ಬೆಂಗಳೂರು(ಸೆ.20): ಕನ್ನಡದ ಮೂವರು ಚಿತ್ರನಟರ ಮೇಲೆ ತಮಿಳುನಾಡಿನ ನ್ಯಾಯಾಲಯದಲ್ಲಿ ಹೂಡಿರುವ ದೇಶದ್ರೋಹ ಪ್ರಕರಣಕ್ಕೆ ಕನ್ನಡ ಚಿತ್ರರಂಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅವರು ಕೇಸ್ ದಾಖಲಿಸಿದ್ದು ದೃಢಪಟ್ಟರೆ ಇಡೀ ತಮಿಳು ಚಿತ್ರೋದ್ಯಮದ ಮೇಲೆ ಮೊಕದ್ದಮೆ ಹೂಡಲು ಸಿದ್ಧವಾಗಿರುವ ಎಚ್ಚರಿಕೆಯೂ ವ್ಯಕ್ತವಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಆಂತರಿಕವಾಗಿ ಈ ಬಗ್ಗೆ ಸಭೆ ನಡೆದಿದ್ದು, ಇಡೀ ಚಿತ್ರರಂಗ ಮೂವರು ಕಲಾವಿದರ ಪರವಾಗಿ ನಿಲ್ಲುವುದಕ್ಕೆ ತೀರ್ಮಾನಿಸಲು ಚಿಂತಿಸಿದೆ. ಕಾವೇರಿ ಹೋರಾಟಕ್ಕೆ ಚಿತ್ರೋದ್ಯಮ ಕೂಡ ದೊಡ್ಡ ಮಟ್ಟದಲ್ಲಿ ಬೆಂಬಲವಾಗಿ ನಿಂತುಕೊಂಡಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಸತ್ಯಾಗ್ರಹಗಳು ನಡೆದವು. ಆಗ ನಟರಾದ ಉಪೇಂದ್ರ, ದರ್ಶನ್ ಹಾಗೂ ಪುನೀತ್‌ರಾಜ್‌ಕುಮಾರ್ ಮಾತನಾಡಿದ್ದರು. ಈಗ ತಮಿಳುನಾಡಿನಲ್ಲಿ ಇವರ ವಿರುದ್ಧ ಕೇಸು ದಾಖಲಾಗಿದೆ. ಈ ಮೂರೂ ನಟರು ಪ್ರಚೋದನಕಾರಿಯಾದ ಮಾತುಗಳನ್ನಾಡಿದ್ದಾರೆ. ಆ ಮೂಲಕ ಎರಡು ರಾಜ್ಯಗಳ ನಡುವೆ ಕಿಚ್ಚಿಗೆ ಕಾರಣವಾಗಿದ್ದಾರೆಂದು ಆರೋಪಿಸಿ ಚೆನ್ನೈನಲ್ಲಿ ಪಿ. ಎಳಂಗೋವನ್ ಎಂಬುವರು ಕೇಸು ದಾಖಲಿಸಿದ್ದಾರೆ.

ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡದ ಕಲಾವಿದರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವ ಸರಿಯಲ್ಲ. ಹಾಗೊಂದು ವೇಳೆ ಅವರು ಪ್ರಕರಣ ದಾಖಲಿಸುವುದಾದರೆ, ತಮಿಳುನಾಡಿನ ಎಲ್ಲ ಕಲಾವಿದರ ಮೇಲೆ ಕನ್ನಡ ಚಿತ್ರೋದ್ಯಮ ಕೇಸು ದಾಖಲಿಸುವುದಕ್ಕೆ ಹಿಂದೆ ಮುಂದೆ ನೋಡಲ್ಲ. ಕಾವೇರಿ ಹೋರಾಟ, ಹೊಗೇನಕಲ್ ಹೋರಾಟದ ಸಂದರ್ಭದಲ್ಲಿ ಕನ್ನಡ ಕಲಾವಿದರ ಮಾತು, ತಮಿಳು ಕಲಾವಿದರ ಮಾತುಗಳನ್ನು ಕೇಳಲಿ. ಯಾರು ದೇಶದ್ರೋಹಿಗಳೆಂದು ತಿಳಿಯುತ್ತದೆ. ತಮಿಳು ನಟ ಸತ್ಯರಾಜ್, ಕಾವೇರಿಯನ್ನು ಹೆಂಡತಿಗೆ ಹೋಲಿಸಿ ಅಸಭ್ಯವಾಗಿ ಮಾತನಾಡುತ್ತಾರೆ. ತಮಿಳು ಕಲಾವಿದರು ಪ್ರಚೋದನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಲಿ. ಅಲ್ಲಿನ ಕಲಾವಿದರನ್ನು ಸರ್ಕಾರ ನಿಯಂತ್ರಣ ಮಾಡಬೇಕಿದೆ. ಆದರೆ, ನಮ್ಮ ಚಿತ್ರೋದ್ಯಮದ ಯಾವ ಕಲಾವಿದರು ಆ ರೀತಿ ಮಾತನಾಡಿಲ್ಲ. ಆದರೂ ನಮ್ಮ ಮೇಲೆ ದೇಶದ್ರೋಹದ ಕೇಸು ಹಾಕುತ್ತಾರೆಂದರೆ ನಾವು ಏನು ಮಾಡಬೇಕೆಂಬುದು ಗೊತ್ತಿದೆ ಎಂದು ಎಚ್ಚರಿಸಿದ್ದಾರೆ.

ಕನ್ನಡ ಕಲಾವಿದರ ಮೇಲೆ ಕೇಸು ದಾಖಲಿಸಿರುವ ಬಗ್ಗೆ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ. ಒಂದು ವೇಳೆ ನಿಜವೇ ಆಗಿದ್ದರೆ, ಕಲಾವಿದರ ಪರವಾಗಿ ಕನ್ನಡ ಚಿತ್ರೋದ್ಯಮ ನಿಲ್ಲುತ್ತದೆ. ಅಲ್ಲದೆ ನಾವು ಇಡೀ ತಮಿಳು ಚಿತ್ರರಂಗದ ಕಲಾವಿದರ ಮೇಲೆ ಕೇಸು ದಾಖಲಿಸುತ್ತೇವೆ.

- ಸಾ ರಾ ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ