ನಿರ್ದೇಶಕ ಹರ್ಷ ಮತ್ತೊಮ್ಮೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರವಿದು. ಜಯಣ್ಣ ಕಂಬೈನ್ಸ್‌ ನಿರ್ಮಾಣದೊಂದಿಗೆ ಸೆಟ್ಟೇರಲಿದೆ. ಹರ್ಷ ಈಗ ವಿಭಿನ್ನ ಕತೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಹಾಗೆಯೇ ಶಿವರಾಜ್‌ ಕುಮಾರ್‌ ಅವರನ್ನು ಹೊಸ ಬಗೆಯಲ್ಲೂ ತೋರಿಸಲು ಹೊರಟಿದ್ದಾರೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು. ಸದ್ಯಕ್ಕೆ ಚಿತ್ರದಲ್ಲಿನ ಅವರ ಪಾತ್ರ ಮತ್ತು ಕತೆಯ ವಿಶೇಷತೆಗಳ ಬಗ್ಗೆ ಹೇಳಿಕೊಳ್ಳಲು ನಿರಾಕರಿಸಿದ್ದಾರೆ.

ಚಿತ್ರದಲ್ಲಿನ ಶಿವಣ್ಣ ಅವರ ಪಾತ್ರಕ್ಕೆ ತಕ್ಕಂತೆ ಕನ್ನಡದ ಜನಪ್ರಿಯ ನಟಿಯನ್ನೇ ನಾಯಕಿ ಆಗಿ ತರುವ ಚಿಂತನೆ ಇದೆ ಎಂದು ಹರ್ಷ ಹೇಳಿಕೊಂಡಿದ್ದರು. ಈಗಾಗಲೇ ಒಂದೆರೆಡು ಹೆಸರು ಕೂಡ ಚಾಲ್ತಿಯಲ್ಲಿದ್ದವು. ‘ಉದ್ಘರ್ಷ’ ಚಿತ್ರದೊಂದಿಗೆ ಕನ್ನಡಕ್ಕೆ ಎಂಟ್ರಿಯಾದ ‘ಕಬಾಲಿ’ ಖ್ಯಾತಿಯ ಸಾಯಿ ಧನ್ಸಿಕಾ ಅವರ ಹೆಸರು ಕೂಡ ಕೇಳಿ ಬಂದಿತ್ತು. ಹಾಗೆಯೇ ‘ಜೋಗಿ’ ಖ್ಯಾತಿಯ ಜೆನ್ನಿಫರ್‌ ಕೊತ್ವಾಲ್‌ ಹೆಸರು ಚಾಲ್ತಿಯಲ್ಲಿತ್ತು. ಆದರೆ ಈಗ ನಿರ್ದೇಶಕ ಹರ್ಷ ‘ಟಗರು’ ಕಾಂಬಿನೇಷ್‌ನ್‌ಗೆ ಮೊರೆ ಹೋಗಿದ್ದಾರೆ. ಜಾಕಿ ಚಿತ್ರದ ಖ್ಯಾತಿಯ ಭಾವನಾ ಅವರನ್ನೇ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಅದಕ್ಕೆ ನಿರ್ಮಾಪಕ ಜಯಣ್ಣ ಮಾತ್ರ ಓಕೆ ಹೇಳುವುದು ಬಾಕಿ ಇದೆ ಎನ್ನುತ್ತಿವೆ ಮೂಲಗಳು. ಸದ್ಯಕ್ಕೀಗ ಗಣೇಶ್‌ ಅಭಿನಯದ ‘99’ ಹಾಗೂ ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಇನ್ಸ್‌ಸ್ಪೆಕ್ಟರ್‌ ವಿಕ್ರಂ ’ ಚಿತ್ರಗಳಲ್ಲಿ ಭಾವನಾ ನಾಯಕಿ ಆಗಿ ಅಭಿನಯಿಸಿದ್ದಾರೆ.