Asianet Suvarna News Asianet Suvarna News

ರಜನಿಯನ್ನು ಹಿಂದಿಕ್ಕಿದ ಬಾಹುಬಲಿ!

baahubali prabhas beats rajinikanth

ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳು ಮೇಡಂ ಟುಸ್ಸಾಡ್ಸ್‌ನಲ್ಲಿ ತಮ್ಮ ಆರಾಧಕನ ಮೇಣದ ಪ್ರತಿಮೆ ಸ್ಥಾಪಿಸಲು ಒತ್ತಾಯಿಸುತ್ತಲೇ ಬಂದಿದ್ದಾರೆ. ಇದುವರೆಗೂ ಅದು ಈಡೇರಿಲ್ಲ. ಆದರೆ, ಈಗ ಬಾಹುಬಲಿ ಪ್ರಭಾಸ್‌ರ ಪ್ರತಿಮೆ ಅಲ್ಲಿ ಸ್ಥಾಪನೆಗೊಳ್ಳುತ್ತಿದೆ. ಈ ಗೌರವಕ್ಕೆ ಪಾತ್ರರಾಗ್ತಿರುವ ದಕ್ಷಿಣ ಭಾರತದ ಮೊದಲ ಸ್ಟಾರ್ ಕೂಡ ಪ್ರಭಾಸ್!

ದಕ್ಷಿಣ ಭಾರತದ ಜನಪ್ರಿಯ ನಟ ಯಾರು? ಬಹುತೇಕರ ಒಕ್ಕೊರಲಿನ ಉತ್ತರ ‘ರಜನಿಕಾಂತ್’ ಇದ್ದಿರಬಹುದು. ಅವರ ಒಂದೊಂದು ಸಿನಿಮಾಕ್ಕೂ ಸಿಗುವ ಅದ್ಧೂರಿ ಪ್ರಚಾರ, ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚುವ ಅವರ ಸಿನಿಮಾಗಳ ಸಾಮರ್ಥ್ಯ, ಗಲ್ಲಿಗಲ್ಲಿಗೂ ಸಿಗುವ ರಜನಿಯ ಆರಾಧಕರನ್ನು ಕಂಡು ಹೀಗೆ ಅರ್ಥೈಸಬಹುದು. ಆದರೆ, ವಿಶ್ವದ ಕಣ್ಣಿಗೆ ಸದ್ಯದ ಮಟ್ಟಿಗೆ ದಕ್ಷಿಣ ಭಾರತದ ಪ್ರಭಾವಿ ನಟ ರಜನಿಕಾಂತ್ ಅಲ್ಲ! ಬಾಹುಬಲಿ ಪ್ರಭಾಸ್!

ಯಾಕೆ ಗೊತ್ತಾ? ಬ್ಯಾಂಕಾಕ್‌ನ ಮೇಡಂ ಟುಸ್ಸಾಡ್ಸ್‌ನಲ್ಲಿ ಪ್ರಭಾಸ್‌ನ ಮೇಣದ ಪ್ರತಿಮೆ ಸಿದ್ಧವಾಗುತ್ತಿದೆ! 2015ರಲ್ಲಿ ತೆರೆಕಂಡ ‘ಬಾಹುಬಲಿ’ಯ ಯಶಸ್ಸೇ ಪ್ರಭಾಸ್‌ಗೆ ಈ ಹಿರಿಮೆ ತಂದುಕೊಟ್ಟಿದೆ. ಈ ಬಗ್ಗೆ ನಿರ್ದೇಶಕ ರಾಜವೌಳಿ ಟ್ವೀಟ್ ಮಾಡಿದ್ದು, ಪ್ರಭಾಸ್‌ಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಆದರೆ, ಪ್ರಭಾಸ್ ಅಭಿಮಾನಿಗಳು ಇದನ್ನು ರಜನಿಕಾಂತ್‌ಗೆ ಹೋಲಿಸಿ ನೋಡ್ತಿದ್ದಾರೆ. ಯಾಕೆ ಗೊತ್ತಾ? ರಜನಿಕಾಂತ್ ಅಭಿಮಾನಿಗಳು 2007ರಿಂದ ಮೇಡಂ ಟುಸ್ಸಾಡ್ಸ್‌ನಲ್ಲಿ ತಮ್ಮ ಆರಾಧಕನ ಪ್ರತಿಮೆ ನಿರ್ಮಿಸಲು ಸಹಿ ಚಳವಳಿ ನಡೆಸುತ್ತಲೇ ಇದ್ದಾರೆ. ಆದರೆ, ಇದುವರೆಗೂ ಅವರ ಬೇಡಿಕೆ ಈಡೇರಿಲ್ಲ.

2011ರಲ್ಲಂತೂ ರಜನಿಯ 63 ಸಾವಿರ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಅಭಿಯಾನ ನಡೆಸಿದ್ದರು. ತಮಿಳುನಾಡಿನ ಎಲ್ಲೆಡೆ ಮೇಡಂ ಟುಸ್ಸಾಡ್ಸ್ ವಿರುದ್ಧ ಪ್ರತಿಭಟನೆಗಳೂ ನಡೆದಿದ್ದವು. ಈ ವೇಳೆ ಸೂಪರ್‌ಸ್ಟಾರ್ ಅಳಿಯ ಧನುಷ್, ‘ರಜನಿಕಾಂತ್ ಪ್ರತಿಮೆ ಸ್ಥಾಪಿಸಲು ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದಾರೆ. ಈ ಬಗ್ಗೆ ಮೇಡಂ ಟುಸ್ಸಾಡ್ಸ್ ಕಮಿಟಿ ಬಳಿಯೂ ಎರಡು ಸುತ್ತಿನ ಮಾತುಕತೆ ಮುಗಿದಿದೆ. ಮುಂದಿನ ವರ್ಷದ ಬರ್ತ್‌ಡೇ ವೇಳೆ ಅಭಿಮಾನಿಗಳ ಬಯಕೆ ಈಡೇರಿಸುವುದಾಗಿ ಕಮಿಟಿ ಭರವಸೆ ನೀಡಿದೆ’ ಎಂದು ಹೇಳಿದ್ದರು. ಧನುಷ್ ಹೀಗೆ ಹೇಳಿ ಐದು ವರ್ಷವೇ ಕಳೆದರೂ ಮೇಡಂ ಟುಸ್ಸಾಡ್ಸ್‌ನಲ್ಲಿ ಇಲ್ಲಿಯ ತನಕ ರಜನಿಯ ಪ್ರತಿಮೆ ಸ್ಥಾಪನೆಗೊಂಡಿಲ್ಲ. ರಜನಿಕಾಂತ್ ಅವರ ಈ ಹಿನ್ನಡೆಯನ್ನೇ ಆಧರಿಸಿ ಗೌತಮ್ ತ್ರಿವೇದಿ ಇತ್ತೀಚೆಗೆ ಟ್ವೀಟಿಸಿದ್ದರು; ‘ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನ ಪ್ರತಿಮೆಯನ್ನೇ ರಜನಿ ತಮ್ಮ ಮನೆಯಲ್ಲಿ ಇಟ್ಕೊಳ್ತಾರಂತೆ’ ಅಂತ!

ಪ್ರಭಾಸ್ ಅಭಿಮಾನಿಗಳು ಹಿಗ್ಗುವುದಕ್ಕೂ ಇದೇ ಕಾರಣವಾಗಿದೆ. ಈ ಗೌರವಕ್ಕೆ ಪಾತ್ರವಾದ ದಕ್ಷಿಣ ಭಾರತದ ಮೊದಲ ಸ್ಟಾರ್ ನಟ ಪ್ರಭಾಸ್ ಎನ್ನುವುದು ಅವರಿಗೆ ಹೆಮ್ಮೆ. ಇದುವರೆಗೆ ಅಲ್ಲಿ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅಮೀರ್‌ಖಾನ್, ಕತ್ರಿನಾ ಕ್ೈ ಅವರಂಥ ಬಾಲಿವುಡ್ ತಾರೆಗಳಷ್ಟೇ ಪ್ರತಿಮೆಗಳಾಗಿ ಮ್ಯೂಸಿಯಂ ಸೇರಿದ್ದಾರೆ. ಭಾರತದ ಪ್ರಾದೇಶಿಕ ಭಾಷಾ ಚಿತ್ರಗಳ ಯಾವ ನಟರೂ ಅಲ್ಲಿ ಜಾಗ ಪಡೆದಿಲ್ಲ. ಹೀಗಾಗಿ, ಪ್ರಭಾಸ್‌ಗೆ ಸಿಕ್ಕಿರುವ ಈ ಗೌರವ ಎಲ್ಲರ ಗಮನ ಸೆಳೆದಿದೆ. ರಜನಿಕಾಂತ್ ಅವರಿಗೂ ಹುಬ್ಬೇರಿಸುವ ವಿಚಾರವೇ ಆಗಿದೆ.