ಆ ವಿವಾದದಿಂದಾಗಿ ಶ್ರೀ ಮುರುಳಿ ನಟನೆಯ 'ಚಂದ್ರ ಚಕೋರಿ' ಚಿತ್ರಕ್ಕೆ ಎದುರಾಗಿತ್ತು ಕಂಟಕ. ಆದರೂ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ 500 ದಿನ ಪ್ರದರ್ಶನಗೊಂಡು ಇತಿಹಾಸ ಸೃಷ್ಟಿಸಿತು. ಬಂಗಾರದ ಮನುಷ್ಯ ಚಿತ್ರದ ನಂತರ ಅತಿ ಹೆಚ್ಚು ದಿನ ಓಡಿದ ಹೆಗ್ಗಳಿಕೆಗೆ ಇದು ಪಾತ್ರವಾಯಿತು.

ಅಂದು ಚಿಂತ್ರರಂಗದಲ್ಲಿ ಭುಗಿಲೆದ್ದಿದ್ದ ಆ ವಿವಾದವೇ ಶ್ರೀ ಮುರುಳಿ ಚಂದ್ರ ಚಕೋರಿ ಸಿನೆಮಾಗೆ ಹೇಗೆ ವರವಾಯ್ತು ಎನ್ನುವುದಕ್ಕೆ ನಿರ್ದೇಶಕ ಎಸ್‌.ನಾರಾಯಣ ಹಂಚಿಕೊಂಡ ಮಾತು ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಅಷ್ಟೇ ಅಲ್ಲ ಆ ವಿವಾದವೇ ಚಿತ್ರಕ್ಕೆ ಹೇಗೆ ವರವಾಯ್ತು? ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಆಗ ನಡೆದ ವಿವಾದವೇನು?

ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಪ್ರದರ್ಶಕರು ಹಾಗೂ ನಿರ್ಮಾಪಕರ ನಡುವೆ 'ಸರ್ವೀಸ್ ಟ್ಯಾಕ್ಸ್' ಕುರಿತು ದೊಡ್ಡ ಮಟ್ಟದ ವಿವಾದ ನಡೆದಿತ್ತು. ಈ ಗೊಂದಲದಿಂದಾಗಿ ಚಿತ್ರಕ್ಕೆ ಯಾವುದೇ ಆರಂಭಿಕ ಪ್ರಚಾರ ಅಥವಾ ಪಬ್ಲಿಸಿಟಿ ಸಿಗಲಿಲ್ಲ. ನಿರ್ಮಾಪಕ ಹೆಚ್.ಡಿ. ಕುಮಾರಸ್ವಾಮಿ ಅವರೂ ಕೂಡ ಪ್ರಚಾರಕ್ಕಾಗಿ ಹಣ ಅಥವಾ ಸಮಯ ವ್ಯಯಿಸಲು ಸಾಧ್ಯವಾಗಲಿಲ್ಲ. ಆದರೆ ಮುಂದೆ ಆಗಿದ್ದೇ ಬೇರೆ.

ಪ್ರಚಾರದ ಯುಗಕ್ಕೆ ಕಪಾಳಮೋಕ್ಷ!

ಸಿನಿಮಾ ಗೆಲ್ಲಲು ಕೋಟಿ ಕೋಟಿ ಸುರಿದು ಹೈಪ್ ಕ್ರಿಯೇಟ್ ಮಾಡಬೇಕಾಗಿಲ್ಲ, ಕೇವಲ ಕಂಟೆಂಟ್ ಚೆನ್ನಾಗಿದ್ದರೆ ಸಾಕು ಎಂಬುದನ್ನು 'ಚಂದ್ರ ಚಕೋರಿ' ಸಾಬೀತುಪಡಿಸಿತು . ಯಾವುದೇ ಜಾಹೀರಾತು ಇಲ್ಲದಿದ್ದರೂ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು. ಆ ಕಥೆ, ಹಾಡುಗಳು ಬೇಗನೇ ಪ್ರಕ್ಷಕನನ್ನು ಕನೆಕ್ಟ್‌ ಆದವು ಎಂದು ಎಸ್‌.ನಾರಾಯಣ್‌ ಹೇಳಿದ್ದಾರೆ.

ವರವಾದ 'ಮೌತ್ ಟಾಕ್' ಸುನಾಮಿ!

ಪ್ರಚಾರದ ಕೊರತೆಯನ್ನು ಪ್ರೇಕ್ಷಕರೇ ನೀಗಿಸಿದರು. ಸಿನಿಮಾ ನೋಡಿದವರು ಒಬ್ಬರಿಂದ ಒಬ್ಬರಿಗೆ ಹಂಚಿಕೊಂಡ ಅದ್ಭುತ ವಿಮರ್ಶೆಗಳಿಂದಾಗಿ, ಚಿತ್ರಮಂದಿರಗಳತ್ತ ಜನಸಾಗರವೇ ಹರಿದುಬರಲು ಪ್ರಾರಂಭಿಸಿತು. ಅಲ್ಲದೇ ಚಿಂತ್ರರಂಗದಲ್ಲಿ ಬಂಗಾರದ ಮನುಷ್ಯ ಚಿತ್ರದ ನಂತರ ಲಾಂಗ್‌ ರನ್‌ ಆದ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಬೆಳಗಾವಿಯಲ್ಲಿ ಸೃಷ್ಟಿಯಾದ ಇತಿಹಾಸ!

ಈ ವಿವಾದ ಹಾಗೂ ಶೂನ್ಯ ಪಬ್ಲಿಸಿಟಿ ನಡುವೆಯೂ ಬೆಳಗಾವಿಯ 'ಪ್ರಕಾಶ್' ಥಿಯೇಟರ್‌ನಲ್ಲಿ ಸಿನಿಮಾ ದಿನಕ್ಕೆ 4 ಪ್ರದರ್ಶನಗಳಂತೆ ಬರೋಬ್ಬರಿ 500 ದಿನಗಳ ಕಾಲ ಹೌಸ್‌ಫುಲ್ ಆಗಿ ಓಡಿ ಐತಿಹಾಸಿಕ ದಾಖಲೆ ಬರೆಯಿತು. ಡಾ.ರಾಜ್‌ಕುಮಾರ್ ಅವರ 'ಬಂಗಾರದ ಮನುಷ್ಯ' ಚಿತ್ರದ ನಂತರ ಈ ಮಟ್ಟದ ಲಾಂಗ್ ರನ್ ಕಂಡ ಅಪರೂಪದ ಹೆಗ್ಗಳಿಕೆ ಇದಕ್ಕೆ ಸಿಕ್ಕಿತು.

43 ವಾರಗಳಿಗೂ ಹೆಚ್ಚು ಕಾಲ ಓಟ!

ಚಿತ್ರರಂಗದಲ್ಲಿ ವಿವಾದಗಳು ಎದ್ದಾಗ ಸಿನಿಮಾಗಳು ನೆಲಕಚ್ಚುವುದು ಸಾಮಾನ್ಯ. ಆದರೆ 'ಚಂದ್ರ ಚಕೋರಿ' ವಿವಾದದ ನಡುವೆಯೂ ಕರ್ನಾಟಕದಾದ್ಯಂತ 43 ವಾರಗಳಿಗೂ ಹೆಚ್ಚು ಕಾಲ ಸತತವಾಗಿ ಪ್ರದರ್ಶನ ಕಂಡು, ರಜತ ಮಹೋತ್ಸವ (Silver Jubilee) ಆಚರಿಸಿ ಇಡೀ ಗಾಂಧಿನಗರವೇ ಬೆರಗಾಗುವಂತೆ ಮಾಡಿತು. ಯಾವುದೇ ಪ್ರಚಾರದ ಬ್ಯಾಕಪ್ ಇಲ್ಲದೆ ಪ್ರೇಕ್ಷಕರು ಚಿತ್ರವನ್ನು ಅಷ್ಟೊಂದು ಎತ್ತರಕ್ಕೆ ಬೆಳೆಸಿದ್ದನ್ನು ನೋಡಿ ಸ್ವತಃ ನಿರ್ದೇಶಕ ಎಸ್. ನಾರಾಯಣ್ ಅವರು ರೋಮಾಂಚನಗೊಂಡಿದ್ದರು.