ಕಾಫಿ ವಿತ್ ಕರಣ್‌ನಲ್ಲಿ ಜಾಹ್ನವಿ, ಅರ್ಜುನ್ ಕಪೂರ್ ಭಾಗಿ | ನಾನು ಒಂಟಿಯಲ್ಲ ಎಂದ ಅರ್ಜುನ್ | ಇಶಾನ್ ಜೊತೆಗಿನ ಸಂಬಂಧ ನಿರಾಕರಿಸಿದ ಜಾಹ್ನವಿ
ಮುಂಬೈ (ನ.26): ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕಾಫಿ ವಿತ್ ಕರಣ್ ಈ ವಾರ ತುಸು ಭಿನ್ನವಾಗಿತ್ತು. ಈ ವಾರ ಜಾಹ್ನವಿ ಕಪೂರ್ ಹಾಗೂ ಸಹೋದರ ಅರ್ಜುನ್ ಕಪೂರ್ ಅತಿಥಿಗಳಾಗಿ ಆಗಮಿಸಿದ್ದರು.
ಮೊದಲು ಮಾತು ಆರಂಭಿಸಿದ ಕರಣ್, ಮೊದಲು ಫ್ಯಾಮಿಲಿ ಬಗ್ಗೆ, ಸಂಬಂಧಗಳ ಬಗ್ಗೆ ಮಾತನಾಡಿದರು. ನಂತರ ಜಾಹ್ನವಿ ಹಾಗೂ ಅರ್ಜುನ್ ನಡುವಿನ ಬಾಂಧವ್ಯದ ಬಗ್ಗೆ ಮಾತಿಗೆಳೆದಾಗ, ಅರ್ಜುನ್ ಭಾವುಕರಾಗಿ ಉತ್ತರಿಸಿದರು. ಸಂದರ್ಭ ಎಲ್ಲವನ್ನು ಬದಲಾಯಿಸುತ್ತದೆ. ನನ್ನ ಶತ್ರುಗಳಿಗೂ ಕೆಟ್ಟದನ್ನೂ ಬಯಸುವುದಿಲ್ಲ ನಾನು. ಜಾಹ್ನವಿ ಹಾಗೂ ಖುಷಿಗಾಗಿ ನಾವು ಮನಃಪೂರ್ವಕವಾಗಿ ಬೆಂಬಲಕ್ಕೆ ನಿಂತಿದ್ದೇವೆ. ಅವರ ಜೊತೆಗಿದ್ದೇವೆ. ನನ್ನ ತಾಯಿಯೂ ಅದನ್ನೇ ಬಯಸಿದ್ದರು. ಆಕೆ ಬದುಕಿದ್ದರೆ ಅವರೇ ಹೇಳುತ್ತಿದ್ದರು, ನೀವೂ, ಅವರೂ ಚೆನ್ನಾಗಿರಿ. ಜೀವನ ತುಂಬಾ ಚಿಕ್ಕದು, ದ್ವೇಷ, ಅಸೂಯೆಗಳು ಯಾರಿಗೂ ಒಳ್ಳೆಯದಲ್ಲ. ಅಷ್ಟೊಂದು ಸಮಯವೂ ನಮಗಿಲ್ಲ’ ಎಂದರು.
ಜಾಹ್ನವಿಕಪೂರ್ ಕಡೆ ಮಾತು ತಿರುಗಿಸಿದ ಕರಣ್, ನೀವು ಇಶಾನ್ ಕಟ್ಟರ್ ಜೊತೆ ನೀವು ಡೇಟಿಂಗ್ ನಡೆಸುತ್ತಿದ್ದೀರಾ ಎಂದಾಗ ಖಂಡಿತ ಇಲ್ಲ ಎಂದು ಜಾಹ್ನವಿ ನುಣುಚಿಕೊಂಡರು. ಕೂಡಲೇ ಅರ್ಜುನ್, ಆದರೆ ಇಶಾನ್ ಯಾವಾಗಲೂ ಜಾಹ್ನವಿ ಹಿಂದೆಯೇ ಇರುತ್ತಾನೆ ಎಂದು ತಂಗಿಯ ಕಾಲೆಳೆದರು.
ಹೀಗೆ ಮಾತು ಮುಂದುವರೆಯುತ್ತಾ, ಅರ್ಜುನ್ ಡೇಟಿಂಗ್ ಬಗ್ಗೆ ಕರಣ್ ಕೇಳಿದಾಗ ತುಟಿಕ್ ಪಿಟಿಕ್ ಎನ್ನಲಿಲ್ಲ. ಮಲೈಕಾ ಅರೋರಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ರೂಮರ್ ಬಗ್ಗೆ ಉತ್ತರಿಸದೇ ಮೌನವಾಗಿಯೇ ಇದ್ದರು ಅರ್ಜುನ್.
