ನವದೆಹಲಿ[ಜು.02]: ಬ್ಯಾಂಕುಗಳಿಗೆ 8,100 ಕೋಟಿ ರು. ವಂಚಿಸಿರುವ ಗುಜರಾತ್‌ ಮೂಲದ ಸ್ಟರ್ಲಿಂಗ್‌ ಬಯೋಟೆಕ್‌ ಕಂಪನಿಯ ಕುರಿತಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.), ಬೆಂಗಳೂರು ಮೂಲದ ಬಾಲಿವುಡ್‌ ನಟ ದೀನೋ ಮೋರಿಯಾಗೆ ಸಮನ್ಸ್‌ ನೀಡಿದೆ. ಮೋರಿಯಾ ಜತೆಗೆ ಜನಪ್ರಿಯ ಡಿಸ್ಕ್‌ ಜಾಕಿ (ಡಿಜೆ) ಅಖಿಲ್‌ಗೆ ಕೂಡ ವಿಚಾರಣೆಗೆ ಬರುವಂತೆ ಸೂಚನೆ ನೀಡಿದೆ.

ಬ್ಯಾಂಕ್‌ಗಳಿಗೆ ವಂಚನೆ ಮಾಡಿರುವ ಗುಜರಾತ್‌ ಮೂಲದ ಸ್ಟರ್ಲಿಂಗ್‌ ಕಂಪನಿಯಿಂದ ದೀನೋ ಹಾಗೂ ಅಖಿಲ್‌ಗೆ ಹಣ ಸಂದಾಯವಾಗಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಈ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ಯಾವ ಸಂದರ್ಭದಲ್ಲಿ ಸ್ಟರ್ಲಿಂಗ್‌ ಕಂಪನಿ ಹಣ ನೀಡಿದೆ ಎಂದು ಪ್ರಶ್ನಿಸಿ, ಅವರು ನೀಡುವ ಹೇಳಿಕೆಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ. ದಾಖಲು ಮಾಡಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಡೋದರಾ ಮೂಲದ ಔಷಧ ಕಂಪನಿಯಾದ ಸ್ಟರ್ಲಿಂಗ್‌ ಬಯೋಟೆಕ್‌ ವಿವಿಧ ಬ್ಯಾಂಕುಗಳಿಂದ 8,100 ಕೋಟಿ ರು. ಸಾಲ ಪಡೆದು ಮರುಪಾವತಿಸದೇ ವಂಚಿಸಿದೆ. ಆ ಕಂಪನಿಯ ಪ್ರವರ್ತಕರಾದ ನಿತಿನ್‌ ಸಂದೆಸರ, ಚೇತನ್‌ ಸಂದೇಸರ ಹಾಗೂ ದೀಪ್ತಿ ಸಂದೇಸರ ಅವರು ತಲೆಮರೆಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ 1975ರಲ್ಲಿ ಜನಿಸಿದ ದೀನೋ ಮೋರಿಯಾ, ಬೆಂಗಳೂರಿನಲ್ಲೇ ವ್ಯಾಸಂಗ ಮುಗಿಸಿ ಮಾಡೆಲಿಂಗ್‌ ಮೂಲಕ ಸಿನಿಮಾ ರಂಗ ಪ್ರವೇಶಿಸಿದವರು. ಅವರ ತಂದೆ ಇಟಲಿ ಮೂಲದವರು. ತಾಯಿ ಕೇರಳ ಮೂಲದವರು. ಮಾಜಿ ಸಂಸದೆ ರಮ್ಯಾ ಅಭಿನಯದ, 2006ರಲ್ಲಿ ತೆರೆ ಕಂಡ ‘ಜೂಲಿ’ ಕನ್ನಡ ಸಿನಿಮಾದಲ್ಲಿ ದೀನೋ ನಟಿಸಿದ್ದಾರೆ.