ಕಾಸರಗೋಡಿಗೂ, ಅನಂತ್ ನಾಗ್‌ಗೂ ಏನು ನಂಟು?
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಬಿಡುಗಡೆಯಾಗಿದೆ. ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರದ ಬಗ್ಗೆ, ಕಾಸರಗೋಡಿನ ಬಗ್ಗೆ ಅನಂತ್ ನಾಗ್ ಮಾತನಾಡಿದ್ದಾರೆ.
ಬೆಂಗಳೂರು (ಆ. 24): ‘ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಾಗ ಮೊದಲ 5 ರಾರಯಂಕ್‌ಗಳಲ್ಲಿ ಒಬ್ಬನಾಗಿರುತ್ತಿದ್ದೆ. ಆಮೇಲೆ ಅನಿವಾರ್ಯವಾಗಿ ಮುಂಬೈಗೆ ಹೋಗಬೇಕಾಯಿತು. ಇಂಗ್ಲಿಷ್ ಮಾಧ್ಯಮ ಶಾಲೆ ಅದು. ಅಲ್ಲಿ ಕಡೆಯ ಐದು ರಾರಯಂಕ್‌ಗಳಲ್ಲಿ ಇದ್ದರೆ ಹೆಚ್ಚು. ಏನೋ ಧರ್ಮ ಕರ್ಮ ಸಂಯೋಗದಿಂದ ಕಲಾವಿದನಾದೆ.
ಇಲ್ಲದಿದ್ದರೆ ನನ್ನ ಸ್ಥಿತಿ ಏನಾಗುತ್ತಿತ್ತೋ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು, ಕನ್ನಡ ಶಾಲೆ ಮುಚ್ಚಬಾರದು ಅನ್ನುವುದನ್ನು ರಿಷಬ್ ಈ ಚಿತ್ರದಲ್ಲಿ ಹೇಳಿದ್ದಾರೆ. ನಾನು ಕಾಸರಗೋಡು ಭಾಗದಲ್ಲೇ ಇದ್ದವನಾದ್ದರಿಂದ ಈ ಚಿತ್ರ ನಂಗೆ ಹೆಚ್ಚು ಹತ್ತಿರ. ಇದು ದೇಶದ ಬೇರೆ ಬೇರೆ ರಾಜ್ಯಗಳ ಆಯಾಯ ಭಾಷೆಯ ಕತೆ. ಎಲ್ಲರೂ ಈ ಚಿತ್ರ ನೋಡಬೇಕು.’ - ಹೀಗೆ ಹೇಳಿದ್ದು ಅನಂತ್‌ನಾಗ್.
ಸಂದರ್ಭ: ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರದ ಪತ್ರಿಕಾಗೋಷ್ಠಿ.
ಅವತ್ತು ಚಿತ್ರದ ಸಂಭಾಷಣಾಕಾರ ರಾಜ್ ಬಿ ಶೆಟ್ಟಿಕೂಡ ಬಂದಿದ್ದರು. ಕನ್ನಡ ಎಂದರೆ ಹೆಚ್ಚು ಉತ್ಸಾಹಿತರಾಗುವ ಅವರು, ‘ಮನೆ ಭಾಷೆ ತುಳು. ಆದರೆ ನನ್ನ ಭಾಷೆ ಕನ್ನಡ. ಇಂಗ್ಲಿಷ್ ಮಾಧ್ಯಮದಲ್ಲಿ ಕಡಿಮೆ ಅಂಕ ತೆಗೆದುಕೊಳ್ಳುತ್ತಿದ್ದಾಗ ನನ್ನನ್ನು ಅವಮಾನದಿಂದ ಪಾರು ಮಾಡಿದ್ದು, ಕಾಪಾಡಿದ್ದು ಕನ್ನಡ. ಅದಕ್ಕೆ ನಂಗೆ ಕನ್ನಡ ಇಷ್ಟ. ಈಗ ಕಾಸರಗೋಡು ಕನ್ನಡಿಗರು ಅಸ್ಮಿತೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅಲ್ಲಿ ಕನ್ನಡ ಸಂಕಷ್ಟದಲ್ಲಿದೆ. ಭಾಷೆ ಸತ್ತರೆ ನಾಗರಿಕತೆ ಸಾಯುತ್ತದೆ. ಆ ನಿಟ್ಟಿನಲ್ಲಿ ರಿಷಬ್ ಒಂದೊಳ್ಳೆ ಚಿತ್ರ ಮಾಡಿದ್ದರೆ, ನೋಡಿ ಪ್ರೋತ್ಸಾಹಿಸಿ’ ಎಂದರು.
ಸಂಗೀತ ನಿರ್ದೇಶಕ ವಾಸುಕಿ ವೈಭವ್, ‘ನಾನು ಈ ಚಿತ್ರದ ಟ್ರೈಲರನ್ನು 80 ಸಲ ನೋಡಿದ್ದೇನೆ. ಪ್ರತಿ ಸಲವೂ ಖುಷಿ ಪಟ್ಟಿದ್ದೇನೆ. ರಿಷಬ್ ಮುತುವರ್ಜಿಗಾಗಿ ಈ ಚಿತ್ರ ಗೆಲ್ಲಬೇಕು’ ಎಂದರು. ವೇದಿಕೆಯಲ್ಲಿದ್ದ ಮತ್ತೊಬ್ಬರು ಪ್ರಮೋದ್ ಶೆಟ್ಟಿ. ಈ ಚಿತ್ರದ ನಟನೂ ಹೌದು. ಚಿತ್ರಕ್ಕಾಗಿ ಹಗಲಿರುಳೂ ದುಡಿದ ಕಾರ್ಯನಿರ್ವಾಹಕ ನಿರ್ಮಾಪಕನೂ ಹೌದು. ‘ಈ ಚಿತ್ರದಲ್ಲಿ ಮಕ್ಕಳಷ್ಟೇ ಇರುವುದಲ್ಲ. ಒಂದು ಶಾಲೆಯೇ ಈ ಚಿತ್ರದ ಕೇಂದ್ರ’ ಎಂದರು. ಕಾಸ್ಟೂ್ಯಮ್ ಡಿಸೈನರ್ ಪ್ರಗತಿ ರಿಷಬ್ ಶೆಟ್ಟಿ ನಗುವಲ್ಲೇ ಎಲ್ಲವನ್ನೂ ಸಂಭಾಳಿಸಿದರು.