ಲಾಂಚ್ ಆದ 24 ಗಂಟೆಗಳಲ್ಲಿ ಲಕ್ಷದ ಗಡಿ ದಾಟಿತ್ತು ಅದರ ವೀಕ್ಷಕರ ಸಂಖ್ಯೆ. ಮೊನ್ನೆಯಷ್ಟೇ ಅದ್ಧೂರಿಯಾಗಿ ನಡೆದ ಈ ಚಿತ್ರದ ಆಡಿಯೋ ಸೀಡಿ ಮತ್ತು ಟ್ರೇಲರ್ ಲಾಂಚ್ ಸಮಾರಂಭದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ‘ಪಿಆರ್‌ಕೆ ’ಆಡಿಯೋ ಸಂಸ್ಥೆ.

ಅಂಜನಿಪುತ್ರ’ ರಿಲೀಸ್‌ಗೆ ರೆಡಿ ಆಗಿದೆ. ಸದ್ಯಕ್ಕೆ ಸೋಷಲ್ ಮೀಡಿಯಾ ಟ್ರೆಂಡಿಂಗ್‌ನಲ್ಲಿ ಈ ಚಿತ್ರದ ಟ್ರೇಲರ್ ಮೊದಲ ಸ್ಥಾನದಲ್ಲಿದೆ . ಲಾಂಚ್ ಆದ 24 ಗಂಟೆಗಳಲ್ಲಿ ಲಕ್ಷದ ಗಡಿ ದಾಟಿತ್ತು ಅದರ ವೀಕ್ಷಕರ ಸಂಖ್ಯೆ. ಮೊನ್ನೆಯಷ್ಟೇ ಅದ್ಧೂರಿಯಾಗಿ ನಡೆದ ಈ ಚಿತ್ರದ ಆಡಿಯೋ ಸೀಡಿ ಮತ್ತು ಟ್ರೇಲರ್ ಲಾಂಚ್ ಸಮಾರಂಭದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ‘ಪಿಆರ್‌ಕೆ ’ಆಡಿಯೋ ಸಂಸ್ಥೆ. ಪಿಆರ್‌ಕೆ ಪುನೀತ್ ರಾಜ್‌ಕುಮಾರ್ ಅವರ ಆಡಿಯೋ ಸಂಸ್ಥೆ. ‘ಅಂಜನಿಪುತ್ರ’ ಚಿತ್ರದ ಮೂಲಕವೇ ಪಿಆರ್‌ಕೆ ಆಡಿಯೋ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು ಆ ದಿನದ ವಿಶೇಷ ಮತ್ತು ವೈಶಿಷ್ಟ್ಯ.

‘ಟಗರು’ ಚಿತ್ರದ ಆಡಿಯೋ ಹಕ್ಕು ಕೂಡ ಪಿಆರ್‌ಕೆ ಪಾಲಾಗಿದೆ. ರಾಜ್‌ಕುಮಾರ್ ಸಹೋದರಿ ನಾಗಮ್ಮ, ರಾಘವೇಂದ್ರ ರಾಜ್‌ಕುಮಾರ್ ಪತ್ನಿ ನಾಗರತ್ನ, ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರೊಂದಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ದೀಪ ಬೆಳಗಿಸುವ ಮೂಲಕ ಪಿಆರ್‌ಕೆ ಸಂಸ್ಥೆಗೆ ಚಾಲನೆ ನೀಡಿದರು. ಆನಂತರ ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ’ ಹಾಡು ಸೇರಿದಂತೆ ಮೂರು ಜನಪ್ರಿಯ ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಪುನೀತ್ ರಾಜ್‌ಕುಮಾರ್ ಸಮಾರಂಭ ಕಳೆಗಟ್ಟುವಂತೆ ಮಾಡಿದರು. ಹಾಗೆಯೇ ಸಂಸ್ಥೆಯ ಆರಂಭದ ಉದ್ದೇಶ ಹೇಳಿಕೊಂಡರು. ‘ಆಡಿಯೋ ಸಂಸ್ಥೆ ಶುರು ಮಾಡ್ಬೇಕು ಅನ್ನೋದು ನನ್ನ ಬಾಲ್ಯದಿಂದಲೂ ಇದ್ದ ಆಸೆ. ನಾನು ಹಾಡುವುದಕ್ಕೆ ಶುರು ಮಾಡಿದಾಗಿನಿಂದ ಅದು ಮತ್ತಷ್ಟು ತೀವ್ರವಾಗಿತ್ತು. ಹಾಗಾಗಿ ಇವತ್ತು ಆಡಿಯೋ ಸಂಸ್ಥೆ ಶುರು ಮಾಡಿದ್ದೇನೆ. ಕನಸು ನನಸಾಗಿದೆ. ಅಪ್ಪಾಜಿ ಮತ್ತು ಅಮ್ಮನ ಆಶೀರ್ವಾದ ಇದೆ. ಸಂಗೀತ ಪ್ರಿಯರಿಗೆ ಒಳ್ಳೆಯ ಗೀತೆಗಳನ್ನು ಕೊಡಬೇಕು ಅನ್ನೋದು ಈ ಸಂಸ್ಥೆಯ ಉದ್ದೇಶವಾಗಿದೆ’ ಎಂದರು.

ಆನಂತರ ನಡೆದಿದ್ದು ‘ಅಂಜನಿಪುತ್ರ’ ಆಡಿಯೋ ಸೀಡಿ ಲಾಂಚ್. ಅದಕ್ಕೂ ಮೊದಲು ಹಿರಿಯ ನಿರ್ದೇಶಕ ಭಗವಾನ್, ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಅವರಿಗೆ ಸನ್ಮಾನದ ಗೌರವ. ನಂತರ ರಾಘವೇಂದ್ರ ರಾಜ್‌ಕುಮಾರ್, ಚಿನ್ನೇಗೌಡ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕರಾದ ಕೆ. ಮಂಜು, ಎಂ.ಎನ್.ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ರಶ್ಮಿಕಾ ಮಂದಣ್ಣ , ನಿರ್ದೇಶಕ ಹರ್ಷ ವೇದಿಕೆಯಲ್ಲಿದ್ದು ಆಡಿಯೋ ಬಿಡುಗಡೆ ಗೊಳಿಸಿದರು.ಕಾರ್ಯಕ್ರಮದಲ್ಲಿ ಅಪ್ಪು ಹಾಗೂ ಶಿವಣ್ಣ ಅಂಜನಿಪುತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿ, ಅಭಿಮಾನಿಗಳಿಗೆ ಭರಪೂರ ಮನರಂಜನೆ ಕೊಟ್ಟರು. ಕೊನೆಯದಾಗಿ ಪರದೆ ಮೇಲೆ ಮೂಡಿ ಬಂದ ‘ಅಂಜನಿಪುತ್ರ’ದ ಟ್ರೇಲರ್‌ಗೆ ಸೂರು ಕಿತ್ತು ಹೋಗುವ ಹಾಗೆ ಅಭಿಮಾನಿಗಳ ಸಿಳ್ಳೇ ಕೇಕೆ ಹೊಡೆದರು.