ನೋಟು ಅಮಾನ್ಯಕ್ಕೆ ಸ್ಟಾರ್ ಚಿತ್ರಗಳೇ ಹೆದರಿವೆ. ಹೊಸ ಸಿನಿಮಾ ಸೆಟ್ಟೇರುತ್ತಿಲ್ಲ, ಚಿತ್ರ ತೆರೆ ಕಂಡರೆ ನೋಡುವವರಿಲ್ಲ ಎಂಬಂಥ ಸ್ಥಿತಿಯಿದೆ. ಆದರೆ,  500, 1000 ಮುಖಬೆಲೆಯ ನೋಟಿನ ನಿಷೇಧಕ್ಕೆ ಹಾರರ್ ಸಿನಿಮಾಗಳು ಹೆದರಿಲ್ಲ. ಪುಂಖಾನುಪುಂಖವಾಗಿ ಬಂದು ಟಾಕೀಸಿನಲ್ಲಿ ಅಬ್ಬರಿಸುತ್ತಿವೆ! ಈ ಒಂದು ತಿಂಗಳಲ್ಲಿ ಬಂದ ಒಟ್ಟು ಹಾರರ್ ಚಿತ್ರಗಳು 10!

- ಆರ್ ಕೇಶವಮೂರ್ತಿ

ಇದು ಕರೆಂಟ್ ಶಾಕ್ ಅಲ್ಲ, ಕರೆನ್ಸಿ ಶಾಕ್! ನವೆಂಬರ್ 8ರ ನಂತರ ಚಿತ್ರೋದ್ಯಮ ಹೆಚ್ಚುಕಮ್ಮಿ ಸ್ತಬ್ಧವಾಗಿದೆ. ಹೊಸ ಚಿತ್ರಗಳು ಸೆಟ್ಟೇರುತ್ತಿಲ್ಲ. ಶುರುವಾದ ಬಹುತೇಕ ಚಿತ್ರಗಳ ಶೂಟಿಂಗ್ ಕೆಲಸಗಳು ಸ್ಥಗಿತಗೊಂಡಿವೆ. ಸಿನಿಮಾ ಮೈದಾನದಲ್ಲಿ ಆ್ಯಕ್ಷನ್- ಕಟ್‌ಗಳ ಸದ್ದೇ ಕೇಳಿಸುತ್ತಿಲ್ಲ. ಕೋಟಿ ಕೋಟಿ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ ಎಂದು ಲೆಕ್ಕ ಒಪ್ಪಿಸುವ ಸ್ಟಾರ್‌ಗಳ ಸಿನಿಮಾಗಳೇ 500, 1000 ಮುಖ ಬೆಲೆಯ ನೋಟ್ ನಿಷೇಧಕ್ಕೆ ಹೆದರಿ, ಟಾಕೀಸಿನತ್ತ ಮುಖಮಾಡಿಲ್ಲ. ಶಿವರಾಜ್ ಕುಮಾರ್, ಸುದೀಪ್, ಪುನೀತ್‌ರಂಥ ಸ್ಟಾರ್‌ಗಳು ಬಿಡುಗಡೆಯ ದಿನಾಂಕವನ್ನು ಮುಂದೂಡಿ ಕುಳಿತಿದ್ದಾರೆ. ಇದು ದೇಶಾದ್ಯಂತ ಜಾರಿಗೆ ಬಂದ ನೋಟ್ ಬ್ಯಾನ್ ಎಫೆಕ್ಟ್. ಆದರೆ, ಈ ನೋಟಿನ ನಿಷೇಧ ಬಿಸಿ ಮಾತ್ರ ದೆವ್ವ, ಪ್ರೇತಗಳಿಗೆ ತಟ್ಟಿಲ್ಲ ನೋಡಿ!

ಸುಮ್ಮನೆ ಗಮನಿಸಿ, ನ.8ರ ನಂತರ ಕನ್ನಡವೂ ಸೇರಿದಂತೆ ಇತರೆ ಭಾಷೆಗಳಲ್ಲಿ ಬಿಡುಗಡೆಯಾದ ಸಿನಿಮಾಗಳು ಒಂದೋ ಹೊಸ ನಟರ ಸಣ್ಣ ಬಜೆಟ್ಟಿನ ಸಿನಿಮಾ. ಇಲ್ಲವೇ, ಪಕ್ಕಾ ಹಾರರ್ ಸಿನಿಮಾಗಳು ಮಾತ್ರ ಚಿತ್ರಮಂದಿರಗಳನ್ನು ಪ್ರವೇಶಿಸಿವೆ. ಜತೆಗೆ ಹಾಗೆ ಬಂದ ಈ ಹಾರರ್ ಕಂ ಥ್ರಿಲ್ಲರ್ ಸಿನಿಮಾಗಳು ನಿಧಾನಕ್ಕೆ ನಿರ್ಮಾಪಕನ ಗಲ್ಲಾಪೆಟ್ಟಿಗೆಯ ತೂಕ ಹೆಚ್ಚಿಸುತ್ತಿವೆಯಂತೆ. ನೋಟ್ ಬ್ಯಾನ್ ಆದ ಎರಡು ವಾರ ಯಾವುದೇ ಸಿನಿಮಾ ತೆರೆಗೆ ಬರಲಿಲ್ಲ. ಆ ನಂತರ ಬಿಡುಗಡೆಯ ಸಾಲಿನಲ್ಲಿ ನಿಂತ ಸಣ್ಣ ಬಜೆಟ್‌ನ ಸಿನಿಮಾಗಳಲ್ಲಿ ಹಾರರ್ ಚಿತ್ರಗಳದ್ದೇ ಒಂದು ಹೆಜ್ಜೆ ಮುಂದಿತ್ತು. ಕಳೆದವಾರ ಬಂದ ಪ್ರಿಯಾಂಕಾ ನಟನೆಯ ‘ಮಮ್ಮಿ’, ಹೊಸಬರ ಅಭಿನಯದ ‘ನೋ ಎಂಟ್ರಿ’, ಇದಕ್ಕೂ ಮುನ್ನ ಬಂದ ‘ಮಂಡ್ಯದ ಹುಡುಗರು’ ಚಿತ್ರಗಳ ಜತೆಗೆ ಈ ವಾರ ‘ಡೈಯಾನ ಹೌಸ್’ ಹೆಸರಿನ ಹಾರರ್ ಸಿನಿಮಾ ಸೇರಿಕೊಳ್ಳುತ್ತಿದೆ. ಅಲ್ಲಿಗೆ ಬಿಡುಗಡೆಯಾದ ಕೆಲವೇ ಚಿತ್ರಗಳಲ್ಲಿ ಹಾರರ್ ಚಿತ್ರಗಳ ಪಾಲು ದೊಡ್ಡದು. ಈ ಚಿತ್ರಗಳ ಪೈಕಿ ಲೋಹಿತ್ ನಿರ್ದೇಶನದ ‘ಮಮ್ಮಿ’ ಸದ್ದು ಮಾಡುತ್ತಿದೆ. ನಿನ್ನೆ ತೆರೆಕಂಡ ‘ಡೈಯಾನ ಹೌಸ್’ ಕತೆ ಏನಾಗಬಹುದು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದು ಕನ್ನಡದ ಕತೆಯಾದರೆ, ಪಕ್ಕದ ಭಾಷೆಗಳಾದ ತೆಲುಗು, ತಮಿಳಿನಲ್ಲೂ ಇದೇ ಸ್ಥಿತಿ. ಅಲ್ಲಿಗೆ ಸದ್ಯಕ್ಕೆ ಸ್ಟಾರ್‌ಗಳು ತೆರೆಮೇಲೆ ರಾರಾಜಿಸುತ್ತಿಲ್ಲ. ಕಳೆದ ತಿಂಗಳು ‘ಬಿಚ್ಚಗಾಡು’ ಚಿತ್ರದ ಮೂಲಕ ಸೂಪರ್ ಹಿಟ್ ಆದ ನಟ ವಿಜಯ್ ಆ್ಯಂಟನಿ ಅವರ ‘ಬೇತಾಲುಡು’ ಸಿನಿಮಾ ತೆಲುಗು ಮತ್ತು ತಮಿಳು ಎರಡರಲ್ಲೂ ತೆರೆ ಕಂಡಿದೆ. ‘ಬೇತಾಲುಡು’ ಚಿತ್ರಕ್ಕಿಂತ ಮೊದಲು ‘ಎಕ್ಕಡಿಕಿ ಪೋತಾವು ಚಿನ್ನವಾಡ’ ಹಾಗೂ ‘ಘಟನಾ’ ಎನ್ನುವ ದೆವ್ವದ ಚಿತ್ರಗಳು ತೆರೆಗಪ್ಪಳಿಸಿವೆ. ಈ ನಡುವೆ ಬಾಲಿವುಡ್‌ನಲ್ಲಿ ಒಂದೆರಡು ಸ್ಟಾರ್ ಸಿನಿಮಾಗಳು ಬಂದರೂ ನೋಟಿನ ಮುಂದೆ ಅವರದ್ದೇನೂ ನಡೆಯಲಿಲ್ಲ. ಆದರೆ, ವಿದ್ಯಾಬಾಲನ್ ಅವರ ಥ್ರಿಲ್ಲರ್ ಸಿನಿಮಾ ‘ಕಹಾನಿ-2’ ಒಂದಷ್ಟು ಸದ್ದು ಮಾಡುತ್ತಿದೆ. ಆದರೆ, ‘ಕಹಾನಿ’ ಮೊದಲ ಭಾಗದ ಜನಪ್ರಿಯತೆ ಇದಕ್ಕೆ ಸಿಕ್ಕಿಲ್ಲ. ಮೋದಿಯ ನೋಟ್ ಬ್ಯಾನ್‌ಗೂ ಹಾಲಿವುಡ್‌ಗೂ ಸಂಬಂಧ ಇಲ್ಲದಿದ್ದರೂ ಇಂಗ್ಲಿಷಿನಲ್ಲೂ ಕಳೆದವಾರ ಬಂದಿದ್ದು ಹಾರರ್ ಚಿತ್ರಗಳೇ. ‘ಸಿರೆನ್’, ‘ಪೆಟ್’, ‘ದಿ ಐಸ್ ಆ್ ಮೈ ಮದರ್’- ಈ ಮೂರೂ ಚಿತ್ರಗಳಲ್ಲೂ ಭಯಾನಕ ದೆವ್ವಗಳಿವೆ!

ಅಲ್ಲಿಗೆ ದೇವರಿಗಿಂತ ತೆರೆ ಮೇಲೆ ಚಿತ್ರರಂಗವನ್ನು ಕಾಪಾಡುತ್ತಿರೋದು ದೆವ್ವಗಳೇ ಎಂಬುದನ್ನು ನೋಟ್ ಬ್ಯಾನ್ ಬಿಕ್ಕಟ್ಟು ಸಾಬೀತು ಮಾಡಿದೆ. ಹೀಗಾಗಿ ಸ್ಟಾರ್‌ಗಳನ್ನೇ ಹೆದರಿಸಿದ ಮೋದಿಯ ನೋಟ್ ಬ್ಯಾನ್ ಯೋಜನೆ ಹಾರರ್ ಚಿತ್ರಗಳನ್ನು ಮಾತ್ರ ಭಯಪಡಿಸಾಗಲಿಲ್ಲ!

ನೋಟು ಅಮಾನ್ಯ ಅವಧಿಯ ಹಾರರ್ ಚಿತ್ರಗಳು

1. ಮಮ್ಮಿ (ಕನ್ನಡ)

2. ಡೈಯಾನ ಹೌಸ್ (ಕನ್ನಡ)

3. ನೋ ಎಂಟ್ರಿ (ಕನ್ನಡ)

4. ಮಂಡ್ಯದ ಹುಡುಗರು (ಕನ್ನಡ)

5. ಬೇತಾಲುಡು (ತಮಿಳು)

6. ಎಕ್ಕಡಿಕಿ ಪೋತಾವು ಚಿನ್ನವಾಡ (ತೆಲುಗು)

7. ಘಟನಾ (ತೆಲುಗು)

8. ಸಿರೆನ್ (ಇಂಗ್ಲಿಷ್)

9. ಪೆಟ್ (ಇಂಗ್ಲಿಷ್)

10. ದಿ ಐಸ್ ಆ್ ಮೈ ಮದರ್ (ಇಂಗ್ಲಿಷ್)

(ಕನ್ನಡ ಪ್ರಭ)