ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

‘ವೇರ್ ಇಸ್ ಮೈ ಕನ್ನಡಕ’ ಚಿತ್ರದ ಸಂಗತಿಗಳು ಬಾಲಿವುಡ್ ಕಡೆಯಿಂದಲೇ ಹೊರ ಬೀಳುತ್ತಿರುವುದಕ್ಕೂ ಕಾರಣವಿದೆ. ಚಿತ್ರಕ್ಕೆ ಗಣೇಶ್ ಹೀರೋ ಎನ್ನುವುದನ್ನು ಬಿಟ್ಟರೆ, ಚಿತ್ರದ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರೆಲ್ಲ ಮುಂಬೈನವರು. ಬಾಲಿವುಡ್‌ನ ಪ್ರತಿಷ್ಟಿತ ಸಂಸ್ಥೆಯೊಂದು ಬಹು ಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿರುವ ಚಿತ್ರವಿದು. ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ರಾಜ್ ಮತ್ತು ದಾಮಿನಿ ಜೋಡಿ ಇದರ ನಿರ್ದೇಶಕರು. ಚಿತ್ರಕ್ಕೆ ಅವರೇ ಚಿತ್ರಕತೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದು, ಏಪ್ರಿಲ್ ತಿಂಗಳಿನಿಂದ ಚಿತ್ರೀಕರಣ ಶುರು.

ಅರ್ಬಾಜ್ ಖಾನ್ ಬಾಲಿವುಡ್‌ನ ಬೇಡಿಕೆಯ ನಟ. ನಟನೆಯ ಜತೆಗೆ ನಿರ್ದೇಶನ ಮತ್ತು ನಿರ್ಮಾಣದಲ್ಲೂ ಹೆಸರು ಮಾಡಿದವರು. ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್ ೨’ಗೆ ಆ್ಯಕ್ಷನ್ ಕಟ್ ಹೇಳಿದ್ದು ಅವರೇ. ಹಿಂದಿ ಸಿನಿಮಾಗಳ ಜತೆಗೆ ತೆಲುಗಿನಲ್ಲೂ ಒಂದೆರೆಡು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅವರು ಇದೇ ಮೊದಲು ಕನ್ನಡಕ್ಕೆ ಬರುತ್ತಿದ್ದಾರೆ.