ನಾನು ಪ್ರತಿಭಾನುವಾರ ಕೈಗೊಳ್ಳುವ ನನ್ನ ಅಭಿಮಾನಿವರ್ಗದ ಜೊತೆಗಿನ ಸಂವಾದ ಅಪರೂಪಕ್ಕೆ ಚಿಂತನಾರ್ಹವಾಗಿತ್ತು! ಎಂದಿನಂತೆ ಇವತ್ತೂ ಅಭಿಮಾನಿಗಳೂ ಹಿತೈಷಿಗಳೂ ಸೆಲ್ಫೀಗೋಸ್ಕರ ಮನೆಗೆ ಬಂದಿದ್ದರು. ಅವರೆಲ್ಲ ಸೂಜಿದಾರ ನೋಡಿ ಸೊರಗಿ ಹೋಗಿದ್ದಾಗಿ ಹೇಳಿಕೊಂಡರು. ಸೂಜಿದಾರದಲ್ಲಿ ನನ್ನ ಪಾತ್ರಕ್ಕೆ ಇನ್ನಷ್ಟುಹೆಚ್ಚು ಅವಕಾಶ ಸಿಗಬೇಕಾಗಿತ್ತು. ನಾನು ಹೆಚ್ಚು ದೃಶ್ಯಗಳಲ್ಲಿ ಇಲ್ಲದೇ ಇರುವುದರಿಂದ ಅವರೆಲ್ಲ ಬೇಸರಗೊಂಡು ಅರ್ಧಕ್ಕೇ ವಾಪಸ್ಸು ಹೋದದ್ದನ್ನು ಹೇಳಿಕೊಂಡರು. ನಿಜ ಹೇಳಬೇಕೆಂದರೆ, ಸೂಜಿದಾರ ನನಗೆ ಹೇಳಿದ ಕತೆಯಲ್ಲ. ಕೆಲವು ಅನಗತ್ಯ ಸಂಗತಿಗಳನ್ನು ಅವರು ಸೇರಿಸಿಕೊಂಡಿದ್ದಾರೆ. ನಾನು ಮೊದಲ ಸಲ ಸಿನಿಮಾ ನೋಡಿದಾಗ ನಿರಾಶೆಯಾಯಿತು. ರಂಗಭೂಮಿ ತಂಡವೊಂದಕ್ಕೆ ಸಿನಿಮಾ ಮಾಡಲು ನೆರವಾಗಲು ನಾನು ನಿರ್ಧರಿಸಿದ್ದೆ, ಆದರೆ ಏನಾಯಿತು ನೋಡಿ ಅಭಿಮಾನಿಗಳೇ. ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಇಂಥ ತಪ್ಪು ಮತ್ತೆಂದೂ ಆಗದು.. ಆಗದು. ಮುಂಬರುವ ಸಿನಿಮಾಗಳಲ್ಲಿ ನಾನು ನಿಮ್ಮನ್ನು ಮತ್ತಷ್ಟುರಂಜಿಸುತ್ತೇನೆ ಎಂಬ ಭರವಸೆಯನ್ನು ಕೊಡುತ್ತೇನೆ -ಹರಿಪ್ರಿಯಾ

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹೇಳುವ ಕತೆ, ಮಾಡುವ ಕತೆ ಬದಲಾಗುತ್ತಾ ಇರುತ್ತದೆ. ಅಭಿಮಾನಿಗಳು ತಮ್ಮ ಪ್ರೀತಿಯ ನಟರಿಗೆ ಹೀಗೆ ತಕರಾರು ಮಾಡುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆ ವಿಲನ್‌ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಪಾತ್ರಕ್ಕೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ ಅಂತ ಅಭಿಮಾನಿಗಳು ರೊಚ್ಚಿಗೆದ್ದಾಗ, ಶಿವಣ್ಣ ನಿರ್ದೇಶಕರ ಪರವಾಗಿಯೂ ಚಿತ್ರದ ಪರವಾಗಿಯೂ ನಿಂತಿದ್ದರು. ಅದಕ್ಕೂ ಮುಂಚೆ ದಿಗ್ಗಜರು ಚಿತ್ರದಲ್ಲಿ ವಿಷ್ಣುವರ್ಧನ್‌- ಅಂಬರೀಷ್‌ ಜೊತೆಗಿನ ದೃಶ್ಯಗಳಲ್ಲಿ ವಿಷ್ಣುವರ್ಧನ್‌ ಅವರಿಗೆ ಅವಮಾನವಾಗುವ ಸನ್ನಿವೇಶಗಳಿವೆ ಎಂದು ಅಭಿಮಾನಿಗಳೇ ತಕರಾರು ತೆಗೆದಾಗ, ಆ ದೃಶ್ಯವನ್ನು ವಿಷ್ಣುವರ್ಧನ್‌ ಸಮರ್ಥಿಸಿಕೊಂಡಿದ್ದರು. ಅನಂತ್‌ನಾಗ್‌ ಕೂಡ ಪ್ಲಸ್‌ ಚಿತ್ರದ ಪಾತ್ರದ ಬಗ್ಗೆ ಚಕಾರ ಎತ್ತಿರಲಿಲ್ಲ. ಇತ್ತೀಚೆಗೆ ಬಂದ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರ ರೀಮೇಕ್‌ ಎಂಬುದು ನಂತರ ಗೊತ್ತಾದಾಗಲೂ ಸಿನಿಮಾ ಚಿತ್ರಮಂದಿರದಿಂದ ಹೊರಗೆ ಹೋಗುವ ತನಕ ಮೌನವಾಗಿದ್ದರು.

‘ಸೂಜಿದಾರ’ ನಮ್ದು, ನೇಯ್ಗೆ ನಿಮ್ದು!

ಆದರೆ ಹರಿಪ್ರಿಯ ಓಡುತ್ತಿರುವ ಚಿತ್ರದ ಹೊಟ್ಟೆಗೆ ಹೊಡೆದಿದ್ದಾರೆ. ನನಗೆ ಹೇಳಿದ ಕತೆಯೊಂದು ಮಾಡಿದ ಕತೆಯೊಂದು ಎಂದು ದೂರಿದ್ದಾರೆ. ಇದು ನಿರ್ದೇಶಕರನ್ನೂ ನಿರ್ಮಾಪಕರನ್ನೂ ಪೇಚಿಗೆ ಸಿಲುಕಿಸಿದೆ. ಲೇಖಕನೇ ತನ್ನ ಪುಸ್ತಕ ಓದಬೇಡಿ ಎಂದು ಹೇಳಿದರೆ ಆ ಪುಸ್ತಕವನ್ನು ಯಾರಾದರೂ ಕೊಳ್ಳುತ್ತಾರೆ. ಹಾಗೆಯೇ ನಟಿಯೇ ತನ್ನ ಚಿತ್ರ ಚೆನ್ನಾಗಿಲ್ಲ ಎಂದು ತೀರ್ಪು ಕೊಟ್ಟರೆ ಅದು ತನ್ನನ್ನೂ ಸೇರಿದಂತೆ ಚಿತ್ರಕ್ಕೆ ಮಾಡುವ ಅಪಚಾರವೆಂದೇ ಚಿತ್ರರಂಗ ಹೇಳುತ್ತಿದೆ.

ಇದೀಗ ಚಿತ್ರದ ನಿರ್ದೇಶಕರು ಹರಿಪ್ರಿಯಾ ವಿರುದ್ಧ ದೂರು ನೀಡಲು ವಾಣಿಜ್ಯ ಮಂಡಳಿಯ ಮೆಟ್ಟಿಲು ಏರಿದ್ದಾರೆ. ಅದೇನೇ ಆದರೂ ಚಿತ್ರಕ್ಕೆ ಆದ ನಷ್ಟಸರಿಹೋಗುವುದು ಕಷ್ಟ.