ಬೆಂಗಳೂರು (ಆ. 27): ಸಾಮಾನ್ಯವಾಗಿ ಸ್ಟಾರ್ ನಟರು ಅಭಿನಯಿಸಿದ ಸಿನಿಮಾಗಳಿಗೆ ಡಬ್ಬಿಂಗ್ ಅಥವಾ ರಿಮೇಕ್ ರೈಟ್ಸ್‌ಗೆ ಬೇಡಿಕೆ ಇರುತ್ತದೆ. ಹೊಸ ಚಿತ್ರಗಳನ್ನು ರಿಮೇಕ್ ಇರಲಿ, ಡಬ್ಬಿಂಗ್ ರೈಟ್ಸ್ ಕೂಡ ಕೇಳಲ್ಲ ಅನ್ನೋದು ಬಹುತೇಕ ಸಿನಿಮಾಗಳ ವಿಚಾರದಲ್ಲಿ ಸಾಬೀತಾಗಿದೆ.

ಆದರೆ, ಸಿಂಪಲ್ ಸುನಿ ಅವರು ‘ಬಜಾರ್’ ಸಿನಿಮಾ ಡಬ್ಬಿಂಗ್ ಬಜಾರ್‌ನಲ್ಲಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಹೊಸ ನಟ ಧನ್ವೀರ್ ಗೌಡ ಅಭಿನಯಿಸಿರುವ ಮೊದಲ ಸಿನಿಮಾ ಇದು. ಇದರ ಡಬ್ಬಿಂಗ್ ರೈಟ್ಸ್ ಈಗ 1.20 ಕೋಟಿಗೆ ಮಾರಾಟ ಆಗುವ ಮೂವಕ ಹೊಸ ನಟನ ಚಿತ್ರದ ಬ್ಯುಸಿನೆಸ್ ಬಜಾರ್ ಜೋರಾಗಿಯೇ ಪ್ರಾರಂಭಗೊಂಡಿದೆ.

ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಎನ್ನುವ ಕಾರಣಕ್ಕೆ ಡಬ್ಬಿಂಗ್ ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟಗೊಂಡಿದೆ. ಹಾಗೆ ನೋಡಿದರೆ ಸುನಿ ಅವರೇ ಹೇಳುವ ಪ್ರಕಾರ ಅವರ ಹಿಂದಿನ ಸಿನಿಮಾಗಳು ಕೂಡ ಇಷ್ಟು ದೊಡ್ಡ ಮೊತ್ತಕ್ಕೆ ಡಬ್ಬಿಂಗ್‌ಗೆ ಮಾರಾಟಗೊಂಡಿಲ್ಲ. ಆದರೆ, ‘ಬಜಾರ್’ ಪಕ್ಕಾ ಆ್ಯಕ್ಷನ್ ಹಾಗೂ ಕಮರ್ಷಿಯಲ್ ಸಿನಿಮಾ. ಹೀಗಾಗಿ ಬಾಂಬೆ ಮೂಲದ ಆದಿತ್ಯ ಎಂಬುವವರು ಈ ಚಿತ್ರಕ್ಕೆ 1.20 ಕೋಟಿ ಕೊಟ್ಟು ಡಬ್ಬಿಂಗ್ ಹಕ್ಕುಗಳನ್ನು ಖರೀದಿಸಿದ್ದಾರೆ.

ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಎಂ ಎಲ್ ಪ್ರಸನ್ನ ಅವರು ಕತೆ ಒದಗಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.