Asianet Suvarna News Asianet Suvarna News

ಮುಗುಳುನಗೆ ಬೆಡಗಿಗೆ ಡಿಮ್ಯಾಂಡೋ- ಡಿಮ್ಯಾಂಡ್..

ಮುಗುಳುನಗೆ ಬೆಡಗಿ ಆಶಿಕಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Ashika Ranganath Talk About Her Film Journy

ಬೆಂಗಳೂರು (ಜ.15): ಮುಗುಳುನಗೆ ಬೆಡಗಿ ಆಶಿಕಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ನಿಮಗೆ ತುಂಬಾ ಡಿಮ್ಯಾಂಡ್ ಇದೆಯಂತೆ?

ಡಿಮ್ಯಾಂಡ್ ಇದೆ ಅಂದ್ರೂ ಕಷ್ಟಾನೇ, ಇಲ್ಲಾಂದ್ರೂನು ಕಷ್ಟಾನೇ. ಆದರೆ, ನಾನು ಖಾಲಿ ಅಂತೂ ಕೂತಿಲ್ಲ. ನನ್ನ ಪ್ರತಿಭೆಗೆ ತಕ್ಕಂತೆ ಅವಕಾಶಗಳು ಸಿಗುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಕತೆ ಪೂರ್ತಿ ಹೇಳುತ್ತಿದ್ದಾರೆ. ಹೀಗಾಗಿ ನಾನು ಕೂಡ ನಟಿ ಎಂಬುದನ್ನು ವಿಶ್ವಾಸ ಮೂಡಿಸುವಂತಹ ಚಿತ್ರಗಳು, ಕತೆಗಳು ನನ್ನ ಹುಡುಕಿ ಬರುತ್ತಿವೆ.

ಇದೆಲ್ಲ ‘ಮುಗುಳುನಗೆ’ ಪ್ರಭಾವನಾ?

ಒಂದು ರೀತಿ ಹೌದು ಅಂತಲೇ ಹೇಳಬೇಕು. ಯಾಕೆಂದರೆ ಯೋಗರಾಜ್ ಭಟ್ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ ನಾಯಕ. ಹೀಗಾಗಿ ಮೂವರು ನಾಯಕಿಯರು ಇದ್ದರೂ ನನಗೆ ಕಮರ್ಷಿಯಲ್ಲಾಗಿ ಬ್ರೇಕ್ ಕೊಟ್ಟ ಸಿನಿಮಾ. ಮಹೇಶ್ ಬಾಬು ಅವರ ‘ಕ್ರೇಜಿ ಬಾಯ್’ ವಿಶ್ವಾಸ ತುಂಬಿಸಿದರೆ, ‘ಮುಗುಳುನಗೆ’ ಚಿತ್ರರಂಗದಲ್ಲಿ ಜಾಗ ಕಲ್ಪಿಸಿತು.

ಈಗ ಮಾಡುತ್ತಿರುವ ಚಿತ್ರಗಳ ಕುರಿತು ಹೇಳುವುದಾದರೆ?

ಶರಣ್ ಅವರ ಜತೆಗೆ ‘ರ್ಯಾಂಬೋ - 2’ ಚಿತ್ರೀಕರಣ ನಡೆಯುತ್ತಿದೆ. ಇದರ ಜತೆಗೆ ಅಜಯ್ ರಾವ್ ಅಭಿನಯದ, ಶಶಾಂಕ್ ನಿರ್ದೇಶನದ ‘ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ನಟಿಸುತ್ತಿರುವೆ. ‘ರಾಜು ಕನ್ನಡ ಮೀಡಿಯಂ’ ಇದೇ ತಿಂಗಳು 19ಕ್ಕೆ ಬಿಡುಗಡೆ.

ಯಾಕೆ ‘ರಾಜು ಕನ್ನಡ ಮೀಡಿಯಂ’ ನಿಮಗೆ ಮಹತ್ವದ ಸಿನಿಮಾ?

ನಾನು ಕ್ರೇಜಿ ಬಾಯ್ ಸಿನಿಮಾ ಮಾಡುವಾಗ ಚಿತ್ರರಂಗಕ್ಕೆ ತುಂಬಾ ಹೊಸಬಳು. ಆ ಸಿನಿಮಾ ಚಿತ್ರೀಕರಣ ಮುಗಿಸಿ ಅದರ ಬಿಡುಗಡೆಗೆ ಮೊದಲೇ ನನಗೆ ಸಿಕ್ಕ ಸಿನಿಮಾ ‘ರಾಜು ಕನ್ನಡ ಮೀಡಿಯಂ’. ನನ್ನ ಪ್ರತಿಭೆ ದಕ್ಕಿದ ಅವಕಾಶ ಇದು. ನನ್ನ ಎರಡನೇ ಸಿನಿಮಾ. ಜತೆಗೆ ಈಗ ನಟ ಸುದೀಪ್ ಅವರು ಅಭಿನಯಿಸಿರುವುದು ಕೂಡ ಒಂದು ಕಾರಣ. ಸುದೀಪ್ ಅವರು ನಟಿಸಿರುವ ಸಿನಿಮಾದಲ್ಲಿ ನಾನು ಕೂಡ ಕಾಣಿಸಿಕೊಂಡಿದ್ದೇನೆ ಎಂದು ಹೇಳುವುದಕ್ಕೆ ಖುಷಿಯಾಗುತ್ತದೆ.  

ಈ ಚಿತ್ರದಲ್ಲಿ ನಿಮ್ಮ ಪಾತ್ರ ತುಂಬಾ ಕಡಿಮೆ ಇದೆ ಅಲ್ವಾ?

ದೃಶ್ಯಗಳ ಲೆಕ್ಕದಲ್ಲಿ ನನ್ನ ಪಾತ್ರ ಚಿಕ್ಕದಾಗಿರಬಹುದು. ಆದರೆ, ಅದು ಪ್ರೇಕ್ಷಕರು ಗುರುತಿಸುವಂತಹ ಪಾತ್ರ ಎಂಬುದು ಮಾತ್ರ ಸತ್ಯ. ನಾನು ಇಲ್ಲಿ ಸ್ಕೂಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಆ ಚಿಕ್ಕ ವಯಸ್ಸಿನ ಆಕರ್ಷಣೆಗಳು- ಪ್ರೀತಿ, ಪ್ರೇಮದತ್ತ ವಾಲುವ ವಯಸ್ಸಿನ ಹುಡುಗಿ ಹೇಗಿರುತ್ತಾಳೆ ಎಂಬುದೇ ಸವಾಲು. ಅದನ್ನು ನಿಭಾಯಿಸಿದ್ದೇನೆ. ಜತೆಗೆ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವೆ.

ಮುಂದೆ ಕೂಡ ಹೀಗೆ ಚಿಕ್ಕ ಪಾತ್ರಗಳು ಬಂದರೆ ಹೇಗೆ ಸ್ವೀಕರಿಸುತ್ತೀರಿ..?

ಕತೆ ಮತ್ತು ಬ್ಯಾನರ್ ಯಾವುದು ಎನ್ನುವುದು ಮುಖ್ಯ. ಈ ಚಿತ್ರದಲ್ಲಿ ನನ್ನದು ಚಿಕ್ಕ ಪಾತ್ರವಾದರೂ  ಇದರ ನಿರ್ದೇಶಕ ನರೇಶ್ ಕುಮಾರ್ ಮೊದಲ ಚಿತ್ರ ಫಸ್ಟ್ ರ್ಯಾಂಕ್ ರಾಜು ಮೂಲಕ ಗೆದ್ದವರು. ನಿರ್ಮಾಪಕ ಸುರೇಶ್ ಈಗಾಗಲೇ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಜಾಸ್ತಿ ಯೋಚಿಸದೆ ಪಾತ್ರ ಮಾಡಿದ್ದೇನೆ.

ನಟನೆಯಲ್ಲಿ ಬ್ಯುಸಿಯಾಗಿ ಕಾಲೇಜ್‌ಗೆ ಕೈ ಕೊಟ್ರಾ?

ಎಲ್ಲಾದರೂ ಉಂಟೇ! ನಾನು ಬಿ ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ. ನಟನೆ ಜತೆಗೆ ಓದು ಇದ್ದೇ ಇರುತ್ತದೆ. ಎರಡೂ ನನ್ನ ಬದುಕಿನ ದಾರಿಗಳು. ತೆಲುಗಿನಲ್ಲೂ ಅವಕಾಶಗಳು ಬಂದಾಗ ಓದಿನ ಕಾರಣಕ್ಕೆ ನಾನು ಅಲ್ಲಿಗೆ ಹೋಗಲಿಲ್ಲ. ಹೀಗಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೈ ಬಿಡುವ ಮನಸ್ಸು ಇಲ್ಲ. ಕೊನೆ ಪಕ್ಷ ಕರೆಸ್ಪಾಂಡೆನ್ಸ್‌ನಲ್ಲಾದರೂ ಓದಿ ಮಾಸ್ಟರ್ ಡಿಗ್ರಿ ಮಾಡುವ ಆಸೆ ಇದೆ.

Follow Us:
Download App:
  • android
  • ios