ಐಶ್ವರ್ಯಾ ರೈ ಬಚ್ಚನ್, ಶಾರುಖ್ ಖಾನ್‌ ಸೇರಿದಂತೆ ಬಿ-ಟೌನ್‌ನ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಭಾನುವಾರ ರಾತ್ರಿ ಮುಂಬೈನಲ್ಲಿ ಆಯೋಜಿಸಿದ್ದ ’ಲಕ್ಸ್‌ ಗೋಲ್ಡನ್ ರೋಜ್ ಅವಾರ್ಡ್ಸ್‌’ನಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಐಶ್ವರ್ಯಾ ರೈ ಬಚ್ಚನ್‌ರನ್ನು ’ಟೈಮ್‌ಲೆಸ್‌ ಬ್ಯೂಟಿ ಅವಾರ್ಡ್’ ನೀಡಿ ಗೌರವಿಸಲಾಯಿತು. ಟ್ರೋಫಿ ಗೆದ್ದ ಐಶ್ವರ್ಯಾ ರೈ ರೇಖಾ, ಜೀನತ್ ಅಮಾನ್, ಮಾಧುರಿ ದೀಕ್ಷಿತ್, ಕಾಜೋಲ್‌ರಂತಹ ಗಣ್ಯ ನಟಿಯರಿಗೆ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಸ್ಟೇಜ್ ಮೇಲೆ ಐಶ್ವರ್ಯಾರೊಂದಿಗೆ ಶಾರುಖ್ ಖಾನ್ ಕೂಡಾ ಹಾಜರಿದ್ದರು. ಈ ವೇಳೆ ಮಾತನಾಡಿದ ಶಾರುಖ್ ಖಾನ್ ತಾವು ಕಂಡಿದ್ದ ಕನಸನ್ನು ಬಹಿರಂಗಪಡಿಸಿದ್ದಾರೆ ಅಲ್ಲದೇ ಇದು ಪೂರೈಸಿಲ್ಲ ಎಂಬ ದುಃಖವನ್ನೂ ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಶಾರುಖ್ ಕನಸೇನಾಗಿತ್ತು? ಇಲ್ಲಿದೆ ವಿವರ

ಬಾಲಿವುಡ್ ಬಾದ್ ಷಾ ಶಾರುಖ್ ಹಾಗೂ ನೀಲಿಗಣ್ಣಿನ ಸುಂದರಿ ಐಶ್ವರ್ಯಾ ರೈ 'ಜೋಶ್', ’ದೇವದಾಸ್’ ಹಾಗೂ ’ಮೊಹಬ್ಬತೆಂ’ಯಂತಹ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಆದರೆ ಈ ಮೂರೂ ಸಿನಿಮಾಗಳಲ್ಲೂ ಶಾರುಖ್ ಖಾನ್‌ಗೆ ಐಶ್ವರ್ಯಾ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶ ಸಿಗಲಿಲ್ಲ. ಈ ದುಖಃವನ್ನು ಎಸ್‌ಆರ್‌ಕೆ ಸದ್ಯ ’ಲಕ್ಸ್‌ ಗೋಲ್ಡನ್ ರೋಜ್ ಅವಾರ್ಡ್ಸ್‌’ ವೇದಿಕೆ ಮೇಲೆ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ’ಮೊದಲ ಸಿನಿಮಾ ’ಜೋಶ್’ನಲ್ಲಿ ಐಶ್ವರ್ಯಾ ತಂಗಿಯ ಪಾತ್ರ ಮಾಡಿದ್ದರು. ಎರಡನೇ ಸಿನಿಮಾ ’ದೇವದಾಸ್’ ಸಿನಿಮಾದಲ್ಲಿ ಐಶ್ವರ್ಯ ನನ್ನನ್ನು ಬಿಟ್ಟು ಹೋಗುತ್ತಾರೆ ಹಾಗೂ ಮೂರನೇ ಸಿನಿಮಾ ’ಮೊಹಬ್ಬತೆಂ’ಯಲ್ಲಿ ದೆವ್ವದ ಪಾತ್ರ ಮಾಡಿದ್ದರು. ಆದರೆ ಆಕೆಯೊಂದಿಗೆ ನನಗೆ ಆನ್‌ಸ್ಕ್ರೀನ್‌ನಲ್ಲಿ ರೊಮ್ಯಾನ್ಸ್ ಮಾಡುವ ಅವಕಾಶ ಮಾತ್ರ ಸಿಗಲಿಲ್ಲ. ಈ ವಿಚಾರವಾಗಿ ನನಗೆ ಬಹಳ ಬೇಸರ ಇದೆ' ಎಂದಿದ್ದಾರೆ.

ಐಶ್ವರ್ಯಾ ಹಾಗೂ ಶಾರುಖ್ ಇಬ್ಬರೂ ಬಹಳ ಹಿಂದಿನಿಂದಲೂ ಆತ್ಮೀಯ ಸ್ನೇಹಿತರು. ತಮ್ಮ ಸ್ನೇಹದ ಕುರಿತಾಗಿ ಮಾತನಾಡಿದ ಬಾಲಿವುಡ್ ಬಾದ್‌ಷಾ ’ಈ ಮೊದಲು ನಾವು ಸಿನಿಮಾ ಸೆಟ್‌ನಲ್ಲಿ ಸಿಗುತ್ತಿದ್ದೆವು. ಆದರೀಗ ಮಕ್ಕಳ ಶಾಲೆಯ ಹೊರಗೆ ಭೇಟಿಯಾಗುತ್ತಿದ್ದೇವೆ’ ಎಂದಿದ್ದಾರೆ. ಐಶ್ವರ್ಯಾ ಮಗಳು ಆರಾಧ್ಯ ಹಾಗೂ ಶಾರುಖ್ ಮಗ ಅಬ್ರಾಮ್ ಖಾನ್ ಇಬ್ಬರೂ ಒಂದೇ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರೆ ಎಂಬುವುದು ಗಮನಾರ್ಹ.