ಬೆಂಗಳೂರು (ಜ. 02): ದರ್ಶನ್ ನಟನೆಯ ಯಾವ ಸಿನಿಮಾ ಈ ವರ್ಷ ಮೊದಲು ಬರಲಿದೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಮೂರು ಚಿತ್ರಗಳ ಪೈಕಿ ‘ಯಜಮಾನ’ ಮೊದಲು ತೆರೆ ಕಾಣಲಿದೆ. ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಿಸುತ್ತಿರುವ ‘ಯಜಮಾನ’ ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ಇತ್ತೀಚೆಗೆ ಮುಗಿದಿದೆ.

ಮೂರು ದಿನಗಳ ಹಾಡಿನ ಚಿತ್ರೀಕರಣದ ಸೆಟ್‌ನಲ್ಲಿ ಹೊಸ ವರ್ಷವನ್ನು ಆಚರಿಸಿಕೊಂಡಿದ್ದಾರೆ ನಟ ದರ್ಶನ್. ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ‘ಆಗೋಯ್ತು ಮರ್ಯಾದೆ ಸಸ್ತಾ ಮಾಲು’ ಎಂದು ಹಾಡಿಗೆ ದರ್ಶನ್
ಮಜಾ ಸ್ಟೆಪ್ಸ್ ಹಾಕಿದ್ದಾರೆ. ಹಾಡಿನೊಂದಿಗೆ ಚಿತ್ರೀಕರಣ ಮುಗಿಸಿಕೊಂಡಿರುವ ‘ಯಜಮಾನ’ ಸದ್ಯದಲ್ಲೇ ಸೆನ್ಸಾರ್ ಆಗಲಿದೆ.

ಚಿತ್ರತಂಡದ ಪ್ರಕಾರ ಫೆಬ್ರವರಿಯಲ್ಲಿ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದೆ. ಆದರೆ, ಯಾವ ದಿನಾಂಕ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡುತ್ತಿಲ್ಲ. ನಾಗಣ್ಣ ನಿರ್ದೇಶನದ ‘ಕುರುಕ್ಷೇತ್ರ’ ಚಿತ್ರಕ್ಕೆ ಸಾಕಷ್ಟು ತಾಂತ್ರಿಕ ಕೆಲಸಗಳು ನಡೆಯಬೇಕಿದೆ. ‘ಒಡೆಯ’ ಚಿತ್ರ ಇನ್ನೂ ಶೂಟಿಂಗ್ ಮೈದಾನದಲ್ಲಿದೆ.

‘ಕುರುಕ್ಷೇತ್ರ’ ಚಿತ್ರವನ್ನು ಏಪ್ರಿಲ್ ತಿಂಗಳಲ್ಲಿ ತೆರೆಗೆ ತರುವುದಕ್ಕೆ ನಿರ್ಮಾಪಕ ಮುನಿರತ್ನ ಅವರು ಪ್ಲಾನ್ ಮಾಡಿಕೊಂಡಿದ್ದಾರೆ. ಅದರ ನಂತರ ‘ಒಡೆಯ’ ಸಿನಿಮಾ ತೆರೆಗೆ ಬರಲಿದೆ. ಒಟ್ಟಾರೆ 2019 ರಲ್ಲಿ ದರ್ಶನ್ ಅಭಿನಯದ ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ.