ಬಾಲಿವುಡ್ ಸೆಲೆಬ್ರಿಟಿಗಳು ಚಿತ್ರಗಳಲ್ಲಿ ನಟಿಸುವುದಕ್ಕಿಂತ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸೆಡರ್ ಆಗಿಯೇ ಹೆಚ್ಚು ಸಂಪಾದಿಸುತ್ತಾರೆ. ಈ ರೀತಿ ಸಂಪಾದಿಸುವಾಗ ಆದರ್ಶಗಳು ಇರಬೇಕೆಂಬುವುದು ಬಹುಜನರ ನಿರೀಕ್ಷೆ. ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವಂಥ ಉತ್ಪನ್ನಗಳ ಮೇಲೆ ಮೋಹ ಹೆಚ್ಚಿದರೆ....?

ಬಾಲಿವುಡ್ ಸ್ಟಾರ್ಸ್‌ ನಟನೆಗಿಂತ ಬ್ರ್ಯಾಂಡ್ ಅಂಬಾಸಡರ್ ಆಗಿಯೇ ಗಳಿಸುವುದು ಹೆಚ್ಚು. ಅದರಲ್ಲೂ ಗುಟ್ಕಾದಂಥ ಉತ್ಪನ್ನಗಳನ್ನು ಪ್ರಚಾರ ಮಾಡಿಯೂ ದುಡಿಯುತ್ತಾರೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂಥ ಇಂಥ ವಸ್ತುಗಳ ಆ್ಯಡ್‌ನಲ್ಲಿ ತಮ್ಮ ನೆಚ್ಚಿನ ನಟರು ಕಂಡರೆ ಜನರಿಗೆ ಏನೋ ಇರಿಸು ಮುರಿಸು.

'ಕಣ ಕಣದಲ್ಲಿಯೂ ಕೇಸರಿ' ಎಂದು ಪಾನ್ ಮಸಾಲ ಆ್ಯಡ್‌ಗೆ ಅಜಯ್ ದೇವಗನ್ ಬರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ಪಾನ್ ಮಸಾಲ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಅನುಷ್ಕಾ ಶರ್ಮಾ ವಿರುದ್ಧವೂ ಅಪಸ್ವರ ಕೇಳಿ ಬರುತ್ತಿದೆ.

ಲಿಪ್‌ಸ್ಟಿಕ್ ಜಾಹಿರಾತಿನಿಂದ ಗುಟ್ಕಾ ಜಾಹಿರಾತಿಗೆ ಜಂಪ್‌ ಆಗಿರುವ ಅನುಷ್ಕಾ ಇದೀಗ ಎಲ್ಲರ ಟೀಕೆಗೂ ಗುರಿಯಾಗುತ್ತಿದ್ದಾರೆ. ಕಾನೂನು ಪ್ರಕಾರ ಸಿಗರೇಟ್ ಹಾಗೂ ತಂಬಾಕು ಜಾಹಿರಾತು ಪ್ರಸಾರವನ್ನೇ ನಿಷೇಧಿಸಲಾಗಿದೆ. ಅಂಥದ್ರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಗುಟ್ಕಾದ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ಟ್ರೋಲ್ ಆಗುತ್ತಿದ್ದಾರೆ.

View post on Instagram

ಕೆಲವು ದಿನಗಳ ಹಿಂದೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗುಟ್ಕಾ ಜಾಹಿರಾತಿನ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಅದನ್ನು ನೋಡಿದ ಅಭಿಮಾನಿಗಳು 'ಇದರ ಮಾರಾಟದಿಂದ ಎನು ಉಪಯೋಗವಿಲ್ಲ. ನಿಮಗೆ ಕ್ಯಾನ್ಸರ್ ಬರುತ್ತದೆ ಅಷ್ಟೇ..' ಎಂದೇ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ನೆಚ್ಚಿನ ನಟ, ನಟಿಯರು ಇಂಥ ಆರೋಗ್ಯಕ್ಕೆ ಮಾರಕವಾಗುವಂಥ ಆ್ಯಡ್‌ಗಳಲ್ಲಿ ಕಾಣಿಸಿಕೊಳ್ಳುವುದನ್ನು ಸಹಿಸದ ಅಭಿಮಾನಿಗಳು ಕಾಲೆಳೆಯುವುದೇಕೆ ಎಂಬುದನ್ನು ಸೆಲೆಬ್ರಿಟಿಗಳು ಅರ್ಥ ಮಾಡಿಕೊಳ್ಳಬೇಕು. ಗಳಿಕೆಗಿಂತಲೂ ಸಾಮಾಜಿಕ ಹೊಣೆ ಹೊರಬೇಕಾಗುವುದು ಈ ಕಲಾವಿದರ ಆದ್ಯ ಕರ್ತವ್ಯವಾಗಬೇಕು.