ಮುಂಬೈ :  ಶಾಹಿದ್ ಕಪೂರ್ ಹಾಗೂ ಕಿಯಾರ ಅಡ್ವಾಣಿ ಅಭಿನಯದ ಕಬೀರ್ ಸಿಂಗ್ ಚಿತ್ರೀಕರಣದ ವೇಳೆ ದುರಂತವೊಂದು ಸಂಭವಿಸಿದ್ದು,  ಸೆಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವರು ಜನರೇಟರ್ ಗೆ ಸಿಲುಕಿ ಮೃತಪಟ್ಟಿದ್ದಾರೆ. 

ವಿದ್ಯುತ್ ಜನರೇಟರ್ ಆಪರೇಟ್ ಮಾಡುತ್ತಿದ್ದ ವೇಳೆ ಅದರ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದರೆ ಅಷ್ಟರಲ್ಲೇ ಅವರು ಮೃತರಾಗಿದ್ದಾಗಿ ವೈದ್ಯರು ಘೋಷಿಸಿದರು. 

ಮುಸ್ಸೋರಿಯ ಫೈವ್ ಸ್ಟಾರ್  ಹೋಟೆಲ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. 

ರಾಮು ಎಂಬ ವ್ಯಕ್ತಿ ಮಫ್ಲರ್ ಧರಿಸಿಕೊಂಡಿದ್ದು, ಈ ವೇಳೆ ಜನರೇಟರ್ ನ ಆಯಿಲ್ ಚೆಕ್ ಮಾಡುವಾಗ ಚಕ್ರಕ್ಕೆ ಸಿಲುಕಿದ್ದಾರೆ. ಈ ವೇಳೆ ತಕ್ಷಣ ಜನರೇಟರ್ ಚಾಲನೆ ನಿಲ್ಲಿಸಿ ಅವರನ್ನು ಡೆಹ್ರಾಡೂನ್ ನ  ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.  ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. 

ಆದರೆ ಇಲ್ಲಿನ ಹೋಟೆಲ್ ಸಿಬ್ಬಂದಿ ಮಾತ್ರ ತಮ್ಮ ಹೋಟೆಲ್ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆದಿಲ್ಲ ಎಂದು ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದೆ. 

ಆದರೆ ಚಿತ್ರತಂಡ ಈ ಬಗ್ಗೆ ಸಿಬ್ಬಂದಿ ಸಾವಿಗೆ  ಸಂತಾಪ ವ್ಯಕ್ತಪಡಿಸಿದ್ದು, ಆತನ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಹೇಳಿದೆ.