಿ ಬದುಕು ಎರಡು ಒಂದೇ ಅಂತ ಭಾವಿಸಿದ್ದಂತಿದೆ.

ವೃತ್ತಿಯಾಗಿ ಸಿನಿಮಾವನ್ನು ಸ್ವೀಕರಿಸಿದಾಗ ಅದರ ಪೂರ್ಣ ಪ್ರಮಾಣದ ಕೆಲಸವನ್ನು ಮುಗಿಸಿಕೊಡಬೇಕು. ಚಿತ್ರ ಬಿಡುಗಡೆ ಆಗುವವೆರಗೂ ಅವರ ಜವಾಬ್ದಾರಿ ಇರುತ್ತದೆ. ನಿರ್ಮಾಪಕರು ಕಷ್ಟು ಪಟ್ಟು ಬಂಡವಾಳ ಹಾಕಿ ಸಿನಿಮಾ ಮಾಡಿರುತ್ತಾರೆ. ಅದರ ಪ್ರಮೋಷನ್‌ಗೆ ನಾಯಕ-ನಾಯಕಿಯರು ಸಹಕರಿಸಬೇಕು. ಹಾಗಾದಾಗ ನಿರ್ಮಾಪಕರಿಗೂ ಒಂದಷ್ಟು ವಿಶ್ವಾಸ, ಭರವಸೆ ಹುಟ್ಟುತ್ತದೆ. ಇದನ್ನು ಸಂಗೀತಾ ಭಟ್ ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ’ ಅಂತ ತರಾಟೆಗೆ ತೆಗೆದುಕೊಂಡರು. ವೇದಿಕೆ ಕಾರ್ಯಕ್ರಮ ಮುಗಿದಾಗ ಸಂಗೀತಾ ಭಟ್ ಅನುಪಸ್ಥಿತಿಯ ಮತ್ತಷ್ಟು ನಿಜಾಂಶ ಹೊರಬಂತು. ಚಿತ್ರತಂಡದ ಕೆಲವರು ಔಪಚಾರಿಕವಾಗಿ ಮಾತನಾಡುತ್ತಾ, ಸಂಗೀತಾ ಭಟ್ ಗೈರಾಗಿದ್ದಕ್ಕೆ ನಿಜವಾದ ಕಾರಣ ಬಿಡಿಸಿಟ್ಟರು.

‘ಅವರು ಮೀಟೂ ಆರೋಪದಲ್ಲಿ ಸುದ್ದಿ ಆಗುವುದಕ್ಕೂ ಮುನ್ನ ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದರು. ಅಷ್ಟೊತ್ತಿಗಾಗಲೇ ಚಿತ್ರೀಕರಣವೂ ಮುಗಿದಿತ್ತು. ಅವರ ನೋವು, ಅವರೇನೋ ಹೇಳಿಕೊಳ್ಳಲಿ ಬಿಡಿ ಅಂತ ನಾವಾಗ ಸುಮ್ಮನಿದ್ದೆವು. ಚಿತ್ರರಂಗಕ್ಕೂ ತಮಗೂ ಸಂಬಂಧವಿಲ್ಲ ಅಂದರು. ನಮ್ಮ ಚಿತ್ರದ ಪ್ರಮೋಷನ್‌ಗಾದ್ರೂ ಬರಬಹುದು ಅಂತಂದುಕೊಂಡಿದ್ದೆವು. ಆರಂಭದಲ್ಲಿ ಆಯ್ತು ಅಂತಲೂ ಭರವಸೆ ಕೊಟ್ಟರು. ಈಗ ನೋಡಿದ್ರೆ, ಅವರು ಇನ್ನೇನೋ ಕಾರಣ ಹೇಳುತ್ತಿದ್ದಾರೆ’ ಎಂದು ಅಸಮಾಧಾನ ಹೊರ ಹಾಕಿದರು.

ಈ ಬಗ್ಗೆ ಸಂಗೀತಾ ಭಟ್ ಪ್ರತಿಕ್ರಿಯೆ ಪಡೆಯಲು ಅವರನ್ನು ಸಂಪರ್ಕಿಸಲು ಯತ್ನಿಸಿದರೆ, ‘ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆಂಬ’ ಧ್ವನಿ ಕೇಳಿಸುತ್ತಲೇ ಇತ್ತು.