ಬಾಲಿವುಡ್ ನಟ ಅನಿಲ್ ಕಪೂರ್ ಹಾಗೂ ಖ್ಯಾತ ನಿರ್ದೇಶಕ ಮಣಿರತ್ನಂ ಇಬ್ಬರಿಗೂ ಬಿಗ್ ಹಿಟ್ ನೀಡಿದ ಸಿನಿಮಾ ’ಪಲ್ಲವಿ-ಅನುಪಲ್ಲವಿ’. ಅನಿಲ್ ಕಪೂರ್ ಬಣ್ಣದ ಲೋಕವನ್ನು ಪ್ರವೇಶಿಸಿದ್ದು ‘ಪಲ್ಲವಿ-ಅನುಪಲ್ಲವಿ’ ಮೂಲಕ. 

36 ವರ್ಷದ ಬಳಿಕ ಅನಿಲ್ ಕಪೂರ್ ಈ ಸಿನಿಮಾವನ್ನು ನೆನೆಸಿಕೊಂಡು ಭಾವುಕರಾಗಿದ್ದಾರೆ. ಇದಕ್ಕೆ ಕಾರಣ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ. ‘ಪಲ್ಲವಿ-ಅನುಪಲ್ಲವಿ’  ಚಿತ್ರದ ಬಗ್ಗೆ    ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅನಿಲ್ ಕಪೂರ್ ಟ್ವೀಟ್ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ. 

 

ಕೆಲವು ಸಂಗತಿಗಳು ಹಳೆಯ ನೆನಪುಗಳನ್ನು ನೆನಪಿಸುತ್ತದೆ. ಸ್ನೇಹಿತರು, ಸಹೋದ್ಯೋಗಿಗಳು, ಜಾಗ, ಒಟ್ಟಿಗೆ ತಿಂದಿದ್ದೆಲ್ಲವನ್ನು ಮತ್ತೊಮ್ಮೆ ನೆನಪಿಸುತ್ತದೆ. ಈ ಟ್ವೀಟ್ ನನ್ನನ್ನು ಶೂಟಿಂಗ್ ದಿನಗಳಿಗೆ ಕೊಂಡೊಯ್ದಿತು. ನನ್ನ ಮೊದಲ ಕನ್ನಡ ಸಿನಿಮಾ ಪಲ್ಲವಿ-ಅನುಪಲ್ಲವಿ ಎಂದು ಅನಿಲ್ ಕಪೂರ್ ಭಾವುಕರಾಗಿದ್ದಾರೆ. 

ಪಲ್ಲವಿ ಅನುಪಲ್ಲವಿ 1983 ರಲ್ಲಿ ತೆರೆ ಕಂಡ ಸಿನಿಮಾ. ಅನಿಲ್ ಕಪೂರ್ ಗೆ ನಾಯಕಿಯಾಗಿ ಲಕ್ಷ್ಮೀ ಕಾಣಿಸಿಕೊಂಡಿದ್ದರು. ಸಂಗೀತ ಮಾಂತ್ರಿಕ ಇಳಯರಾಜಾ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದೆ. ನಗುವಾ, ನಯನಾ ಮಿಡಿವ ಮೌನ ಹಾಡನ್ನಂತೂ ಯಾರೂ ಮರೆಯಲು ಸಾಧ್ಯವಿಲ್ಲ.