ಕನ್ನಡದ ನಟಿಯರಿಗೆ ಈಗ ಟಾಲಿವುಡ್‌ನಲ್ಲಿ ಬಹುಬೇಡಿಕೆ ಇರುವುದು ಹೊಸತೇನಲ್ಲ. ಈಗಾಗಲೇ ಅಲ್ಲಿ ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್ ಹಾಗೂ ನಭಾ ನಟೇಶ್ ಸೇರಿದಂತೆ ಹಲವರು ಸಾಕಷ್ಟುಬ್ಯುಸಿ ಇದ್ದಾರೆ. ಆ ಸಾಲಿಗೆ ಈಗ ನಟಿ ಆಶಿಕಾ ರಂಗನಾಥ್ ಕೂಡ ಸೇರ್ಪಡೆ ಆಗುವ ಸಾಧ್ಯತೆಗಳಿವೆ. ಅಲ್ಲಿನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾವೊಂದಕ್ಕೆ ನಾಯಕಿ ಆಗಲು ಆಶಿಕಾ ರಂಗನಾಥ್ ಅವರಿಗೆ ಆಫರ್ ಬಂದಿದೆ ಎನ್ನಲಾಗಿದೆ.
ಸದ್ಯಕ್ಕೆ ಅದು ಮಾತುಕತೆಯ ಹಂತದಲ್ಲಿದ್ದು, ಇಷ್ಟರಲ್ಲೇ ಫೈನಲ್ ಆಗುವುದು ಗ್ಯಾರಂಟಿ ಎನ್ನುತ್ತಾರೆ ಆಶಿಕಾ ರಂಗನಾಥ್.
ಇಂಥಾ ಸಂದರ್ಭದಲ್ಲೇ ಅವರು ಹಾಟ್ ಫೋಟೋಶೂಟ್ ಮಾಡಿಸಿಕೊಂಡು ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಅಂತನ್ನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸಿಕ್ಕಾಪಟ್ಟೆಬೋಲ್ಡ್ ಆಗಿ ಪೋಸು ನೀಡಿರುವುದರಿಂದ ಫೋಟೋಗಳು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅವತಾರ್ ಪುರುಷ ಚಿತ್ರೀಕರಣದಲ್ಲಿ
‘ರಾರಯಂಬೋ 2’ ಚಿತ್ರದ ಭರ್ಜರಿ ಸಕ್ಸಸ್ ನಂತರ ಆಶಿಕಾ ಬಹು ಬೇಡಿಕೆಯ ನಟಿ ಆಗಿರುವುದು ನಿಜ. ಪ್ರಸ್ತುತ ಅವರು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಹಾಗೂ ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ‘ರಾರಯಂಬೋ 2’ ನಂತರ ಅವರು ಮತ್ತೆ ಶರಣ್ ಜೋಡಿಯಾಗಿ ಅಭಿನಯಿಸುತ್ತಿರುವ ಚಿತ್ರವಿದು. ಈಗಾಗಲೇ ಮೊದಲ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ಕೇರಳಕ್ಕೆ ಹೋಗಿ ಬಂದಿದೆ. ಕೇರಳದಲ್ಲಿ ಒಟ್ಟು 16 ದಿನಗಳ ಚಿತ್ರೀಕರಣ ನಡೆದಿಯಂತೆ.
‘ಕೇರಳದಲ್ಲೀಗ ಸಿಕ್ಕಾಪಟ್ಟೆಬಿಸಿಲು. ಅಲ್ಲಿನ ಸುಂದರ ತಾಣಗಳನ್ನೇ ಚಿತ್ರತಂಡ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡಿತ್ತು. ಹಾಗೆಯೇ ಮೈ ಆಟೋಗ್ರಾಫ್ ಚಿತ್ರದ ಚಿತ್ರೀಕರಣದ ಜಾಗದಲ್ಲೂ ಚಿತ್ರೀಕರಣ ನಡೆಯಿತು. ಶರಣ್ ಸರ್ ಜತೆಗೆ ಇದು ಎರಡನೇ ಸಿನಿಮಾ. ಸೆಟ್‌ನಲ್ಲಿ ಅವರಿದ್ದರೆ ಕಾಮಿಡಿಗೆ ಕೊರತೆ ಇರುವುದಿಲ್ಲ’ ಎನ್ನುತ್ತಾರೆ ಆಶಿಕಾ. ಈ ಚಿತ್ರದಲ್ಲಿ ಅವರು ಫಾರಿನ್ ರಿಟರ್ನ್‌ಡ್ ಹುಡುಗಿ ಕಾಣಿಸಿಕೊಳ್ಳುತ್ತಿದ್ದಾರೆ.
ತೆಲುಗು ಮತ್ತು ತಮಿಳು ಸಿನಿಮಾಗಳಿಂದಲೂ ಆಫರ್ ಬರುತ್ತಿವೆ. ಸದ್ಯಕ್ಕೆ ಒಂದು ತೆಲುಗು ಚಿತ್ರದ ಮಾತುಕತೆ ಫೈನಲ್ ಹಂತಕ್ಕೆ ಬಂದಿದೆ. ಒಳ್ಳೆಯ ಕತೆ ಮತ್ತು ಪಾತ್ರ ಸಿಕ್ಕರೆ ಮಾತ್ರ ಅಲ್ಲಿಗೆ ಹೋಗೋಣ ಎನ್ನುವ ಆಲೋಚನೆಯಿಂದಾಗಿ ಈ ಮಾತುಕತೆಗಳು ತಡವಾಗುತ್ತಿವೆ.- ಆಶಿಕಾ ರಂಗನಾಥ್
