ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ರೀಲೀಸ್‌ಗೂ ಮೊದಲು ತನ್ನದೇ ಹವಾ ಸೃಷ್ಟಿಸಿದೆ. ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸಾಗಲಿರುವ ಕನ್ನಡ ಸಿನಿಮಾವು ಎಲ್ಲರನ್ನೂ ಕಾತುರದಿಂದ ಕಾಯುವಂತೆ ಮಾಡಿದೆ. ಸದ್ಯ ಕೆಜಿಎಫ್ ಸಿನಿಮಾದ ಟ್ರೇಲರ್ ವೀಕ್ಷಿಸಿರುವ ಬಾಲಿವುಡ್‌ನ ಪ್ರಖ್ಯಾತ ನಟನೊಬ್ಬ ತಾನೂ ಈ ಸಿನಿಮಾ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದೇನೆಂದು ಹೇಳಿದ್ದಾರೆ.

ಹೌದು ಕರ್ನಾಟಕದವರೇ ಆದ, ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಪ್ರಸಿದ್ಧರಾಗಿರುವ ಸುನಿಲ್ ಶೆಟ್ಟಿ ಕೆಜಿಎಫ್ ಸಿನಿಮಾದ ಟ್ರೇಲರ್ ವೀಕ್ಷಿಸಿ ಸಿನಿಮಾದ ಫ್ಯಾನ್ ಆಗಿದ್ದಾರೆ. ಯಶ್ ಆ್ಯಕ್ಟಿಂಗ್ ಕಂಡು ಮನಸೋತ ಸುನಿಲ್ ಶೆಟ್ಟಿ 'ಈ ಸಿನಿಮಾ ನೋಡಲು ಬಹಳ ಕುತೂಹಲದಿಂದ ಕಾಯುತ್ತಿದ್ದೇನೆ. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದೀರಿ. ನಟ ಯಶ್, ನಿರ್ದೆಶಕ ಹಾಗೂ ಇಡೀ ಚಿತ್ರತಂಡಕ್ಕೆ ಶುಭವಾಗಲಿ' ಎಂದಿದ್ದಾರೆ.

ಕೇವಲ ಭಾರತೀಯರು ಮಾತ್ರವಲ್ಲ, ಪಾಕಿಸ್ತಾನ, ಅಮೆರಿಕಾ ಸೇರಿದಂತೆ ಹಲವು ಕಡೆಯಿಂದ ಕೆಜಿಎಫ್ ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಭಾಷೆ ಅರ್ಥವಾಗದಿದ್ದರೂ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ.