Asianet Suvarna News Asianet Suvarna News

ಜನರ ಮನ ಗೆದ್ದ ಅಭಿನೇತ್ರಿಯ ಆರಂಭ ದಿನಗಳ ತಲ್ಲಣಗಳು

ನಾವು ಎಷ್ಟೋ ಸಂಗತಿಗಳನ್ನು ನಿರೀಕ್ಷಿಸಿರುವುದಿಲ್ಲ. ಅವು ಹೇಗೆ  ಹೇಗೋ ಸಂಭವಿಸಿ ಬಿಡುತ್ತವೆ. ನನ್ನ  ಬದುಕಿನ ಅನೇಕ ಘಟನೆಗಳು ಹಾಗೆ ನಡೆದು  ಹೋದವು.ಅಷ್ಟೇ ನಿಜ ಹೇಳಬೇಕೆಂದರೆ ನಾನು  ಹೀಗೆ ಒಬ್ಬ ಅಭಿನೇತ್ರಿಯಾಗಬಲ್ಲೆನೆಂಬ ನಂಬಿಕೆಯೇ ನನಗೆ ಇರಲಿಲ್ಲ.   ಎನ್.ಎಸ್.ಡಿ.ಗೆ ಹೋದಾಗ ನಾನೊಬ್ಬ ತಂತ್ರಜ್ಞಳಾಗಿ  ರೂಪುಗೊಳ್ಳುವುದು ಮಾತ್ರ ಸಾಧ್ಯವೇನೋ  ಅಂದುಕೊಂಡಿದ್ದೆ. ಆ ಬಗ್ಗೆ ನನಗೆ ಯಾವ ವಿಷಾದವೂ
ಇರಲಿಲ್ಲ.

Artist B Jayashri talk about Women day

ಬೆಂಗಳೂರು (ಮಾ. 08):  ನಾವು ಎಷ್ಟೋ ಸಂಗತಿಗಳನ್ನು ನಿರೀಕ್ಷಿಸಿರುವುದಿಲ್ಲ. ಅವು ಹೇಗೆ  ಹೇಗೋ ಸಂಭವಿಸಿ ಬಿಡುತ್ತವೆ. ನನ್ನ  ಬದುಕಿನ ಅನೇಕ ಘಟನೆಗಳು ಹಾಗೆ ನಡೆದು  ಹೋದವು.ಅಷ್ಟೇ ನಿಜ ಹೇಳಬೇಕೆಂದರೆ ನಾನು  ಹೀಗೆ ಒಬ್ಬ ಅಭಿನೇತ್ರಿಯಾಗಬಲ್ಲೆನೆಂಬ ನಂಬಿಕೆಯೇ ನನಗೆ ಇರಲಿಲ್ಲ.   ಎನ್.ಎಸ್.ಡಿ.ಗೆ ಹೋದಾಗ ನಾನೊಬ್ಬ ತಂತ್ರಜ್ಞಳಾಗಿ  ರೂಪುಗೊಳ್ಳುವುದು ಮಾತ್ರ ಸಾಧ್ಯವೇನೋ  ಅಂದುಕೊಂಡಿದ್ದೆ. ಆ ಬಗ್ಗೆ ನನಗೆ ಯಾವ ವಿಷಾದವೂ
ಇರಲಿಲ್ಲ. ನಾನು ಎಂದೂ ಮಹತ್ವಾಕಾಂಕ್ಷಿಯಾಗಿರಲಿಲ್ಲ.  ಇಷ್ಟಕ್ಕೂ ನನ್ನ ಬದುಕಿನಲ್ಲಿ ಮಹತ್ವವಾದುದರತ್ತ ಎಡತಾಕುವ  ಆಲೋಚನೆ ಆಕಸ್ಮಿಕವಾಗಿಯೂ ಬರುವಂತಿರಲಿಲ್ಲ. ಇದ್ದುದರಲ್ಲಿ ಇದ್ದುದನ್ನೇ ಸರಿ ಹೊಂದಿಸಿಕೊಳ್ಳುವ ಅಹನ್ಯಹನಿ. ಅಷ್ಟೇ.ಎನ್.ಎಸ್.ಡಿ.ಯಲ್ಲಿ ಪ್ರಾರಂಭದಲ್ಲೇ ‘ನಿನ್ನನ್ನು ಹೇಗೆ ಅರ್ಥೈಸಿಕೊಂಡಿದ್ದೀ, ನಿನ್ನ ಸಾಮರ್ಥ್ಯವೇನು’ ಎಂಬ ಥರದ  ಎಂದು ಸ್ವ ವಿಮರ್ಶೆಯುಳ್ಳ ಪ್ರಬಂಧ ಸಿದ್ಧಪಡಿಸಬೇಕು. ಆಗ ನಾನು ಬರೆದುಕೊಂಡಿದ್ದೇನು ಗೊತ್ತಾ? ನಾನು  ಕಲಾವಿದೆಯಾಗಲಾರೆ ಅನ್ನಿಸುತ್ತೆ. ಕಲಾವಿದೆಗೆ ಇರಬೇಕಾದ  ಚೆಲುವು ನನ್ನಲ್ಲಿಲ್ಲ. ನನ್ನ ಮುಖದ ಮೇಲೆ ಮೊಡವೆಗಳು  ಮಾಡಿದ ಹಳ್ಳಗಳಿವೆ. ಮಿಗಿಲಾಗಿ ನನ್ನದು ಒಂದು ರೀತಿಯ ಒರಟು-ಒಡ್ಡುತನ. ಹೀಗಾಗಿ ನನ್ನಲ್ಲಿ ಅನೇಕ  ಮಿತಿಗಳಿವೆ...ಇತ್ಯಾದಿ. ಅಧ್ಯಾಪಕಿ ಶೀಲಾಭಾಟಿಯಾ  ಅವರು ‘ನಿನ್ನ ಆಲೋಚನೆ ತಪ್ಪು’ ಅಂದರು. ‘‘ನಿನಗೆ  ಎಲ್ಲವೂ ಸಾಧ್ಯ. ನಿನ್ನ ಶಕ್ತಿ-ಸಾಮರ್ಥ್ಯವನ್ನೇ  ನೀನು ಸರಿಯಾಗಿ ಗ್ರಹಿಸಿಲ್ಲ. ಮೊದಲು ಆ ಭಾವನೆಗಳನ್ನು ತೊಡೆದು ಹಾಕು. ಚೆಲುವಿನ ಬಗ್ಗೆ ನಿನ್ನ ಅರ್ಥೈಕೆಯೂ ಸರಿಯಲ್ಲ. ನಿನಗೆ ಈ  ಶಿಕ್ಷಣ ಅರ್ಥ ಮಾಡಿಸುತ್ತದೆ’’ ಎಂದಿದ್ದರು.

ನಾನು ಓದಿಲ್ಲ. ನನಗೆ ಹಾಗೆ  ಓದು-ಶಿಸ್ತು ಇದ್ದವರ ಸ್ನೇಹವೂ ಇರಲಿಲ್ಲ. ನನಗೆ ಇಂಗ್ಲೀಷ್  ಬರೋಲ್ಲ. ಆದರೆ ನನ್ನದೇ ಆದ ರೀತಿಯಲ್ಲಿ ಯಾವ ಭಾಷೆಯವರನ್ನಾದರೂ ಮಾತಾಡಿಸಬಲ್ಲೆ.  ಭಾವನೆಗಳನ್ನು ಅರ್ಥಮಾಡಿಸಬಲ್ಲೆ. ಎಷ್ಟೋ ಸಾರಿ
ಅಂದುಕೊಳ್ಳುತ್ತೇನೆ.ಆ ಬಗೆಯ ವಿದ್ಯೆ ಇಲ್ಲದ್ದರಿಂದಲೇ ಈ  ಜಯಶ್ರೀಗೆ ಅವಳದೇ ಆದ ಪ್ರತ್ಯೇಕ ಅಸ್ತಿತ್ವ ಇದೆ ಅಂತ.  ಅಂಥ ಶಿಕ್ಷಣದ ಶಿಸ್ತು ಇದ್ದಿದ್ದರೆ ಈಗಿನ ಸ್ವಚ್ಛ, ನೇರ-ನಡೆ ಬದಲು ‘ಸೋಗು’ ಹಾಕುತ್ತಿದ್ದೆನೇನೋ. ನನಗೆ ಎಷ್ಟೋ
ಬಾರಿ ಇತರರ ನಡವಳಿಕೆಯಲ್ಲಿ ‘ನಿಜ’ ಕಂಡಿಲ್ಲ.  ವಿನಾಕಾರಣದ ‘ಸೋಗು’ ಕಾಣಿಸ್ತಿರುತ್ತೆ. ಆ ಮಟ್ಟಿಗೆ ನನ್ನ ನಿರಕ್ಷರತೆಯೇ ನನಗೆ ಬಹಳಷ್ಟು ಕೊಟ್ಟಿದೆ; ಮುಚ್ಚಿಡದೆ ತೆರೆದುಕೊಳ್ಳುತ್ತದೆ ಅನ್ನಿಸುತ್ತೆ.
ಬಾಲ್ಯದ ದಿನಗಳಲ್ಲಿ ಕಂಪನಿ ಮನೇಲಿ ವಾಸ. ಬೆಳಗಿನ  ಹೊತ್ತು ಕಾಡಿನಲ್ಲಿ ದನಗಳ ಜೊತೆ ತಿರುಗೋದು, ಸ್ನೇಹಿತರು  ಆ ದನಗಾಹಿಗಳೇ. ಸಂಜೆಗೆ ನಾಟಕ. ನನಗೆ ಬೇರೆ ಸ್ನೇಹಿತರು  ಅಂತ ಇರಲೇ ಇಲ್ಲ. ನಾಟಕದವರನ್ನು ಸಾಮಾಜಿಕರು
ಪ್ರೀತಿಯಿಂದ ಒಳಗೊಳ್ಳುತ್ತಲೂ ಇರಲಿಲ್ಲ. ಅಲ್ಲಿ ಬೆರಗಿನ  ನೋಟವಿತ್ತು. ಆಪ್ತತೆಯಲ್ಲ. ಅವತ್ತು ಹುಟ್ಟಿಕೊಂಡ ನಾಚಿಕೆ  ಸಂಕೋಚಗಳು ಇವತ್ತು ಅಂಟಕೊಂಡು ಬಂದಿವೆ. ಶ್ರೀರಂಗರು ‘ಆಕಿನ್ನ ದೆಹಲಿಗೆ ಕಳಿಸ್ತ್ರೀ’ ಅಂದದ್ದು, ಒತ್ತಾಯ
ಮಾಡಿ ಕಳಿಸಿದ್ದು ನನ್ನ ಬದುಕಿನ ಬಹು ದೊಡ್ಡ ತಿರುವು  ಅನ್ನಿಸುತ್ತೆ. ಕಂಪನಿ ಬಿಟ್ರೆ ಶಿವಾನಂದ ಮಾಮನ ‘ಕಲಾಕುಂಜ’ ತಂಡದ ನಾಟಕಗಳಲ್ಲಿ ನಟಿಸ್ತಿದ್ದೆ. ‘ಕುರುಡು ಕಾಂಚಾಣ’ದಲ್ಲಿ  ನನ್ನ ಅಭಿನಯ ನೋಡಿಯೇ ಶ್ರೀರಂಗರು ಎನ್‌ಎಸ್‌ಡಿಗೆ ಹೋಗಲಿ ಅಂದರು. ಅದು ಇವತ್ತಿಗೆ ನನ್ನನ್ನು ಈ ಹಂತಕ್ಕೆ  ತಂದು ನಿಲ್ಲಿಸಿದೆ. ಎನ್‌ಎಸ್‌ಡಿಯಿಂದ ಬಂದ ಮೇಲೆ ಮೊದಲು ‘ಜಸ್ಮಾ ಓಡನ್’ ನಿರ್ದೇಶಿಸಿದೆ. ಅದು ದೆಹಲಿಯ  ಪ್ರಯೋಗಗಳ ಹಾಗೇ ಇತ್ತು. ಅದು ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು  ಮಾಡಿದ್ದು. ಮುಂದೆ ಎಂದೂ ನನ್ನ  ಯಾವ ನಾಟಕದಲ್ಲೂ ದೆಹಲಿಯ  ಪ್ರಯೋಗಗಳ ಪ್ರತಿಕೃತಿ ಅನ್ನುವಂಥ  ಛಾಯೆಗೂ ಅವಕಾಶ ಕೊಡಲಿಲ್ಲ. ಆದರೆ ಹಾಗೆ ಬ್ರ್ಯಾಂಡ್ ಮಾಡುವ ಟೀಕಾಕಾರರಿಗೇನೂ  ಕಡಿಮೆ ಇಲ್ಲ. 

Follow Us:
Download App:
  • android
  • ios