ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶದ ಜನರ ನಡುವೆ ಸಮಾನವಾದ ಪ್ರೀತಿಯಿದೆ. ಆದರೆ, ರಾಜಕಾರಣದ ಆಟದಿಂದ ದ್ವೇಷ ಬೆಳೆದುಕೊಂಡಿದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟ ಸನ್ನಿ ಡಿಯೋಲ್‌ಗೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಮಾಜಿ ಬ್ರಿಗೇಡಿಯರ್ ಚಳಿ ಬಿಡಿಸಿದ್ದಾರೆ.
ನವದೆಹಲಿ (ಜು.27): ಭಾರತ ಹಾಗೂ ಪಾಕಿಸ್ತಾನದಲ್ಲಿರುವ ನಾಗರೀಕರು ಪರಸ್ಪರ ಪ್ರೀತಿ ಮತ್ತು ಶಾಂತಿಯನ್ನು ಮಾತ್ರವೇ ಬಯಸುತ್ತಾರೆ. ಆದರೆ, ರಾಜಕೀಯ ಕಾರಣದಿಂದಾಗಿ ಎರಡೂ ದೇಶಗಳ ನಡುವೆ ಈಗ ದ್ವೇಷ ಜನ್ಮತಾಳಿದೆ ಎಂದು ಗುರ್ದಾಸ್‌ಪುರದ ಸಂಸದರೂ ಆಗಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಹೇಳಿದ್ದರು. ಅವರ ಹೇಳಿಕೆಗೆ ಮಾಜಿ ಬ್ರಿಗೇಡಿಯರ್ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಸೈನಿಕ ಹರ್ದೀಪ್ ಸಿಂಗ್ ಸೋಹಿ ಕಿಡಿಕಾರಿದ್ದಾರೆ. ಟ್ವಿಟರ್‌ನಲ್ಲಿ ಸನ್ನಿ ಡಿಯೋಲ್ ಅವರ ಹೇಳಿಕೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಸೋಹಿ, ಪಾಕಿಸ್ತಾನದಿಂದ ಬಂದ ಬುಲೆಟ್ ಸನ್ನಿ ಡಿಯೋಲ್ ಎದೆಗೆ ಹೊಕ್ಕಿದ್ದರೆ ಅವರಿಂದ ಇಂಥ ಮಾತು ಬರುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ. ತಮ್ಮ ಹೊಸ ಚಿತ್ರ ಗದರ್-2ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡುವ ವೇಳೆ ಸನ್ನಿ ಡಿಯೋಲ್ ಈ ಹೇಳಿಕೆ ನೀಡಿದ್ದರು. 'ಕ್ರಶ್ ಇಂಡಿಯಾ ಚಳವಳಿ'ಯ ನಡುವೆ ಪಾಕಿಸ್ತಾನಕ್ಕೆ ಹೋಗಿ ತನ್ನ ಮಗನನ್ನು ವಾಪಾಸ್ ಭಾರತಕ್ಕೆ ಕರೆತರುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ.
ಈ ಚಿತ್ರ ಇರುವುದೇ ಮಾನವೀಯತೆಯ ಬಗ್ಗೆ. ಇಲ್ಲಿ ಯಾವುದೇ ಜಗಳಗಳು ಇರಬಾರದು. ಎರಡೂ ಕಡೆ ಸಮಾನ ಪ್ರೀತಿ ಇದೆ. ಆದರೆ, ರಾಜಕೀಯದ ಆಟವೇ ಎರಡೂ ಕಡೆಯಿಂದ ದ್ವೇಷ ಹುಟ್ಟಿಸುತ್ತದೆ. ಈ ಚಿತ್ರದಲ್ಲೂ ನೀವು ಅದನ್ನೇ ನೋಡುತ್ತೀರಿ. ಜನರು ನಾವು ಪರಸ್ಪರ ಜಗಳವಾಡುವುದನ್ನು ಬಯಸುವುದಿಲ್ಲ, ಏಕೆಂದರೆ ನಾವು ಒಂದೇ ಭೂಮಿಯಿಂದ ಬಂದವರು ಎಂದು ಸನ್ನಿ ಡಿಯೋಲ್ ಹೇಳಿದ್ದರು.
ಸನ್ನಿ ಡಿಯೋಲ್ ಮಾತಿಗೆ ಟ್ವೀಟ್ ಮಾಡಿ ಕಿಡಿಕಾರಿರುವ ಬ್ರಿಗೇಡಿಯರ್, 'ಪಾಕಿಸ್ತಾನದಿಂದ ಬಂದ ಬುಲೆಟ್ ಅನ್ನು ಸನ್ನಿ ಡಿಯೋಲ್ ತಮ್ಮ ಎದೆಯ ಮೇಲೆ ತೆಗೆದುಕೊಂಡಿಲ್ಲ. ಪಾಕಿಸ್ತಾನದಿಂದ ಶಸ್ತ್ರಸಜ್ಜಿತವಾಗಿ, ತರಬೇತಿ ಹೊಂದಿದವರಾಗಿ, ಪ್ರಾಯೋಜಿತರಾಗಿ ಬಂದ ವ್ಯಕ್ತಿಗಳಿಂದ ಭಯೋತ್ಪಾದನೆಯ ಕಾರಣಕ್ಕಾಗಿ ತನ್ನ ಜೊತೆ ಇದ್ದವರನ್ನು ಈತ ಕಳೆದುಕೊಂಡಿಲ್ಲ. ಎದೆಗೆ ಹೋಗಲಿ, ತನ್ನ ಕಾಲಿಗೆ ಬುಲೆಟ್ ತೆಗೆದುಕೊಂಡ ಬಳಿಕ ಈತ ಪಾಕಿಸ್ತಾನವನ್ನು ಹೊಗಳಿ ಮಾತನಾಡಲಿ ನೋಡೋಣ. ಆಗ ಈತನಿಗೆ ನಾನೇ ಸೆಲ್ಯೂಟ್ ಮಾಡ್ತೇನೆ. ಒಂದು ಚಿತ್ರದ ವಾಣಿಜ್ಯ ಆಸಕ್ತಿಗಳು ವ್ಯಕ್ತಿಯನ್ನು ಕುರುಡನನ್ನಾಗಿ ಮಾಡಬಾರದು' ಎಂದು ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ಕಾಶ್ಮೀರ ಹಾಗೂ ಇಂಡಿಯನ್ ಆರ್ಮಿ ಎನ್ನುವ ಹ್ಯಾಶ್ ಟ್ಯಾಗ್‌ಅನ್ನೂ ಬಳಸಿದ್ದಾರೆ.
