ಆದ್ರೆ ಅದು ಕೊನೆಗೂ ಈಡೇರದೆ ಉಳಿಯಿತ್ತಲ್ಲ ಅನ್ನೋದೇ ನನ್ನೊಳಗಿನ ನೋವು...!

- ಹೀಗೆಂದು ತಮ್ಮ ಮನದಾಳದ ನೋವು ವ್ಯಕ್ತಪಡಿಸಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಶುಕ್ರವಾರ ನಗರದಲ್ಲಿ ಅಂಬರೀಷ್ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಭೆ ಆಯೋಜಿಸಿತ್ತು. ಇಡೀ ಚಿತ್ರೋದ್ಯಮವೇ ಅಲ್ಲಿ ಸೇರಿತ್ತು. ಹಾಗೆಯೇ ರಾಜಕೀಯ ಗಣ್ಯರು ಭಾಗಹಿಸಿದ್ದರು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಅಚ್ಚರಿಯ ಸಂಗತಿಯೊಂದನ್ನು ಬಿಚ್ಚಿಟ್ಟರು. ಅದು ಅಂಬರೀಷ್ ಮತ್ತು ನಿಖಿಲ್ ಕಾಂಬಿನೇಷನಲ್ಲಿ ಬರಬೇಕಿದ್ದ ಸಿನಿಮಾ ಕುರಿತು. ಅದುವರೆಗೂ ಅವರು ಎಲ್ಲಿಯೂ ಆ ಸಂಗತಿಯನ್ನು ಹೇಳಿಕೊಂಡಿರಲಿಲ್ಲ. ಆದರೆ, ನೋವಿನಿಂದಲೇ ಅಲ್ಲಿ ತೆರೆದಿಟ್ಟರು.

‘ರಾಜಕೀಯದಲ್ಲಿದ್ದರೂ ಸಿನಿಮಾ ನನ್ನ ಆಸಕ್ತಿಯ ಕ್ಷೇತ್ರ. ಅಲ್ಲಿಂದಲೇ ನನ್ನ ಸಾರ್ವಜನಿಕ ಜರ್ನಿ ಶುರುವಾಗಿದ್ದು. ಆ ನಂಟಿನ ಕಾರಣಕ್ಕಾಗಿಯೇ ಅಂಬರೀಷ್ ಹಾಗೂ ನಿಖಿಲ್ ಸೇರಿಸಿ ಒಂದು ಸಿನಿಮಾ
 ಮಾಡ್ಬೇಕು ಅಂದುಕೊಂಡಿದ್ದೆ. ಅದಕ್ಕಾಗಿಯೇ ತೆಲುಗಿನ ‘ರೆಬೆಲ್’ ಸಿನಿಮಾದ ರಿಮೇಕ್ ಹಕ್ಕು ಖರೀದಿಸಿದ್ದೆ. ಆ ಚಿತ್ರದಲ್ಲಿ ಅಂಬರೀಷ್ ಅವರದ್ದು ತಂದೆಯ ಪಾತ್ರ. ನಿಖಿಲ್ ಅವರ ಮಗ. ಅವರಿಬ್ಬರು ಹಾಗೆ ಕಾಣಿಸಿಕೊಂಡರೆ ಚೆನ್ನಾಗಿರುತ್ತೆ ಎನ್ನುವುದು ನನ್ನ ಲೆಕ್ಕಾಚಾರ. ಜತೆಗೆ ನಿಖಿಲ್ ಅವರಿಗೂ ಅಂಬರೀಷ್ ಆಶೀರ್ವಾದ ಸಿಕ್ಕಂತಾಗುತ್ತೆ ಎಂದು ಕೊಂಡಿದ್ದೆ. ಆದರೆ ರಾಜಕೀಯ ಕಾರಣದಿಂದ ಅದು ಅಂದುಕೊಂಡಂತೆ ನಿರ್ಮಾಣ ಮಾಡ್ಲಿಕ್ಕೆ ಆಗಲಿಲ್ಲ. ಈಗ ಅದೇ ನೋವು ಕಾಡುತ್ತಿದೆ’ ಎಂದು ಕುಮಾರಸ್ವಾಮಿ ಭಾವುಕರಾದರು.