ಬೆಂಗಳೂರು (ಆ. 31): ಸಿಲಿಕಾನ್ ಸಿಟಿಯ ಐತಿಹಾಸಿಕ ಥಿಯೇಟರ್ ಗಳು ಒಂದೊಂದೇ ಮುಚ್ಚುತ್ತಿವೆ. ಮೆಜೆಸ್ಟಿಕ್, ಸಾಗರ್, ಕಲ್ಪನಾ, ಕೈಲಾಶ್, ಕೆಂಪೇಗೌಡ, ಕಪಾಲಿ ಚಿತ್ರಮಂದಿರಗಳು ಈಗಾಗಲೇ ಕ್ಲೋಸ್ ಆಗಿವೆ. ಆ ಸಾಲಿಗೆ ನವರಂಗ್ ಚಿತ್ರಮಂದಿರ ಸೇರಿದೆ. 

ರಾಜಾಜಿನಗರ ರಾಜ್ ಕುಮಾರ್ ರಸ್ತೆಯಲ್ಲಿರುವ ನವರಂಗ್ ಥಿಯೇಟರ್ 59 ವರ್ಷಗಳ ಇತಿಹಾಸ ಇರುವ ಫೇಮಸ್ ಥಿಯೇಟರ್. ಈಗ ಈ ಕಟ್ಟಡ ಹಳೆತಾಗಿದ್ದು ಇದನ್ನು ರಿಪೇರಿ ಮಾಡಲಾಗುತ್ತಿದ್ದು ಮಲ್ಟಿಪ್ಲೆಕ್ಸ್ ರೀತಿಯಲ್ಲಿ ತಲೆ ರ ಎತ್ತಲಿದೆ.  

‘ಇತ್ತೀಚಿಗೆ ಮಲ್ಟಿಪ್ಲೆಕ್ಸ್ ಗಳು  ಹೆಚ್ಚು ಹೆಚ್ಚು ಬರುತ್ತಿರುವುದಿಂದ ನಮಗೆ ಲಾಭ ಬರುತ್ತಿಲ್ಲ. ಹಾಗಾಗಿ ನಾವು ಇದನ್ನು ಮಲ್ಟಿಪ್ಲೆಕ್ಸ್ ರೀತಿ ಬದಲಾವಣೆ ಮಾಡುವ ಅನಿವಾರ್ಯತೆ ಎದುರಾಗಿದೆ. ಥಿಯೇಟರನ್ನು ಕೆಡವಿ ಶಾಪಿಂಗ್ ಮಾಲ್ ಮಾಡಲು ಕೆಲವರು ಸಲಹೆ ನೀಡಿದರು. ಆದರೆ ಇದು ನಮ್ಮ ತಂದೆಯ ಕನಸು. ಅದನ್ನು ಕೆಡವಲು ಮನಸ್ಸಿಲ್ಲ. ಹಾಗಾಗಿ ಇದಕ್ಕೆ ಹೊಸ ರೂಪ ಕೊಡಲಿದ್ದೇವೆ’ ಎಂದು ಮಾಲಿಕ ಮೋಹನ್ ತಿಳಿಸಿದ್ದಾರೆ. ಮರು ನವೀಕರಣ ಮಾಡಲು ಸುಮಾರು 2 ಕೋಟಿ ರೂ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ರಿನೋವೇಶನ್ ಕೆಲಸ ಮುಗಿಯುವವರೆಗೂ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.  

ರಾಜ್ ಕುಮಾರ್ ಕುಟುಂಬದ ಅಷ್ಟೂ ಸಿನಿಮಾಗಳನ್ನು ಪ್ರದರ್ಶನ ಮಾಡಿದ ಕರ್ನಾಟಕದ ಏಕೈಕ ಥಿಯೇಟರ್ ನವರಂಗ್. ಮರುನವೀಕರಣಕ್ಕೂ ಮುನ್ನ ತೆರೆ ಕಂಡ ಕೊನೆ ಸಿನಿಮಾ ಅಭಿಷೇಕ್ ಅಂಬರೀಶ್ ಅವರ ಅಮರ್ ಸಿನಿಮಾ.