ಬೆಂಗಳೂರು (ಜ. 12): ಕ್ರೇಜಿಸ್ಟಾರ್ ರವಿಚಂದ್ರನ್ ಸ್ಯಾಂಡಲ್ ವುಡ್ ನಲ್ಲಿ ದಿ ಶೋ ಮ್ಯಾನ್ ಎಂದೇ ಫೇಮಸ್. ’ಪ್ರೇಮಲೋಕ’ ವನ್ನೇ ಧರೆಗಿಳಿಸುವ ಮೂಲಕ ಚಿತ್ರರಂಗದಲ್ಲೇ ಒಂದು ಟ್ರೆಂಡ್ ಹುಟ್ಟು ಹಾಕಿದವರು. ಚಲನ ಚಿತ್ರಗಳಿಗೆ , ಹಾಡಿಗೆ ರೊಮ್ಯಾಂಟಿಕ್ ಟಚ್ ನೀಡಿದ್ದಾರೆ.  ರವಿಚಂದ್ರನ್, ಹಂಸಲೇಖ ಹಾಗೂ ಎಸ್ ಪಿಬಿ ಕಾಂಬಿನೇಶನ್ ಅಂದ್ರೆ ಅದು ಸೂಪರ್ ಹಿಟ್ ಅಂತಾನೇ ಅರ್ಥ. 

ಸಂಗೀತದಿಂದ ಹಿಟ್ ಎನಿಸಿಕೊಂಡ ರವಿ ಚಂದ್ರನ್ ರ 5 ಚಿತ್ರಗಳು 

ಪ್ರೇಮಲೋಕ 

ರವಿಚಂದ್ರನ್ ಸಿನಿ ಕರಿಯರ್ ನಲ್ಲೇ ಪ್ರೇಮಲೋಕ ಭಾರೀ ಸಕ್ಸಸ್ ತಂದು ಕೊಟ್ಟಚಿತ್ರ. ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಬಾರಿಗೆ ಹೊರ ಹೊಮ್ಮಿದರು. ಬಾಲಿವುಡ್ ಚೆಲುವೆ ಜೂಹಿ ಚಾವ್ಲಾರನ್ನು ಕನ್ನಡಕ್ಕೆ ತಂದರು. ನಿಂಬೆ ಹಣ್ಣಿನಂತ ಹುಡುಗಿ ಜೊತೆ ಪ್ರೇಮಲೋಕ ಸುತ್ತಿದರು. ಚೆಲುವೆ ಒಂದು ಕೇಳ್ತೀನಿ ಇಲ್ಲ ಅನ್ನದೇ ಕೊಡ್ತೀಯಾ ಎಂದು ಹಿಂದೆ ಹಿಂದೆ ಸುತ್ತಿದ್ರು. ಗಂಗೂ ಬೈಕು ಕಲಿಸಿ ಕೊಡು ನಂಗೂ ಎಂದು ಗೋಗರೆದರು.  ಹೊಸ ಟ್ರೆಂಡ್ ಶುರು ಮಾಡಿದ್ರು. ಇನ್ನು ಹಂಸಲೇಖ ಸಂಗೀತ ನೀಡಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್. ಗೆಳೆಯರೇ, ನನ್ನ ಗೆಳೆತಿಯರೇ.... ಪ್ರೇಮಲೋಕದಿಂದ ಬಂದ....ಹಾಡುಗಳು ಇಂದಿಗೂ ಫೇಮಸ್. 

ಕಿಂದರಿ ಜೋಗಿ 

ಈ ಚಿತ್ರ ಕ್ರೇಜಿಸ್ಟಾರನ್ನು ಇನ್ನಷ್ಟು ಎತ್ತರಕ್ಕೇರಿಸಿತು. ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ರವಿಚಂದ್ರನ್. ಗಂಗೇ ಬಾರೇ..ತುಂಗೆ ಬಾರೇ,,ಬಾರೇ ನೀರೇ ಎಂದು ಜೂಹಿಯನ್ನು ಕರೆದರು. ಕೊಟ್ಟಳೋ...ಕೊಟ್ಟಳೋ ಮುದ್ದು ಮನಸ್ಸು ಕೊಟ್ಟಳೋ ಎಂದು ಜೂಹಿ ಚಾವ್ಲಾ ಜೊತೆ ಮರ ಸುತ್ತಿದರು.  ಹಂಸಲೇಖ ಕಂಪೋಸ್ ಮಾಡಿರುವ ಹಾಡಿಗೆ ಜಾನಕಿ, ಎಸ್ಪಿಬಿ ದನಿ ನೀಡಿದ್ದಾರೆ. ಈ ಚಿತ್ರವೂ ಭಾರೀ ಸದ್ದು ಮಾಡಿತ್ತು. 

ರಾಮಚಾರಿ 

ಇದು ಕ್ರೇಜಿಸ್ಟಾರ್ ಮರೆಯಲಾಗದ ಚಿತ್ರ. ಬಹುಶಃ ಈ ಚಿತ್ರವನ್ನು ನೋಡಿಲ್ಲ ಎನ್ನುವವರೇ ಕಡಿಮೆ. ಈ ಚಿತ್ರದ ಹಾಡು, ಕಥೆ, ಅಭಿನಯ ಎಲ್ಲವೂ ಅದ್ಭುತ. ರವಿಚಂದ್ರನ್, ಮಾಲಾಶ್ರೀ ಕಾಂಬಿನೇಶನ್ ಸೂಪರ್ ಹಿಟ್ ಆಯ್ತು. ಎಂದಿನಂತೆ ಈ ಚಿತ್ರದ ಹಾಡುಗಳೂ ಹಂಸಲೇಖ ಲೇಖನಿಯ ಕೊಡುಗೆ. ಯಾರಿವಳು... ಯಾರಿವಳು.. ಎನ್ನುತ್ತಲೇ ಲೈನ್ ಹೊಡೆದ್ರು. ರಾಮಾಚಾರಿ ಹಾಡುವ...ಲಾಲಿ ಹಾಡು ಕೇಳವ ಎನ್ನುತ್ತಾ ಎಮೋಶನಲ್ ಆದ್ರು.  ನಮ್ಮೂರ ಯುವರಾಣಿ ಕಲ್ಯಾಣವಂತೆ ಎನ್ನುತ್ತಾ ವಿಶ್ ಮಾಡಿದ್ರು.  ಹೀಗೆ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಅದ್ಭುತ. ಈಗಲೂ ಈ ಚಿತ್ರ ಎವ್ ಗ್ರೀನ್. ಬುರುಡೇ ಬುರುಡೇ ಎನ್ನುತ್ತಾ ಬುರುಡೇ ರಿಪೇರಿ ಮಾಡಿದ್ರು. 

ರಣಧೀರ 

ಪ್ರೇಮಲೋಕದಲ್ಲಿ ಕಾಲೇಜ್ ಬಾಯ್ ಆಗಿ ಕಾಣಿಸಿಕೊಂಡ ಕ್ರೇಜಿಸ್ಟಾರ್ ’ರಣಧೀರ’ ಆಗುವಾಗ ಫುಲ್ ರೆಬಲ್ ಆಗಿದ್ದರು. ಇವರಿಗೆ ಖುಷ್ಬು ನಾಯಕಿಯಾಗಿ ಸಾಥ್ ನೀಡಿದ್ದಾರೆ. ಈ ಚಿತ್ರದ ಪ್ರೀತಿ ಮಾಡಬಾರದು...ಮಾಡಿದರೆ ಜಗಕೆ ಹೆದರಬಾರದು... ಹಾಡು ಪ್ರೇಮಿಗಳ ಪಾಲಿಗೆ ನ್ಯಾಷನಲ್ ಆ್ಯಂಥಮ್ ಆಗಿತ್ತು. 

ಪ್ರಿತ್ಸೋದು ತಪ್ಪಾ.

ಕ್ರೇಜಿಸ್ಟಾರ್ ಕ್ರೇಜ್ ಗಳೇ ಹಾಗೆ. ಬಾಲಿವುಡ್ ಕ್ವೀನ್ ಶಿಲ್ಪಾ ಶೆಟ್ಟಿಯನ್ನು ಕನ್ನಡಕ್ಕೆ ತಂದರು. ’ಪ್ರಿತ್ಸೋದು ತಪ್ಪಾ’ ಎಂದು ಕೇಳಿದರು. ಬಂಗಾರದಿಂದ ಬಣ್ಣಾನ ತೆಗೆದ್ರು. ಸೋನೆ ಮಳೆ ಸುರಿಸಿದ್ರು. ನಾದಬ್ರಹ್ಮ ಹಂಸಲೇಖ ಅದ್ಭುತ ಸಾಹಿತ್ಯ, ಸಂಗೀತ ನೀಡಿದ್ದಾರೆ. 

ಹಠವಾದಿ 

ಕ್ರೇಜಿಸ್ಟಾರ್ ಸಿನಿ ಜರ್ನಿಯಲ್ಲಿ  ಇದೊಂದು ಸೂಪರ್ ಡೂಪರ್ ಹಿಟ್ ಚಿತ್ರ. ಹಠವಾದಿಯಾಗಿ ಬದುಕನ್ನು ಎದುರಿಸುತ್ತಾರೆ. ಆಟ ಹುಡುಗಾಟವೋ ಭಗವಂತನಾಟವೋ ಎಂದು ಆ ಭಗವಂತನನ್ನು ನೆನೆಸಿಕೊಳ್ಳುತ್ತಾರೆ. ಯಾರು... ಯಾರು... ಯಾರಿಗಾಗಿ ಇಲ್ಲ ಯಾರು.... ಎಂದು ಜೀವನ ಸತ್ಯವನ್ನು ಬಿಚ್ಚಿಡುತ್ತಾರೆ. ಹಂಸಲೇಖ ಸಾಹಿತ್ಯ, ಸಂಗೀತಕ್ಕೆ ಸಲಾಂ ಎನ್ನಲೇಬೇಕು.