ಚಿತ್ರ ವಿಮರ್ಶೆ: ಕಿಸ್
ಕಿಸ್ ಅಂದ್ರೆ ಪ್ರೀತಿಸುವವರಿಗೆ, ಪ್ರೀತಿಸಿ ಮದುವೆ ಆದವರಿಗೆ, ಮದುವೆ ಆಗಿ ಜೀವನುದ್ದಕ್ಕೂ ಜತೆಯಾದವರಿಗೆ ಮೀಸಲಾಗಿಡುವ ಅತ್ಯಮೂಲ್ಯ ಕೊಡುಗೆ.
ದೇಶಾದ್ರಿ ಹೊಸ್ಮನೆ
ಪ್ರೀತಿಯಲ್ಲಿದ್ದವರಿಗಂತೂ ಅದೊಂದು ಮಧುರಾನುಭೂತಿಯ ಕ್ಷಣ. ಅಂತಹ ‘ಕಿಸ್’ಗಾಗಿ ಪರದಾಡುವ ಒಂದು ಮುದ್ದಾದ ಜೋಡಿಯ ಕತೆಯೇ ‘ಕಿಸ್’ ಚಿತ್ರ. ಅದರ ಔಟ್‌ಲುಕ್‌ಗೆ ತಕ್ಕಂತೆ ಇದೊಂದು ಪಕ್ಕಾ ಯೂತ್‌ಫುಲ್ ಸಿನಿಮಾ. ಕಾಲೇಜು ಹುಡುಗ-ಹುಡುಗಿಯರೇ ಇದರ ಟಾರ್ಗೆಟ್. ಆ ಲೆಕ್ಕಕ್ಕೆ ಇದೊಂದು ಶುದ್ಧ ಕಾಲೇಜು ಲವ್‌ಸ್ಟೋರಿ. ಹಾಗಂತ ಪ್ರೀತಿಗೆ ಅವರಷ್ಟೇ ರಾಯಭಾರಿಗಳಲ್ಲ. ಪ್ರೀತಿಸುವ ಪ್ರತಿ ಮನಸ್ಸುಗಳು ಅದರ ವಾರಸುದಾರರೇ. ಅವರೆಲ್ಲರಿಗೂ ಇಷ್ಟವಾಗಬಹುದಾದ ಸಿನಿಮಾ.
‘ಕಿಸ್’ ಮಾಡೋಕೆ ರೆಡಿಯಾದ ‘ಭರಾಟೆ’ ಬೆಡಗಿ ಶ್ರೀಲಿಲಾ!
ಅದೊಂದು ಸಿಂಪಲ್ ಕತೆ. ಹಗಲಿನಲ್ಲೇ ಕನಸು ಕಾಣುವ ಮುದ್ದು ಹುಡುಗಿ ಅವಳು. ಆಕೆ ಎಸೆದ ಕಲ್ಲು ಹುಡುಗನ ಕಾರಿನ ಗಾಜನ್ನು ಚೂರಾಗಿಸುತ್ತದೆ. ಆ ಘಟನೆ ಅವರಿಬ್ಬರ ನಡುವೆ ಸಂಘರ್ಷದ ಸ್ನೇಹಕ್ಕೆ ಕಾರಣವಾಗುತ್ತೆ. ಒಂದು ಒಪ್ಪಂದದ ಮೂಲಕ ಅವರಿಬ್ಬರು ನಿತ್ಯ ಜತೆಯಲ್ಲಿರಬೇಕಾಗುತ್ತದೆ. ಆ ತಾತ್ಕಾಲಿಕ ಒಪ್ಪಂದದ ಅವದಿ ಮುಗಿದು ದೂರಾಗುವ ಹೊತ್ತಿಗೆ ಗೊತ್ತಿಲ್ಲದಂತೆ ಅವರ ಮನಸ್ಸೊಳಗಡೆ ಗಾಢವಾದ ಸೆಳೆತವೊಂದು ನದಿಯಂತೆ ಹರಿಯುತ್ತದೆ.
ಚಿತ್ರದ ಟೈಟಲ್‌ನಷ್ಟೇ ಚೆಂದವಾಗಿ ಕಾಣಿಸಿಕೊಂಡವರು ಚಿತ್ರದ ನಾಯಕ ವಿರಾಟ್ ಹಾಗೂ ನಾಯಕಿ ಶ್ರೀಲೀಲಾ. ಇಬ್ಬರಿಗೂ ಇದು ಮೊದಲ ಸಿನಿಮಾ. ಕತೆಗೆ ತಕ್ಕಂತೆ ಪ್ರೇಕ್ಷಕರನ್ನು ಮೋಡಿ ಮಾಡಬಹುದಾದ ಮುದ್ದಾದ ಜೋಡಿಯಿದು.
ಚಿತ್ರ: ಕಿಸ್
ತಾರಾಗಣ: ವಿರಾಟ್, ಶ್ರೀಲೀಲಾ, ಚಿಕ್ಕಣ್ಣ, ಕಾಕ್ರೋಚ್ ಸುಧಿ, ಅವಿನಾಶ್, ಸುಂದರ್
ನಿರ್ದೇಶನ: ಎ.ಪಿ. ಅರ್ಜುನ್
ಒಂದೇ ಒಂದು ಸಲ ಪ್ರೀತಿಯ ಸಿಹಿಮುತ್ತಿನ ಬಂಧನಕ್ಕೆ ಸಿಲುಕುವ ಸಲುವಾಗಿ ಚಿತ್ರದ ಉದ್ದಕ್ಕೂ ಅವರಿಬ್ಬರ ನಡುವೆ ಆಗುವ ಕಿತ್ತಾಟ, ಜಗಳ ಅವರಷ್ಟೇ ಮುದ್ದು ಮುದ್ದಾಗಿವೆ. ಅವರ ಅಭಿನಯವೂ ಅಷ್ಟೇ ಸೊಗಸಾಗಿದೆ. ವಿಲನ್ ಆಗಿ ಬರುವ ಕಾಕ್ರೋಚ್ ಸುಧಿ ಕಾಣಿಸಿಕೊಳ್ಳುವ ಅರೆ ಘಳಿಗೆಯಲ್ಲೂ ಭಯ ಹುಟ್ಟಿಸುತ್ತಾರೆ. ಚಿಕ್ಕಣ್ಣ ಹಾಗೂ ಸಾಧು ಕೋಕಿಲ ಅವರ ಹಾಸ್ಯ ರಂಜನೆಯ ಕಿಕ್ ಉಲ್ಲಾಸ ತರಿಸುತ್ತದೆ.
ಸುವರ್ಣ ನ್ಯೂಸ್ ಜೊತೆ ‘ಕಿಸ್’ ಗೌರಿ ಗಣೇಶ ಸಂಭ್ರಮ
ಉಳಿದಂತೆ ಈ ಸಿನಿಮಾ ದೊಡ್ಡ ಪ್ಲಸ್ ಪಾಯಿಂಟ್ ಸಂಗೀತ. ಹರಿಕೃಷ್ಣ ಸಂಗೀತದ ಮೋಡಿ ಇಡೀ ಸಿನಿಮಾವನ್ನು ಮಾತ್ರವಲ್ಲದೆ, ನೋಡುಗರ ಮನಸ್ಸನ್ನೂ ಆವರಿಸಿಕೊಳ್ಳುತ್ತದೆ. ನೀನೇ ಮೊದಲ.. ಹಾಡೊಂದರಲ್ಲೇ ಅಂತಹದೊಂದು ಮಾಂತ್ರಿಕತೆ ತುಂಬಿದ್ದಾರೆ ಹರಿಕೃಷ್ಣ. ಅರ್ಜುನ್ ಶೆಟ್ಟಿ ಛಾಯಾಗ್ರಾಹಣ ಸಿನಿಮಾವನ್ನು ಮೋಹಕಗೊಳಿಸಿದೆ. ರವಿವರ್ಮ ಆ್ಯಕ್ಷನ್ ಕೂಡ ಮೈ ನವಿರೇಳಿಸುವ ಹಾಗಿವೆ. ಚಿತ್ರದ ಅದ್ಧೂರಿ ತನ, ಹಾಡುಗಳ ಮೆರವಣಿಗೆ, ನವ ಜೋಡಿಯ ಮುದ್ದಾದ ನಟನೆ ಕೊಂಚ ಕತೆ ತೆಳು ಅನ್ನುವುದನ್ನು ಮರೆಸುತ್ತದೆ.