ಮುಂಬೈ[ಅ.06]: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಜೀವನಾಧಾರಿತ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಅರವಿಂದ್‌ ಸ್ವಾಮಿ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್‌ ಅವರ ಪಾತ್ರ ಮಾಡಲಿದ್ದಾರೆ.

ತಮಿಳು ಭಾಷೆಯಲ್ಲಿ ‘ತಲೈವಿ’ ಹಾಗೂ ಹಿಂದಿಯಲ್ಲಿ ‘ಜಯಾ’ ಶೀರ್ಷಿಕೆಯಿಂದ ತೆರೆಕಾಣಲಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ವಿಜಯ್‌ ನಿರ್ದೇಶಿಸಲಿದ್ದಾರೆ. ಎಂಜಿಆರ್‌ ಖ್ಯಾತಿಯ ನಟ, ರಾಜಕಾರಣಿ ಎಂ.ಜಿ. ರಾಮಚಂದ್ರನ್‌ ಅವರು ಜೆ.ಜಯಲಲಿತಾ ಅವರು ರಾಜಕೀಯ ಪ್ರವೇಶಿಸಿ, ಪ್ರಬಲ ನಾಯಕಿಯಾಗಿ ಬೆಳೆಯುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಡಿಎಂಕೆ ಪಕ್ಷದಿಂದ ಹೊರಬಂದ ಬಳಿಕ ಎಂಜಿಆರ್‌ 1972ರಲ್ಲಿ ಎಐಎಡಿಎಂಕೆ ಪಕ್ಷ ಕಟ್ಟಿ, ಬೆಳೆಸಿ 1977ರಲ್ಲಿ ಅಧಿಕಾರದ ಚುಕ್ಕಾಣಿಯನ್ನೂ ಹಿಡಿದಿದ್ದರು. ದಶಕಗಳ ಕಾಲ ಅಧಿಕಾರದಲ್ಲಿದ್ದರು.