ಇಂದ್ರಜಿತ್ ಲಂಕೇಶ್ ಬಾಲಿವುಡ್ ಎಂಬ ಸಮುದ್ರದಲ್ಲಿ ಈಜಾಡಲು ಹೋಗಿ ಯಶಸ್ವಿಯಾಗಿದ್ದಾರೆ. ಅವರ ಮಹತ್ವಾಕಾಂಕ್ಷೆಯ ಹಿಂದಿ ಚಿತ್ರ ‘ಶಕೀಲ’ ಚಿತ್ರೀಕರಣ ಪೂರ್ತಿಯಾಗಿದೆ. ರಿಚಾ ಚಡ್ಡಾ, ಪಂಕಜ್ ತ್ರಿಪಾಠಿ ಅಭಿನಯದ ಖ್ಯಾತ ನಟಿ ಶಕೀಲ ಬಯೋಪಿಕ್ ‘ಶಕೀಲ’, ವಿಶ್ವದ ಪ್ರಖ್ಯಾತ ಚಿತ್ರೋತ್ಸವಗಳಲ್ಲಿ ಒಂದಾದ ಕ್ಯಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣುವ ಸಾಧ್ಯತೆ ಇದೆ.  

ಮಾರ್ಚ್‌ನಲ್ಲಿ ಈ ಚಿತ್ರೋತ್ಸವ ನಡೆಯಲಿದೆ. ಈಗಾಗಲೇ ಇಂದ್ರಜಿತ್ ಕ್ಯಾನ್ಗೆ ಅಪ್ಲಿಕೇಷನ್ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಶೇಷವಾಗಿ ತಮ್ಮ ಚಿತ್ರದ ಕ್ಯಾಲೆಂಡರ್ ಹೊರತಂದಿದ್ದಾರೆ. 

2018ರ ಈ ಕ್ಯಾಲೆಂಡರ್‌ನ ಪುಟಗಳಲ್ಲಿ ಶಕೀಲ ಅವರ ಹಳೆಯ ಸಿನಿಮಾಗಳ ಪೋಸ್ಟರ್‌ಗಳಂತೆ ಕಾಣುವ ಚಿತ್ರಗಳಿವೆ. ಶಕೀಲರಂತೆ ಕಾಣುವ ರಿಚಾ ಚಡ್ಡಾ ಅವರ ಫೋಟೋಗಳೇ ಈ ಕ್ಯಾಲೆಂಡರ್‌ನ ಜೀವಾಳ. ಹಳೆಯ ಪೋಸ್ಟರ್‌ಗಳಲ್ಲಿ ಶಕೀಲ ಇರುವಂತೆ ರಿಚಾ ಚಡ್ಡಾ ಫೋಟೋಶೂಟ್ ಮಾಡಲಾಗಿದೆ. ‘ಶಕೀಲ ಅವರ ಬಯೋಪಿಕ್ ಅನ್ನು ರಿಯಲಿಸ್ಟಿಕ್ ಆಗಿ ಹೇಳಿದ್ದೇವೆ. ಎಲ್ಲಾ ಭಾಷೆಗಳಿಂದಲೂ ಡಬ್ಬಿಂಗ್ ಹಕ್ಕಿಗೆ ಬೇಡಿಕೆ ಬಂದಿದೆ. ಈಗ ನಾವು ಭಿನ್ನವಾಗಿ ನಮ್ಮ ಚಿತ್ರದ ಕ್ಯಾಲೆಂಡರ್ ಹೊರತಂದಿದ್ದೇವೆ. ನಟ, ನಟಿಯರ ಫೋಟೋಶೂಟ್ ಇರುವ ಕ್ಯಾಲೆಂಡರ್ ತರುವುದು ಮಾಮೂಲಿ. ಆದರೆ ಪ್ರತ್ಯೇಕವಾಗಿ ಒಂದು ಚಿತ್ರದ ಕ್ಯಾಲೆಂಡರ್ ತರುವುದು ಇದೇ ಮೊದಲು’ ಎನ್ನುತ್ತಾರೆ ಇಂದ್ರಜಿತ್ ಲಂಕೇಶ್.