ಬೆಂಗಳೂರು (ಜ. 04): ಬಿಗ್‌ಬಾಸ್ ಖ್ಯಾತಿಯ ನಟ, ಗುಂಗುರು ಕೂದಲಿನ ಹುಡುಗ ಭುವನ್ ಪೊನ್ನಣ್ಣ ಹೀರೊ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಸುನೀಲ್ ಆಚಾರ್ಯ ನಿರ್ದೇಶನದ ‘ರಾಂಧವ’ ಚಿತ್ರದಲ್ಲಿ ತ್ರಿಪಾತ್ರದಲ್ಲಿ ನಟಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಅದ್ದೂರಿಯಾಗಿ ಜನರ ಮನಸ್ಸಿಗೆ ಲಗ್ಗೆ ಇಡಲು ತಯಾರಿ ನಡೆಸಿದ್ದಾರೆ. ತನ್ನ ಧ್ವನಿ, ನಿಲುವು, ವರ್ತನೆ, ನಟನೆ, ಮಾತು ಇವೆಲ್ಲದರಿಂದ ಸ್ಟಾರ್ ಆಗುವ ಸೂಚನೆ ನೀಡುತ್ತಿರುವ ಭುವನ್ ಜತೆ ಮಾತುಕತೆ
ಇಲ್ಲಿದೆ. ಓವರ್ ಟು ಭುವನ್ ಪೊನ್ನಣ್ಣ.

ಆ್ಯಕ್ಟರ್‌ ಆಗೋದು ಅಮ್ಮನಾಸೆ

ಸಿನಿಮಾ ನನ್ನ ಕನಸು ಹಾಗೂ ಉಸಿರು. ಅದಕ್ಕೆ ಕಾರಣ ನನ್ನಮ್ಮ. ಅಮ್ಮನಿಗೆ ಸಿನಿಮಾದಲ್ಲಿ ನಟಿ ಆಗುವ ಆಸೆ ಇತ್ತಂತೆ. ಆದ್ರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ, ನೀನಾದ್ರು ಶಾರುಖ್‌ ಖಾನ್‌ ಥರ ಆ್ಯಕ್ಟರ್‌ ಆಗು ಅಂತಿಂದ್ರು. ಅಮ್ಮನ ಪ್ರೇರಣೆಯಿಂದಾಗಿಯೇ ಮೂರನೇ ತರಗತಿಯಲ್ಲೇ ನಾಟಕಕ್ಕೆ ಬಣ್ಣ ಹಚ್ಚಿದೆ. ಹರಿಕತೆಗಳಲ್ಲೂ ಭಾಗವಹಿಸಿದೆ. ಕಾಲೇಜು ದಿನಗಳಲ್ಲಿ ಬೆಂಗಳೂರಿಗೆ ಬಂದು ರಂಗಸಂಸ್ಥೆಯೊಂದಕ್ಕೆ ಸೇರಿಕೊಂಡೆ. ಒಂದು ನಾಟಕದಲ್ಲಿ ಲೀಡ್‌ ರೋಲ್‌ನಲ್ಲೇ ಅಭಿನಯಿಸಿದೆ. ಅಲ್ಲಿಂದಲೇ ಒಂದು ಸಿನಿಮಾ ಆಫರ್‌ ಬಂತು.

‘ಚೌಕಾಬಾರ’ ಅಂತ ಅದರ ಹೆಸರು. ದುರಾದೃಷ್ಟಅದು ಟೇಕಾಫ್‌ ಆಗಲಿಲ್ಲ. ಆದ್ರೆ ನನ್ನ ಫೋಟೋಸ್‌ ಮಾತ್ರ ಗಾಂಧಿನಗರದಲ್ಲಿ ಹರಿದಾಡಿದವು. ಅಲ್ಲಿಂದ ‘ಜಸ್ಟ್‌ ಮಾತ್‌ ಮಾತಲ್ಲಿ’ ಚಿತ್ರದಲ್ಲಿನ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದೆ. ‘ಕೂಲ್‌’ ಸೇರಿ ಒಂದಷ್ಟುಸಿನಿಮಾಗಳಲ್ಲಿ ‘ವಿಲನ್‌’ ಆದೆ. ನಾನೇ ನಿರ್ದೇಶಕನಾಗುವ ಪ್ರಯತ್ನವೂ ನಡೆಯಿತು.

ಹಾಲಿವುಡ್‌ಗೂ ಹೋಗಿ ಬಂದೆ. ಮತ್ತೆ ಇನ್ನೇನು ಅಮೆರಿಕಕ್ಕೆ ಹಾರಬೇಕೆನ್ನುವಾಗ ‘ಬಿಗ್‌ಬಾಸ್‌ ಸೀಸನ್‌ 4’ಗೆ ಆಫರ್‌ ಬಂತು. ಅಲ್ಲಿಗೂ ಹೋಗಿ ಬಂದೆ. ಈ ಬಗೆಯ ಬಣ್ಣದ ಲೋಕದ ಈ ಪಯಣಕ್ಕೀಗ ಟರ್ನಿಂಗ್‌ ಪಾಯಿಂಟ್‌.

ಇದು ಹನ್ನೆರಡನೇ ಕತೆ

ಬಿಗ್‌ಬಾಸ್‌ಗೆ ಹೋಗಿ ಬಂದ ನಂತರ ಸಾಕಷ್ಟುಕತೆ ಕೇಳಿದೆ. ಆದರೆ ನನ್ನ ಚಿಂತನೆ ಬೇರೆಯೇ ಇತ್ತು. ಬೆಳ್ಳಿತೆರೆಗೆ ಹೀರೊ ಆಗಿ ಎಂಟ್ರಿ ಆಗುವುದಾದರೆ, ಒಂದೊಳ್ಳೆ ಕತೆ, ವಿಶೇಷವಾದ ಪಾತ್ರ ಸಿಗಬೇಕು ಎನ್ನುವುದು ನನ್ನ ಉದ್ದೇಶ. ಅದೇ ನಿಟ್ಟಿನಲ್ಲಿ ಬೇರೆ ಬೇರೆ ನಿರ್ದೇಶಕರಿಂದ ಹನ್ನೊಂದು ಕತೆ ಕೇಳಿದೆ. ಅವ್ಯಾವು ನನಗೆ ಹಿಡಿಸಲಿಲ್ಲ. ರೆಗ್ಯುಲರ್‌ ಲವ್‌ಸ್ಟೋರಿಗಳೇ ಅವೂ ಕೂಡ. ಜತೆಗೆ ರೆಗ್ಯುಲರ್‌ ಲವ್‌ಸ್ಟೋರಿ ಮೂಲಕ ಇಂಟ್ರಡ್ಯೂಸ್‌ ಆಗ್ಲಿಕ್ಕೂ ನಂಗೂ ಇಷ್ಟಇರಲಿಲ್ಲ. ಕತೆ ಕೇಳುವುದು ಸಾಕು, ಮುಂದೆ ನೋಡೋಣ ಅಂತಂದುಕೊಂಡೆ.

ಆದರೂ ಒಂದಿನ ನಿರ್ದೇಶಕ ಸುನೀಲ್‌ ಆಚಾರ್ಯ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನನ್ನನ್ನು ಭೇಟಿ ಮಾಡಿ, ‘ರಾಂಧವ’ ಚಿತ್ರ ಕತೆಯ ಒನ್‌ಲೈನ್‌ ಹೇಳಿದ್ರು. ಆಗ ಬ್ಯುಸಿಯಿದ್ದೆ. ಮತ್ತೊಂದು ದಿನ ಭೇಟಿಯಾಗಿ ‘ರಾಂಧವ ’ಚಿತ್ರದ ಪೂರ್ಣ ಕತೆಯ ವಿವರ ಕೇಳಿದೆ. ಅದು ನನ್ನನ್ನು ಹೆಚ್ಚು ಇಂಪ್ರೆಸ್‌ ಮಾಡಿತು. ಗ್ರಾಂಡ್‌ ಎಂಟ್ರಿಗೆ ಅದೇ ಸೂಕ್ತ ಅಂತ ಓಕೆ ಅಂದೆ. ಅದೇ ಸಿನಿಮಾಕ್ಕಾಗಿ ಆ ನಂತರ ಮೂರ್ನಾಲ್ಕು ಸಿನಿಮಾದ ಆಫರ್‌ ರಿಜೆಕ್ಟ್ ಮಾಡಿದೆ.

ಒಂದೇ ಚಿತ್ರ, ಮೂರು ಕತೆ..

ಕೆಲವರು ಕತೆ ನೋಡಿ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಮತ್ತೆ ಕೆಲವರು ನಿರ್ಮಾಣ ಸಂಸ್ಥೆಯ ಹಿನ್ನೆಲೆ ಕೆದಕುತ್ತಾರೆ. ಅಷ್ಟೇ ಯಾಕೆ, ಮತ್ತೆ ಕೆಲವರು ಹೀರೋಯಿನ್‌ ಯಾರು ಅಂತಲೂ ಕೇಳುತ್ತಾರಂತೆ. ನಿಜ, ನಾನೂ ಕೂಡ ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಇವೆಲ್ಲವನ್ನು ನೋಡಿದ್ದೇನೆ. ಹಾಗಂತ ಅವೇ ಪ್ರಮುಖ ಕಾರಣವಲ್ಲ. ಪ್ರಮುಖವಾಗಿ ಹೇಳೋದಾದ್ರೆ ಚಿತ್ರದ ಕತೆ, ಆನಂತರ ಪಾತ್ರ, ಅದರ ಜತೆಗೆ ನಿರ್ಮಾಣ ಸಂಸ್ಥೆ. ಇವಿಷ್ಟುನನಗಿಷ್ಟವಾಗಿಯೇ ‘ರಾಂಧವ’ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದೆ.

ಇದು ಯಾಕೆ ವಿಭಿನ್ನವಾದ ಕತೆ ಅಂತೆನಿಸಿತು ಅಂದ್ರೆ, ಒಂದೇ ಚಿತ್ರ, ಮೂರು ಬಗೆಯ ಕತೆ. ಹಿಸ್ಟಾರಿಕಲ್‌ ಲಿಂಕ್‌ ಇರುವಂತಹ ಕತೆ. ಈ ತರಹದ ಮೈಥಾಲಜಿಕಲ್‌ ಕತೆ ಕನ್ನಡದಲ್ಲಿ ಇತ್ತೀಚೆಗೆ ಬಂದಿಲ್ಲ. ಸ್ಟೋರಿ ಲೈನ್‌ ತುಂಬಾ ಕುತೂಹಲಕಾರಿಯಾದದ್ದು. ಹಿಸ್ಟಾರಿಕಲ್‌ ಅಥವಾ ಮೈಥಾಲಜಿಕಲ್‌ ಸಿನಿಮಾ ಅಂದಾಕ್ಷಣ ಡ್ರಾಮಾ ರೂಪದಲ್ಲಿ ತೋರಿಸುವ ಪ್ರಯತ್ನವೇ ಹೆಚ್ಚು. ಹಾಗೆ ತೋರಿಸಿದರೆ ಪ್ರೇಕ್ಷಕರಿಗೆ ಬೋರು. ಆದರೆ ಇಲ್ಲಿ ನಾವು ಮೈಥಾಲಜಿಕಲ್‌ ಭಾಗದ ಅಷ್ಟುಸನ್ನಿವೇಶಗಳನ್ನು ತುಂಬಾನೆ ನೈಜವಾಗಿ ತಂದಿದ್ದೇವೆ. ಹಾಗೆಯೇ ಉಳಿದ ಭಾಗವೂ ಅಷ್ಟೇ ಸೊಗಸಾಗಿದೆ.

ಎಂಟ್ರಿಯಲ್ಲೇ ಮೂರು ಶೇಡ್‌...

ಅದೃಷ್ಟವೇ ಹೌದು. ಎಂಟ್ರಿಯಲ್ಲೇ ನಾನು ಮೂರು ಶೇಡ್‌ ಇರುವಂತಹ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಆ ಕಾರಣಕ್ಕಾಗಿಯೇ ಇದು ನನಗೆ ವಿಶೇಷವಾದ ಸಿನಿಮಾ. ನಾನು ಕಾಣಿಸಿಕೊಂಡ ಪಾತ್ರದ ಮೂರು ಶೇಡ್‌ಗಳಲ್ಲಿ ಈಗಾಗಲೇ ಎರಡು ಶೇಡ್‌ನ ಗೆಟಪ್‌, ಲುಕ್‌ ರಿವೀಲ್‌ ಮಾಡಿದ್ದೇವೆ. ರಾಂಧವ ಮತ್ತು ರಾಬರ್ಟ್‌ ಲುಕ್‌ ಲಾಂಚ್‌ ಆಗಿದೆ. ಮೈಥಾಲಜಿಕಲ್‌ ಕತೆಯಲ್ಲಿ ಬರುವ ಪಾತ್ರದ ಹೆಸರು ರಾಂಧವ. ರಾಜ ಅಂದ್ಮೇಲೆ ಹೇಳ್ಬೇಕೆ, ಗತ್ತು-ಗಾಂಭಿರ್ಯದ ಪಾತ್ರ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಡ್ರಾಮಾ ಎನಿಸಿಬಿಡುತ್ತೆ.

ಅದಕ್ಕಾಗಿ ಎರಡು ತಿಂಗಳು ಸಿದ್ಧತೆ ಮಾಡಿಕೊಂಡೆ. ಇನ್ನು ರಾಬರ್ಟ್‌. ಈತ ಒಬ್ಬ ಪಕ್ಷಿ ತಜ್ಞ. ಇಡೀ ಚಿತ್ರದಲ್ಲಿ ಆತನಿಗೆ ಮಾತೇ ಇಲ್ಲ. ಮೌನದ ಪಯಣ ಆತನದ್ದು. ಮುಖ ಭಾವದಲ್ಲಿ ಆ ಪಾತ್ರದ ಫೀಲ್‌ ತೋರಿಸಬೇಕಿತ್ತು. ನಿರ್ದೇಶಕರು ಪಾತ್ರದ ಬಗ್ಗೆ ಹೇಳಿದಾಗ , ಸಿದ್ಧತೆ ಹೇಗೆ ಅಂದುಕೊಂಡೆ. ಒಂದು ತಿಂಗಳ ಕಾಲ ಮಾತು ನಿಲ್ಲಿಸಿದೆ. ಯಾರ ಜತೆಗೂ ಹೆಚ್ಚು ಮಾತನಾಡಲಿಲ್ಲ. ಯಾಕಂದ್ರೆ ಮೌನದಲ್ಲೇ ಅಭಿನಯ ತೋರಿಸುವುದನ್ನು ಕಲಿಯಬೇಕಿತ್ತು. ಹಾಗೆ ತರಬೇತಿ ಪಡೆದುಕೊಂಡೆ ಶೂಟಿಂಗ್‌ ಹೊರಟೆ. ಇನ್ನೊಂದು ಪಾತ್ರವಿದೆ. ಅದರ ಹೆಸರು ರಾಣಾ. ಸದ್ಯಕ್ಕೆ ಆ ಪಾತ್ರದ ಡಿಟೈಲ್ಸ್‌ ಬೇಡ. ಮುಂದೆ ಗೊತ್ತಾಗಲಿದೆ.

ಬಾಹುಬಲಿಗೂ ಕಮ್ಮಿಯಿಲ್ಲ...

ಕನ್ನಡ ಸಿನಿಮಾ ಅಂದಾಕ್ಷಣ ಪರಭಾಷೆಗಳಲ್ಲಿ ಮೇಕಿಂಗ್‌ ಚೆನ್ನಾಗಿಲ್ಲ ಎನ್ನುವ ಮಾತನ್ನು ‘ಕೆಜಿಎಫ್‌’ ಸುಳ್ಳಾಗಿಸಿದೆ. ಅದ್ಧೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿ ದೊಡ್ಡ ಹೆಸರು ಮಾಡಿದ್ದು ಹೆಮ್ಮೆಯ ಸಂಗತಿ. ಕೆಜಿಎಫ್‌ ಮಾದರಿಯಲ್ಲೇ ‘ರಾಂಧವ’ ಕೂಡ ಪರಭಾಷೆಯ ಸಿನಿಮಾಗಳಿಗೆ ತಕ್ಕ ಉತ್ತರ ನೀಡುವುದು ಖಚಿತ. ಹಾಗಂತ ಬಜೆಟ್‌ ಬಗ್ಗೆ ಹೇಳುತ್ತಿಲ್ಲ, ಮೇಕಿಂಗ್‌ ಅದ್ಧೂರಿಯಾಗಿ ಬಂದಿದೆ ಅನ್ನೋದು ಸತ್ಯ. ಹಾಲಿವುಡ್‌ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಸಿನಿಮಾ ಅವಧಿ 2 ಗಂಟೆ 10 ನಿಮಿಷ. ಅಷ್ಟುಅವಧಿಯ ದೃಶ್ಯಾವಳಿ ಕಲರ್‌ಫುಲ್‌ ಆಗಿದೆ.

ವಿಷ್ಯುವಲ್‌ ಟ್ರಿಟ್‌ ಅದ್ಭುತ. ನಾವೀಗ ಚಿತ್ರದ ಎರಡು ಟ್ರೇಲರ್‌ ಲಾಂಚ್‌ ಮಾಡಿದ್ದೇವೆ. ಎರಡೂ ಕೂಡ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಯಾವ ಸ್ಟಾರ್‌ ಸಿನಿಮಾದ ಮೇಕಿಂಗ್‌ಗೂ ಕಮ್ಮಿ ಇಲ್ಲ ಎನ್ನುವ ಮಾತುಗಳನ್ನು ಹಲವರು ಹೇಳಿದ್ದಾರೆ. ಆ ಮಟ್ಟಕ್ಕೆ ಚಿತ್ರವನ್ನು ತೆರೆಗೆ ತರಲು ಇಡೀ ತಂಡ ಸಾಕಷ್ಟುಕಷ್ಟಪಟ್ಟಿದೆ. ಮೊದಲು 53 ದಿನಗಳ ಚಿತ್ರೀಕರಣ ಅವಧಿ ಅಂತಂದುಕೊಂಡೆವು. ತಾಂತ್ರಿಕ ಕಾರಣದಿಂದ 20 ದಿನಗಳ ಕಾಲ ರೀ ಶೂಟ್‌ ಮಾಡಿದೆವು. ತೆಲುಗಿನ ‘ ಮಗಧೀರ’ ಚಿತ್ರಕ್ಕೆ ಗ್ರಾಫಿಕ್ಸ್‌ ವರ್ಕ್ ಮಾಡಿದವರೇ ರಾಂಧವ ಚಿತ್ರಕ್ಕೂ ಗ್ರಾಫಿಕ್ಸ್‌ ವರ್ಕ್ ಮಾಡಿದ್ದಾರೆ.ಅದ್ಧೂರಿ ಸೆಟ್‌ ಹಾಕಿ ಚಿತ್ರೀಕರಿಸಿದ್ದೇವೆ.

ಇದೆಲ್ಲ ಒಂದು ಟೀಮ್‌ ವರ್ಕ್

ರಾಂಧವ ಅನ್ನೋದು ಯಾರೋ ಒಬ್ಬರ ಸಿನಿಮಾವಲ್ಲ. ಇದೊಂದು ಟೀಮ್‌ ವರ್ಕ್. ಸಿನಿಮಾ ನಾಯಕಿ ಅಪೂರ್ವ ಶ್ರೀನಿವಾಸನ್‌. ಇವರು ಹೈದರಾಬಾದ್‌ ಮೂಲ. ಪೂರಿಜಗನ್ನಾಥ್‌ ಸಿನಿಮಾಗಳಲ್ಲಿ ಅಭಿನಯಿಸಿದ್ದವರು. ಅವರು ಪಾತ್ರ ಕೇಳಿಯೇ ಥ್ರಿಲ್‌ ಆದರು. ಅದೇ ಎಕ್ಸೈಟ್‌ಮೆಂಟ್‌ನಲ್ಲಿ ಬಂದು ಅಭಿನಯಿಸಿದ್ದಾರೆ. ಅವರೊಂದಿಗೆ ಯಮುನಾ ಶ್ರೀನಿಧಿ, ಜಹಂಗೀರ್‌, ಮಂಜುನಾಥ್‌ ಹೆಗಡೆ ಸೇರಿ 30 ಕಲಾವಿದರ ತಂಡವೇ ಚಿತ್ರದಲ್ಲಿದೆ. ಅವೆಲ್ಲ, ಸುಮ್ಮನೆ ಬಂದು ಮುಖ ತೋರಿಸಿ ಹೋಗುವ ಪಾತ್ರಗಳಲ್ಲ. ಅಷ್ಟುಪಾತ್ರಗಳಿಗೂ ಅದರದ್ದೇಯಾದ ಪ್ರಾಮುಖ್ಯತೆಯಿದೆ.

ಇಡೀ ಚಿತ್ರದಲ್ಲಿ ನನ್ನೊಂದಿಗೆ ಜಹಂಗೀರ್‌ ಪಾತ್ರವಿದೆ. ಅವರ ಕಾಮಿಡಿ ಸೆನ್ಸ್‌ ತುಂಬಾ ಚೆನ್ನಾಗಿದೆ. ಹಾಗೆಯೇ ಗಾಯಕ ಶಶಾಂಕ್‌ ಶೇಷಗಿರಿ ಈ ಸಿನಿಮಾದ ಬಹುದೊಡ್ಡ ಪ್ಲಸ್‌ ಪಾಯಿಂಟ್‌. ಗಾಯನದ ಜತೆಗೆ ಅವರೀಗ ಸಂಗೀತ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಇದೇ ಮೊದಲು ಬ್ಯಾಕ್‌ ಗ್ರೌಂಡ್‌ಗೆ ಟ್ರ್ಯಾಪ್‌ ಶೈಲಿಯ ಮ್ಯೂಜಿಕ್‌ ಪರಿಚಯಿಸುತ್ತಿದ್ದಾರೆ. ಅರ್ಜುನ್‌ ರೆಡ್ಡಿ ಸಿನಿಮಾದಲ್ಲಿ ಇದನ್ನು ಬಳಸಲಾಗಿದೆ, ಕನ್ನಡದಲ್ಲಿ ಇದೇ ಮೊದಲು.

ಫೆಬ್ರವರಿಯಲ್ಲಿ ತೆರೆಗೆ

ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಸೆನ್ಸಾರ್‌ ಗೆ ಹೋಗಿದೆ. ಸಣ್ಣ ಪುಟ್ಟಕೆಲಸಗಳು ನಡೆಯುತ್ತಿವೆ. ಈ ಹಂತದಲ್ಲೇ ಚಿತ್ರದ ವಿತರಣೆ ಹಕ್ಕನ್ನು ಹೆಸರಾಂತ ವಿತರಕ ಸಂಸ್ಥೆ ಜಯಣ್ಣ ಕಂಬೈನ್ಸ್‌ ಪಡೆದುಕೊಂಡಿದೆ. ಇದು ನಮ್ಮ ಚಿತ್ರಕ್ಕೆ ಸಿಕ್ಕ ಬಹುದೊಡ್ಡ ಖುಷಿಯ ಸಮಾಚಾರ. ನನ್ನ ಕನಸು ನನಸಾಗಿದೆ.

2006ರಲ್ಲಿ ನಾನು ಬೆಂಗಳೂರಿಗೆ ಬಂದು ಗಾಂಧಿನಗರದತ್ತ ನೋಡುತ್ತಿದ್ದಾಗ ಇಲ್ಲಿನ ಸ್ಟಾರ್‌ಗಳ ಹಾಗೆಯೇ ನನ್ನ ಮೊದಲ ಸಿನಿಮಾ ಕೂಡ ಜಯಣ್ಣ ಕಂಬೈನ್ಸ್‌ ಮೂಲಕವೇ ವಿತರಣೆ ಆದರೆ ಹೇಗಿರುತ್ತೆ ಅಂತಂದುಕೊಂಡಿದ್ದೆ. ಅದೀಗ ಈಡೇರಿದೆ. ಫೆಬ್ರವರಿ ತಿಂಗಳಲ್ಲಿ ಚಿತ್ರ ಬಹುತೇಕ ರಿಲೀಸ್‌. ನಮಗಂತೂ ಒಳ್ಳೆಯ ಸಿನಿಮಾ ಮಾಡಿದ ಖುಷಿಯಿದೆ. ಒಳ್ಳೆಯ ಕತೆ, ಪಾತ್ರದ ಜತೆಗೆ ಹೀರೊ ಆಗಿ ಲಾಂಚ್‌ ಆಗುತ್ತಿದ್ದೇನೆಂಬ ಸಂತಸ. ಕನ್ನಡದ ಸಿನಿ ಪ್ರೇಕ್ಷಕರು ಮೆಚ್ಚಿಕೊಂಡರೆ ನಾನು ಧನ್ಯ.

- ದೇಶಾದ್ರಿ ಹೊಸ್ಮನೆ