ಕನ್ನಡ ಸಿನಿಮಾಗಳ ಕೀರ್ತಿ ಎತರೆತ್ತರ ಏರುತ್ತಿದೆ ಅನ್ನುವುದಕ್ಕೆ ಮತ್ತೊಂದು ಪುರಾವೆ. ಶುದ್ಧಿ ಖ್ಯಾತಿಯ ಆದಶ್‌ರ್‍ ಈಶ್ವರಪ್ಪ ನಿರ್ದೇಶನದ ‘ಭಿನ್ನ’ ಚಿತ್ರದ ಟ್ರೈಲರ್‌ ಅನ್ನು ಬಾಲಿವುಡ್‌ ಸೂಪರ್‌ಸ್ಟಾರ್‌ ಅಮೀರ್‌ ಖಾನ್‌ ನೋಡಿದ್ದಾರೆ. ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇವೆಲ್ಲಾ ಬೆಳವಣಿಗೆಗಳಿಂದ ‘ಶುದ್ಧಿ’ ಚಿತ್ರತಂಡದ ಸಂಭ್ರಮ ಮುಗಿಲುಮುಟ್ಟಿದೆ.

ಇದೆಲ್ಲದರ ಹಿಂದೆ ಒಂದು ಕತೆಯಿದೆ. ಶುದ್ಧಿ ಚಿತ್ರದ ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಗಣೇಶ್‌ ಪಾಪಣ್ಣ ಬಹಳ ಸಮಯದಿಂದ ಅಮೀರ್‌ ಖಾನ್‌ ಭೇಟಿ ಮಾಡುವ ಆಸೆ ಹೊಂದಿದ್ದರು. ಅವರ ಆಸೆಗೆ ತಕ್ಕಂತೆ ಅಮೀರ್‌ ಖಾನ್‌ ಅಪಾಯಿಂಟ್‌ಮೆಂಟ್‌ ಕೊಟ್ಟಿದ್ದಾರೆ.

ಮುಂಬೈನ ಪ್ರಖ್ಯಾತ ಸ್ಟುಡಿಯೋ ಮೆಹಬೂಬ್‌ ಸ್ಟುಡಿಯೋಗೆ ಗಣೇಶ್‌ ಹೋಗಿದ್ದಾಗ ಅಮೀರ್‌ ಖಾನ್‌ ಕನ್ನಡ ಚಿತ್ರರಂಗದ ಕುರಿತು ಮಾತನಾಡಿದ್ದಾರೆ. ಅದೇ ಸಂದರ್ಭದಲ್ಲಿ ‘ಭಿನ್ನ’ ಚಿತ್ರದ ಟ್ರೈಲರ್‌ ನೋಡಿದ್ದಾರೆ. ನೋಡಿ ಖುಷಿಯಾಗಿ ಇದು ಹಾರರ್‌ ಸಿನಿಮಾನಾ ಎಂದು ಕೇಳಿದ್ದಾರೆ.

ಗಣೇಶ್‌ ಪಾಪಣ್ಣ ಏನೋ ಹೇಳಲು ಹೊರಟಾಗ ಅರ್ಧದಲ್ಲೇ ಮಾತು ನಿಲ್ಲಿಸಿ ‘ನೀವೂ ಏನೂ ಹೇಳಬೇಡಿ, ನಾನು ಈ ಸಿನಿಮಾ ನೋಡಬೇಕು’ ಎಂದಾಗ ಗಣೇಶ್‌ ಅವರಿಗೆ ಕಾಲು ಭೂಮಿಯ ಮೇಲಿರಲಿಲ್ಲ. ಅಮೀರ್‌ ಜೊತೆ ಅವರ ಪತ್ನಿ ಕಿರಣ್‌ ರಾವ್‌ ಕೂಡ ಇದ್ದರು. ಅವರೂ ಹ್ಯಾಪಿ ಹ್ಯಾಪಿ. ಕಿರಣ್‌ ಅವರಂತೂ ನೆಟ್‌ಫ್ಲಿಕ್ಸ್‌ನಲ್ಲಿ ‘ಶುದ್ಧಿ’ ಸಿನಿಮಾ ಕೂಡ ನೋಡುತ್ತೇನೆ ಎಂದು ಹೇಳಿದರು ಎನ್ನುತ್ತಾರೆ ಗಣೇಶ್‌.

 

ಫಿಲ್ಮ್‌ ಫೆಸ್ಟಿವಲ್‌ಗಳಲ್ಲಿ ಭಿನ್ನ ಗೆಲುವಿನ ಯಾತ್ರೆ

‘ಭಿನ್ನ’ ಚಿತ್ರವನ್ನು ಜೂನ್‌ ನಂತರ ರಿಲೀಸ್‌ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ಸದ್ಯ ಈ ಸಿನಿಮಾ ಫೆಸ್ಟಿವಲ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಮೂರು ಅಂತಾರಾಷ್ಟಿ್ರಯ ಫಿಲ್ಮ್‌ ಫೆಸ್ಟಿವಲ್‌ಗಳಲ್ಲಿ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ದೆಹಲಿಯಲ್ಲಿ ನಡೆದ ದಾದಾ ಸಾಹೇಬ್‌ ಫಾಲ್ಕೆ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬೆಸ್ಟ್‌ ಸ್ಕ್ರೀನ್‌ಪ್ಲೇ(ವಿಮರ್ಶಕರ ಪ್ರಶಸ್ತಿ), ಇಟಲಿಯಲ್ಲಿ ನಡೆದ ಓನಿರೋಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬೆಸ್ಟ್‌ ಥ್ರಿಲ್ಲರ್‌ ಫಿಲ್ಮ್‌, ಬೆಸ್ಟ್‌ ಡೈರೆಕ್ಟರ್‌ ಪ್ರಶಸ್ತಿ ಸಿಕ್ಕಿದೆ. ಯುರೋಪಿಯನ್‌ ಸಿನಿಮಾಟೋಗ್ರಫಿ ಅವಾರ್ಡ್‌ ಸಂಸ್ಥೆ ಬೆಸ್ಟ್‌ ಫೀಚರ್‌ ಫಿಲ್ಮ್‌ ಪ್ರಶಸ್ತಿ ನೀಡಿದೆ.