Ashika Ranganath: ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' (The Odyssey) ಸಿನಿಮಾ ಕಳೆದ ವಾರ ಬಿಡುಗಡೆಯಾದ ಬಳಿಕ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ.

ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' (The Odyssey) ಸಿನಿಮಾ ಕಳೆದ ವಾರ ಬಿಡುಗಡೆಯಾದ ಬಳಿಕ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಈ ಚಿತ್ರವನ್ನು ಮೆಚ್ಚಿರುವ ಭಾರತೀಯ ಕಲಾವಿದರ ಪಟ್ಟಿಗೆ ಇದೀಗ ಕನ್ನಡ ನಟಿ ಆಶಿಕಾ ರಂಗನಾಥ್ ಕೂಡ ಸೇರ್ಪಡೆಯಾಗಿದ್ದಾರೆ. ಚಿತ್ರದ ಬಗ್ಗೆ ತಮ್ಮ ಅನಿಸಿಕೆಯನ್ನು ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, 'ದಿ ಒಡಿಸ್ಸಿ'ಯ ಜಗತ್ತು ತನಗೆ ಮಹಾಭಾರತವನ್ನು ನೆನಪಿಸಿತು ಎಂದು ಹೇಳಿದ್ದಾರೆ.

ಆಶಿಕಾ ತಮ್ಮ ಪೋಸ್ಟ್‌ನಲ್ಲಿ, "ಸಿನಿಮಾ ನೋಡಿದ ಹಲವು ದಿನಗಳಾದರೂ 'ದಿ ಒಡಿಸ್ಸಿ' ಇನ್ನೂ ನನ್ನ ಮನಸ್ಸಿನಲ್ಲಿ ಉಳಿದಿದೆ. ಸಿನಿಮಾ ನೋಡುತ್ತಿದ್ದಾಗ ಅದರ ಜಗತ್ತಿನಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದೆ. ಆದರೆ ಅದರಲ್ಲೇನೋ ವಿಚಿತ್ರವಾಗಿ ನನಗೆ ಪರಿಚಿತವಾದ ಅನುಭವವೊಂದು ಮೂಡುತ್ತಿತ್ತು. ಅದು ಏನು ಎನ್ನುವುದು ಅಂದು ಅರ್ಥವಾಗಲಿಲ್ಲ. ಬಳಿಕ ಈ ಸಿನಿಮಾವನ್ನು ಬೇರೆ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ ಒಂದು ಬರಹ ಓದಿದಾಗ ಎಲ್ಲವೂ ಸ್ಪಷ್ಟವಾಯಿತು," ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, "ನಾನು ಮಹಾಭಾರತದ ಕುರಿತ ಹಲವು ಪುಸ್ತಕಗಳನ್ನು ಓದಿದ್ದೇನೆ. ವಿಶೇಷವಾಗಿ ಶ್ರೀಕೃಷ್ಣನ ಅಂತಿಮ ದಿನಗಳು ಮತ್ತು ಕಲಿಯುಗದ ಆರಂಭದ ಕುರಿತು ಓದಿರುವುದರಿಂದ, ಅದೇ ದೃಷ್ಟಿಕೋನದಲ್ಲಿ 'ದಿ ಒಡಿಸ್ಸಿ'ಯನ್ನು ನೋಡುವುದು ನನಗೆ ಅತ್ಯಂತ ಕುತೂಹಲಕರ ಅನುಭವವಾಯಿತು. ಆ ವಿಶ್ಲೇಷಣೆಯಲ್ಲಿ 'ದಿ ಒಡಿಸ್ಸಿ'ಯನ್ನು, ಕಲಿಯುಗ ಆರಂಭವಾಗಿದೆ ಎಂಬುದನ್ನು ಶ್ರೀಕೃಷ್ಣ ಅರಿತುಕೊಳ್ಳುವ ಕ್ಷಣದೊಂದಿಗೆ ಹೋಲಿಸಲಾಗಿತ್ತು. ಅದು ಒಂದೇ ಘಟನೆಯಿಂದ ಸಂಭವಿಸಿದ ಬದಲಾವಣೆ ಅಲ್ಲ; ಮನುಷ್ಯರ ಸ್ವಭಾವ, ಸಮಾಜವನ್ನು ಹಿಡಿದಿಟ್ಟಿದ್ದ ಮೌಲ್ಯಗಳಲ್ಲಿ ನಿಧಾನವಾಗಿ ಉಂಟಾಗುವ ಬದಲಾವಣೆಗಳ ಮೂಲಕ ಆ ಯುಗಾಂತರ ಸಂಭವಿಸುತ್ತದೆ ಎಂಬ ಅಭಿಪ್ರಾಯ ನನ್ನನ್ನು ಆಕರ್ಷಿಸಿತು," ಎಂದು ತಿಳಿಸಿದ್ದಾರೆ.

ಆದರೆ ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿರುವ ಆಶಿಕಾ, "ಒಂದು ಕಥೆ ಮತ್ತೊಂದು ಕಥೆಯಿಂದ ಪ್ರೇರಿತವಾಗಿದೆ ಅಥವಾ ನಕಲು ಮಾಡಲಾಗಿದೆ ಎಂದು ನಾನು ಹೇಳುತ್ತಿಲ್ಲ. ವಿಭಿನ್ನ ಸಂಸ್ಕೃತಿ ಮತ್ತು ಪುರಾಣಗಳಲ್ಲಿನ ಎರಡು ಕಥೆಗಳು ಒಂದೇ ರೀತಿಯ ಶಾಶ್ವತ ವಿಚಾರವನ್ನು ವಿಭಿನ್ನ ರೀತಿಯಲ್ಲಿ ನಿರೂಪಿಸಿರುವುದು ನನಗೆ ಆಶ್ಚರ್ಯ ಮತ್ತು ಕುತೂಹಲವನ್ನುಂಟು ಮಾಡಿದೆ," ಎಂದು ಹೇಳಿದ್ದಾರೆ.

ಹಸ್ತಕ್ಷೇಪ ಮಾಡುವುದಿಲ್ಲ

ಗ್ರೀಕ್ ಪುರಾಣಗಳ ಪ್ರಕಾರ, ಒಡಿಸಿಯಸ್ ತನ್ನ ಸಾಹಸಯಾತ್ರೆಯನ್ನು ಪೂರ್ಣಗೊಳಿಸುವುದರೊಂದಿಗೆ 'ಏಜ್ ಆಫ್ ಹೀರೋಸ್' ಅಂತ್ಯಗೊಂಡು 'ಏಜ್ ಆಫ್ ಐರನ್' ಆರಂಭವಾಗುತ್ತದೆ. ಈ ಯುಗದಲ್ಲಿ ದೇವರುಗಳು ಮಾನವರ ಬದುಕಿನಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಯುದ್ಧಗಳು, ಸಂಘರ್ಷಗಳು ಮತ್ತು ನೈತಿಕ ಮೌಲ್ಯಗಳ ಕುಸಿತ ಈ ಕಾಲದ ಪ್ರಮುಖ ಲಕ್ಷಣಗಳಾಗಿವೆ.

ಇದೇ ರೀತಿಯಲ್ಲಿ, ಭಾರತೀಯ ಮಹಾಕಾವ್ಯ ಮಹಾಭಾರತದಲ್ಲೂ ಕುರುಕ್ಷೇತ್ರ ಯುದ್ಧದ ಅಂತ್ಯದೊಂದಿಗೆ ದ್ವಾಪರ ಯುಗ ಮುಗಿದು ಕಲಿಯುಗ ಆರಂಭವಾಗುತ್ತದೆ ಎಂದು ಹೇಳಲಾಗಿದೆ. ಈ ಯುಗದಲ್ಲಿ ಧರ್ಮ, ಸತ್ಯ ಮತ್ತು ಸದ್ಗುಣಗಳ ಕ್ಷಯವಾಗುತ್ತಾ ಹೋಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ಕ್ರಿಸ್ಟೋಫರ್ ನೋಲನ್ ಅವರ ಹಿಂದಿನ 'ಒಪ್ಪೆನ್‌ಹೈಮರ್' ಸಿನಿಮಾದಲ್ಲಿಯೂ ಮಹಾಭಾರತದ ಕೆಲವು ಉಲ್ಲೇಖಗಳು ಮತ್ತು ಸಾಮ್ಯತೆಗಳ ಬಗ್ಗೆ ಚರ್ಚೆಗಳು ನಡೆದಿದ್ದವು.