ಚೆನ್ನೈ(ಅ.15): ವೆಸ್ಟ್ ಇಂಡೀಸ್ ಕ್ರಿಕೆಟಿಗರ ಜೊತೆ ಭಾರತೀಯ ನಟಿಯರ ಹೆಸರು ತಳಕು ಹಾಕ್ಕೊಳ್ಳೋದು ಹೊಸತೇನೂ ಅಲ್ಲ. ಆಲ್‌ರೌಂಡರ್ ಡ್ವೇನ್ ಬ್ರಾವೋ ಆ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ದಕ್ಷಿಣ ಭಾರತ ಸ್ಪೈಸಿ ನಟಿ ಜೊತೆಗೆ ಅವರು ರಹಸ್ಯವಾಗಿ ಡಿನ್ನರ್ ಡೇಟಿಂಗ್ ಮುಗಿಸಿದ್ದಾರೆ! ನಟಿ ಶ್ರಿಯಾ ಶರಣ್ ಜೊತೆಗಿನ ಬ್ರಾವೋ ಓಡಾಟ ಇದೀಗ ಕ್ಯಾಮೆರಾಕ್ಕೆ ಸೆರೆಸಿಕ್ಕಿದೆ.

ಮುಂಬೈನ ಹೋಟೆಲ್ಲಿನಲ್ಲಿ ಇಬ್ಬರೂ ಊಟ ಮುಗಿಸಿ ಹೊರಗೆ ಬರುತ್ತಿರುವ ಫೋಟೋಗಳು ಬಹಿರಂಗವಾಗಿವೆ. ಇಬ್ಬರೂ ಒಂದೇ ಬಣ್ಣದ (ಕಪ್ಪು) ಡ್ರೆಸ್ ಧರಿಸಿದ್ದೂ ಇವರ ಗಾಢ ಸ್ನೇಹಕ್ಕೆ ಸಾಕ್ಷಿ ಆಗಿತ್ತು.

ನೇಹಾ ಶರ್ಮಾ ಜೊತೆಗಿನ ‘ತುಮ್ ಬಿನ್ 2’ ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಿರುವ ಬ್ರಾವೋ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್‌ನಲ್ಲಿ ಮೂಡಿಬರುತ್ತಿರುವ ‘ಝಲಕ್ ದಿಖ್ಲಾ ಜಾ 9’ರಲ್ಲಿ ಬ್ರಾವೋ ಅದ್ಭುತವಾಗಿ ಝಲಕ್ ಮೂಡಿಸುತ್ತಿದ್ದಾರೆ. ‘ಮುಂಬೈ ನನಗೆ ಎರಡನೇ ಮನೆ. ಅದರಲ್ಲೂ ಈ ವರ್ಷ ಟ್ರಿನಿಡಾಡ್‌ಗಿಂತ ಹೆಚ್ಚು ಸಮಯ ಕಳೆದಿದ್ದೇ ಮುಂಬೈನಲ್ಲಿ’ ಎಂದು ಟ್ವೀಟ್ ಮಾಡಿರುವ ಬ್ರಾವೋ, ಈ ದೀರ್ಘಾವಯಲ್ಲಿ ಎಷ್ಟು ಸಲ ಶ್ರಿಯಾ ಅವರನ್ನು ಭೇಟಿ ಆಗಿದ್ದಾರೋ ಗೊತ್ತಿಲ್ಲ. ‘ಐಪಿಎಲ್ 4’ರ ವೇಳೆ ಇವರಿಬ್ಬರೂ ಪರಸ್ಪರ ಭೇಟಿ ಆಗಿದ್ದರಂತೆ. ಆದರೆ, ಡಿನ್ನರ್ ಡೇಟಿಂಗ್ ಅಂತೂ ಶ್ರಿಯಾ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿರುವುದು ನಿಜ.