ಚಿತ್ರ: ಬದ್ಮಾಶ್‌
ಭಾಷೆ: ಕನ್ನಡ
ತಾರಾಗಣ: ಧನಂಜಯ, ಸಂಚಿತಾ ಶೆಟ್ಟಿ, ಅಚ್ಯುತ್‌ ಕುಮಾರ್‌, ಪ್ರಕಾಶ್‌ ಬೆಳವಾಡಿ, ಬಿ ಸುರೇಶ್‌, ರಮೇಶ್‌ ಪಂಡಿತ್‌, ಜಹಂಗೀರ್‌, ಸುಚೇಂದ್ರ ಪ್ರಸಾದ್‌, ರಮೇಶ್‌ ಭಟ್‌, ಪನ್ನಗ ಭರಣ
ನಿರ್ದೇಶನ: ಆಕಾಶ್‌ ಶ್ರೀವತ್ಸ
ನಿರ್ಮಾಣ: ರವಿಕಶ್ಯಪ್‌
ಛಾಯಾಗ್ರಹಣ: ಶ್ರೀಶಾ ಕೂದವಳ್ಳಿ
ಸಂಗೀತ: ಜುಡಾ ಸ್ಯಾಂಡಿ

ರೇಟಿಂಗ್: ***

ಒಂದು ಚಿತ್ರಕ್ಕೆ ಕಮರ್ಷಿಯಲ್‌ ಮೈದಾನವೇ ಮುಖ್ಯ. ಕತೆ ಹೇಗಿರಬೇಕು, ಪಾತ್ರಧಾರಿಗಳ ಆಯ್ಕೆ, ನಿರೂಪಣೆ ಇವೆಲ್ಲಕ್ಕಿಂತ ಆ ಚಿತ್ರದ ನಾಯಕನನ್ನು ಹೇಗೆ ಎಂಟ್ರಿ ಮಾಡಿಸಬೇಕು, ಆತನ ಪವರ್‌ ತೋರಿಸುವುದಕ್ಕೆ ಎಂಥ ಡೈಲಾಗ್‌ಗಳನ್ನು ಜೋಡಿಸಬೇಕು, ಐಟಂ ಡ್ಯಾನ್ಸ್‌, ಸ್ಟ್ರಾಂಗ್‌ ಫೈಟ್‌ಗಳು, ಮೇಕಿಂಗ್‌ ಎಷ್ಟುಅದ್ಧೂರಿಯಾಗಿರಬೇಕೆಂದು ಯೋಚಿಸುವವರೇ ಹೆಚ್ಚು. ಯಾಕೆಂದರೆ ಚಿತ್ರವೊಂದಕ್ಕೆ ಕಮರ್ಷಿಯಲ್‌ ನೆರಳು ಇದ್ದರೆ ಗೆಲ್ಲುತ್ತದೆಂಬುದು ಹಲವರ ನಂಬಿಕೆ. ಸಿನಿಮಾ ಮಂದಿಯ ಈ ನಂಬಿಕೆಯನ್ನು ಸಾಕಷ್ಟುಸಿನಿಮಾಗಳು ಹುಸಿ ಮಾಡಿಲ್ಲ ಎಂಬುದೂ ಖರೆ. ಈ ನಂಬಿಕೆ ಸರಿಯೋ, ತಪ್ಪೋ ಆದರೆ, ಈಗಷ್ಟೆಚಿತ್ರರಂಗಕ್ಕೆ ಬರುವ ಪ್ರತಿಯೊಬ್ಬರಿಗೂ ಅದ್ಧೂರಿ ಚಿತ್ರ ಮಾಡುವಾಸೆ. ನಿರ್ದೇಶಕ ಆಕಾಶ್‌ ಶ್ರೀವತ್ಸ ಕೂಡ ಅಂಥದ್ದೇ ಆಸೆಯಿಂದ ರೂಪಿಸಿರುವ ಚಿತ್ರ ‘ಬದ್ಮಾಶ್‌'. ಚಿತ್ರದ ನಾಯಕ ಹಾಗೂ ಮೇಕಿಂಗ್‌ ಕಡೆಗೆ ಗಮನ ಕೊಟ್ಟಿರುವುದರಿಂದ ಈ ಸಿನಿಮಾ ಪ್ರೇಕ್ಷಕರಿಂದ ಶಿಳ್ಳೆ- ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಆ ಮಟ್ಟಿಗೆ ಧನಂಜಯ ಅವರು ಮಾಸ್‌ ಹೀರೋ ಆಗಿ ಗಮನ ಸೆಳೆಯುತ್ತಾರೆ.

ಧನಂಜಯ ಅವರಲ್ಲಿನ ಬಾಡಿ ಲಾಂಗ್ವೇಜ್‌, ಮಾಸ್‌ ಲುಕ್‌, ಡೈಲಾಗ್‌ ಡೆಲಿವರಿ ಮಾಡುವ ತಾಕತ್ತನ್ನು ಸಂಪೂರ್ಣವಾಗಿ ಬಳಸಿಕೊಂಡಂತಿರುವ ಆಕಾಶ್‌ ಶ್ರೀವತ್ಸ ಎಲ್ಲರಿಂದ ಒಳ್ಳೆಯ ಗೇಮ್‌ ಆಡಿಸಿದ್ದಾರೆ. ಆದರೆ, ಈ ಗೇಮ್‌ ಆಗಾಗ ಎಡವುತ್ತ ಗೊಂದಲ ಮೂಡಿಸುತ್ತ ಸಾಗುತ್ತದೆ. ಕ್ಲೈಮ್ಯಾಕ್ಸ್‌'ಗೆ ಬರುವ ಹೊತ್ತಿಗಂತೂ ಯಾರು ಯಾರ ಜತೆ ಗೇಮ್‌ ಆಡುತ್ತಾರೆಂಬ ಗೊಂದಲ ಮೂಡಿಸುತ್ತಾರೆ. ಕೊನೆಗೂ ಎಲ್ಲ ಗೊಂದಲಗಳಿಗೂ ನಿರ್ದೇಶಕರೇ ತೆರೆ ಎಳೆಯುವ ಪ್ರಯತ್ನ ಮಾಡಿದಾಗ ಯಾಕೋ ಆಟ ಜಾಸ್ತಿ ಆಯ್ತು ಅನಿಸುತ್ತದೆ. ಇದರ ಹೊರತಾಗಿ ಇಡೀ ಸಿನಿಮಾ ಕಲರ್‌ಫುಲ್‌ ಆಗಿದೆ. ಶ್ರೀಶಾ ಅವರ ಕ್ಯಾಮೆರಾ, ಶ್ರೀಕಾಂತ್‌ರ ಸಂಕಲನ ಚಿತ್ರಕ್ಕೆ ಸಾಧ್ಯವಾದಷ್ಟುಸಾಥ್‌ ನೀಡಿದೆ. ಜತೆಗೆ ಚಿತ್ರದ ನಾಯಕ ಹೇಳುವ ಮಾಸ್‌ ಡೈಲಾಗ್‌ಗಳು ಕೂಡ. ಇವೆಲ್ಲ ಸೇರಿ ಚಿತ್ರದಲ್ಲಿನ ಒಂದಿಷ್ಟುಕೊರತೆಗಳನ್ನು ನೀಗಿಸುತ್ತವೆ. ಚಿತ್ರದ ಮೊದಲಾರ್ಧ ಹೇಗೋ ಟೈಮ್‌ಪಾಸ್‌ ಆಗುತ್ತದೆ. ವಿರಾಮದ ನಂತರ ಶುರುವಾಗುವ ಅಸಲಿ ಗೇಮ್‌, ಮೊದಲಾರ್ಧದ ಬೇಸರವನ್ನು ತೊಲಗಿಸುತ್ತದೆ. ಧನಂಜಯ, ಅಚ್ಯುತ್‌ ಕುಮಾರ್‌, ರಮೇಶ್‌ ಭಟ್‌, ರಮೇಶ್‌ ಪಂಡಿತ್‌, ಸಂಚಿತಾ ಶೆಟ್ಟಿಈ ಐದು ಮಂದಿ ತಮ್ಮ ತಮ್ಮ ಗೇಮ್‌ ಮೈಂಡ್‌ ಅನ್ನು ತೆರೆದಿಡುತ್ತಾರೆ.

ಇದು ಪಕ್ಕಾ ಈಗಿನ ಕಮರ್ಷಿಯಲ್‌ ಚಿತ್ರವಾದರೂ ಇಲ್ಲಿನ ಕತೆಗೆ ಒಂದು ಚರಿತ್ರೆಯ ಹಿನ್ನೆಲೆ ಇದೆ. ಈ ಚಾರಿತ್ರಿಕ ಸನ್ನಿವೇಶಗಳ ಮೂಲಕ ತೆರೆದುಕೊಳ್ಳುವ ಕತೆಯ ಕೇಂದ್ರಬಿಂದು ರಾಜಸಂಸ್ಥಾನಕ್ಕೆ ಸೇರಿದ ದೈವ ಶಕ್ತಿಯನ್ನು ಒಳಗೊಂಡಿರುವ ವಜ್ರ. ಅದು ಕಾಲಗಳನ್ನು ದಾಟಿ ಈ ಕಾಲಕ್ಕೆ ಬರುವ ಹೊತ್ತಿಗೆ ಒಬ್ಬ ರಾಜಕಾರಣಿ ಕೈ ಸೇರಿರುತ್ತದೆ. ಸರ್ಕಾರಕ್ಕೆ ಸೇರಬೇಕಾದ ಈ ಸಂಪತ್ತು ರಾಜಕಾರಣಿ ಕೈಗೆ ಹೇಗೆ ಬಂತು? ಸ್ವಾಮೀಜಿಯ ಪಾತ್ರವೇನು? ಅಪರೂಪದ ಈ ವಜ್ರದ ಸಂಪತ್ತಿಗೂ ನಾಯಕ, ನಾಯಕಿಗೂ ಏನು ಸಂಬಂಧ? ಎನ್ನುವ ಒನ್‌'ಪಾಯಿಂಟ್‌ ಕತೆಯ ನಡುವೆ ಪೊಲೀಸ್‌ ವ್ಯವಸ್ಥೆ ಹಾಗೂ ಮೀಡಿಯಾಗಳ ನಾಟಕವೂ ಬಂದು ಹೋಗುತ್ತದೆ. ಜತೆಗೆ ಬೆಟ್ಟಿಂಗ್‌ ಮಾಫಿಯಾದ ನೆರಳು ತನ್ನ ಇರುವಿಕೆಯನ್ನು ಹೇಳುತ್ತದೆ. ಅಲ್ಲಿಗೆ ಎಲ್ಲ ಮಾಸ್‌ ಮಸಾಲ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ನಾಯಕ ಹೇಗೆಲ್ಲ ಎಲ್ಲರ ಜತೆ ಗೇಮ್‌ ಆಡುತ್ತಾ, ಕಳೆದುಹೋದ ಬಾಲ್ಯದ ಗೆಳತಿಯನ್ನು ಪಡೆಯುತ್ತಾನೆಂಬುದು ‘ಬದ್ಮಾಶ್‌'ನ ಅಸಲಿ ಕತೂಹಲ. ರಾಮನ ಹಾಗೆ ವರ್ತಿಸುತ್ತಲೇ ಕೃಷ್ಣನ ತಂತ್ರಗಳನ್ನು ಹೂಡಿ ಪ್ರತಿನಾಯಕನ ಮುಂದೆ ತೊಡೆ ತಟ್ಟುವ ಧನಂಜಯ ಅವರೇ ಚಿತ್ರದ ಮುಖ್ಯ ಪಿಲ್ಲರ್‌. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ ಭಾಗವನ್ನು ಇನ್ನಷ್ಟು ಸರಳವಾಗಿಸಬೇಕಿತ್ತು.

ನಟನೆ ವಿಚಾರಕ್ಕೆ ಬಂದ ಧನಂಜಯ ಅವರಿಗೆ ಮಾಸ್‌ ಅಪೀಲ್‌ ಇದೆ. ಔಟ್‌ ಅಂಡ್ ಔಟ್‌ ಆ್ಯಕ್ಷನ್‌ ಸಿನಿಮಾಗಳಿಗೆ ಫಿಟ್‌ ಆಗುತ್ತಾರೆ. ಸಂಚಿತಾ ಶೆಟ್ಟಿಪಾತ್ರ ಲೆಕ್ಕಕ್ಕುಂಟು. ಪ್ರಥಮ ಹೆಜ್ಜೆಯಲ್ಲೇ ನಿರ್ದೇಶಕರು ಕಮರ್ಷಿಯಲ್‌ ಪ್ರೇಕ್ಷಕ ವರ್ಗವನ್ನು ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಜುಡಾ ಸ್ಯಾಂಡಿ ಸಂಗೀತದ ಎರಡು ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಕಮರ್ಷಿಯಲ್‌ ಹಾಗೂ ಮನರಂಜನೆ ಬಯಸುವವರು ಒಮ್ಮೆ ನೋಡುವಂಥ ಚಿತ್ರವಿದು.

- ಆರ್‌. ಕೇಶವಮೂರ್ತಿ, ಕನ್ನಡಪ್ರಭ