Asianet Suvarna News Asianet Suvarna News

ಸುದೀಪ್ ಪ್ರೇರಣೆಯೇ ಈ ಚಿತ್ರಕ್ಕೆ ಕಾರಣ

ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಸುದೀಪ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಬಗೆಗಿರುವ ಸಾಕಷ್ಟು ನಿರೀಕ್ಷೆಯ ಜತೆಗೆ ನಿರ್ದೇಶಕ ಗುರುದತ್ ಗಾಣಿಗ ಕೂಡ ಇದರ ಕುತೂಹಲದ ಕೇಂದ್ರ ಬಿಂದು. ಯಾಕಂದ್ರೆ, 26 ವರ್ಷಕ್ಕೆ 70 ವರ್ಷದ ಅಂಬರೀಷ್ ಸೇರಿದಂತೆ ಹಿರಿಯ ನಟಿ ಸುಹಾಸಿನಿ, ಕಿಚ್ಚ ಸುದೀಪ್, ಶ್ರುತಿ ಹರಿಹರನ್ ಅವರಂತಹ ಸ್ಟಾರ್ ನಟರಿಗೆ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದು ಇವರ ಹೆಗ್ಗಳಿಕೆ. ಅದೇ ಕಾರಣಕ್ಕೆ ಸ್ಯಾಂಡಲ್ವುಡ್‌ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ ಗುರುದತ್ ಗಾಣಿಗ. ಇಲ್ಲಿದೆ ಅವರ ಜತೆಗಿನ ಮಾತುಕತೆ. 

Ambi Ninge Vayassayto Cinema director Gurudath Ganiga interview with Kannada Prabha
Author
Bengaluru, First Published Aug 6, 2018, 3:42 PM IST

ಬೆಂಗಳೂರು (ಆ. 06): 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ನಿರ್ದೇಶಕ ಗುರುದತ್ ಗಾಣಿಗ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಚಿಕ್ಕ ವಯಸ್ಸಿಗೆ  ಸಿನಿಮಾ ರಂಗದ ಸ್ಟಾರ್ ನಟರಿಗೆ ಆ್ಯಕ್ಷನ್ ಕಟ್ ಹೇಳಿದ ಹೆಗ್ಗಳಿಕೆ ಇವರದು. ತಮ್ಮ ಚಿತ್ರರಂಗದ ಅನುಭವಗಳನ್ನು ಕನ್ನಡ ಪ್ರಭದೊಂದಿಗೆ ಹಂಚಿಕೊಂಡಿದ್ದು ಹೀಗೆ. 

ಊರು-ಕೇರಿ, ಜತೆಗೆ ಬಣ್ಣದ ಜಗತ್ತಿನ ಹಿನ್ನೆಲೆ ಏನು?
ಕುಂದಾಪುರ ಹತ್ತಿರದ ಹೆರಂಜಾಲು ನನ್ನೂರು. ಮಂದಾರ್ತಿ ಯಕ್ಷಗಾನ ಮೇಳದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಸುಬ್ಬಣ್ಣ ಗಾಣಿಗ ನನ್ನಜ್ಜ. ಅವರಿಂದಲೇ ಅಂಟಿಕೊಂಡಿದ್ದು ಬಣ್ಣದ ನಂಟು. ಹಾಗಂತ ಯಕ್ಷಗಾನದಲ್ಲಿ ಬಣ್ಣ ಹಚ್ಚಿ ಕುಣಿದವನಲ್ಲ. ಹೈಸ್ಕೂಲ್ ಓದುತ್ತಿದ್ದಾಗಲೇ ಸಿನಿಮಾ ಕ್ಷೇತ್ರಕ್ಕೆ ಬರಬೇಕೆನ್ನುವ ತುಡಿತವಿತ್ತು. 16 ವರ್ಷ ಇದ್ದಾಗಲೇ ಊರು ಬಿಟ್ಟು ಬೆಂಗಳೂರಿಗೆ ಬಂದೆ.

ಸುದೀಪ್ ಬಳಗವನ್ನು ನೀವು ಸೇರಿಕೊಂಡಿದ್ದು ಹೇಗೆ?
ಮೊದಲ ಬಾರಿಗೆ ಸುದೀಪ್ ಅವರಿಗೆ ನನ್ನನ್ನು ಪರಿಚಯಿಸಿಕೊಟ್ಟಿದ್ದು ಮೇಕಪ್‌ಮೆನ್‌ಗುರುಮೂರ್ತಿ. ಆ ವೇಳೆಗಾಗಲೇ ಮೂರ್ನಾಲ್ಕು ನಿರ್ದೇಶಕರ ಬಳಿ ಸಹಾಯಕನಾಗಿದ್ದೆ. ನನ್ನ ಕೆಲಸದ ಬಗ್ಗೆಯೂ ಅವರಿಗೆ ಮೆಚ್ಚುಗೆ ಇತ್ತು. ಅದೇ ಕಾರಣದಿಂದ ಒಂದು ದಿನ ಸುದೀಪ್  ಸರ್ ಬಳಿಗೆ ಕರೆದುಕೊಂಡು ಹೋದ್ರು. ‘ಈ ಹುಡುಗ ಬುದ್ಧಿವಂತ, ನಿಮ್ಮ ಬಳಿ ಸಹಾಯಕನಾಗಿ ಕೆಲಸ ಮಾಡುತ್ತೇನೆ ಎನ್ನುವುದು ಆತನ ಆಸೆ. ಒಂದು ಅವಕಾಶ ಕೊಟ್ಟು ನೋಡಿ ಸರ್’ ಅಂದ್ರು. ಅವತ್ತೇ ಅವರು ಓಕೆ ಅಂದ್ರು. ಅಲ್ಲಿಂದ ಸುದೀಪ್ ಸರ್ ಬಳಗದಲ್ಲಿ ನಾನೂ ಒಬ್ಬನಾದೆ.

 ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ಶುರುವಾಗಿದ್ದು ಹೇಗೆ?
ಸಹಾಯಕ ನಿರ್ದೇಶಕನಾಗಿದ್ದವನು ಸ್ವತಂತ್ರ ನಿರ್ದೇಶಕನಾಗುವುದು ಹೇಗೆ ಅಂತೆಲ್ಲ ಯೋಚಿಸುತ್ತಿದ್ದೆ. ಸ್ಕ್ರಿಪ್ಟ್ ಮಾಡುತ್ತಿದ್ದೇನೆ ಎನ್ನುವ ವಿಚಾರವನ್ನು ಒಮ್ಮೆ ಸುದೀಪ್ ಅವರ ಬಳಿಯೂ ಚರ್ಚಿಸಿದ್ದೆ. ಆ ಹೊತ್ತಲೇ ಸುದೀಪ್ ಸರ್, ಈ ಸಿನಿಮಾದ ವಿಚಾರ ಪ್ರಸ್ತಾಪ ಮಾಡಿದ್ರು. ಸ್ಕ್ರಿನ್ ಪ್ಲೇ ನಾನೇ ಮಾಡ್ತೀನಿ, ನೀನು ಡೈರೆಕ್ಷನ್ ಮಾಡು ಅಂದ್ರು. ನಿರ್ಮಾಪಕ ಮಂಜು ಅವರು ಕೂಡ ನೀನೇ ಡೈರೆಕ್ಷನ್ ಮಾಡು ಅಂತ ಬೆಂಬಲಿಸಿದರು. ಹಾಗೆಯೇ ಅಂಬರೀಷ್ ಅಣ್ಣ ಕೂಡ
ಒಪ್ಪಿಕೊಂಡರು.ಅಲ್ಲಿಂದ ಸಿನಿಮಾಕ್ಕೆ ಚಾಲನೆ ಸಿಕ್ಕಿತು.  

ಅಂಬರೀಷ್ ಅವರಂತಹ ದೊಡ್ಡ ನಟನಿಗೆ ಆ್ಯಕ್ಷನ್ ಕಟ್ ಹೇಳುವುದು ಅಂದಾಗ ಭಯ ಎನಿಸಲಿಲ್ವಾ?
ಭಯ ಕಾಡಲಿಲ್ಲ. ಅದಕ್ಕೆ ಕಾರಣ ಆಗಲೇ ಮಾಡಿಕೊಂಡಿದ್ದ ಸಿದ್ಧತೆ. ಯಾರ‌್ಯಾರ ಪಾತ್ರಗಳು ಹೇಗಿರಬೇಕು, ಅವೆಲ್ಲ ಹೇಗೆ ಬರಬೇಕು, ಶೂಟಿಂಗ್ ಕತೆ ಏನು ಅನ್ನೋದು ಬರವಣಿಗೆ ರೂಪದಲ್ಲೇ ಇತ್ತು. ಹಾಗಾಗಿ ಸಿನಿಮಾದ ಪಾತ್ರಗಳಿಗೆ ಯಾರನ್ನೆಲ್ಲ ಕರೆತರಬೇಕು ಅಂತಂದುಕೊಂಡವರ ಮೊದಲ ಭೇಟಿಯಲ್ಲಿ ಭಯ ಪಟ್ಟುಕೊಳ್ಳುವುದಕ್ಕಿಂತ ಅವರೊಂದಿಗೆ ಕೆಲಸ ಮಾಡುವುದಕ್ಕೆ ಬಗ್ಗೆ ಎಕ್ಸೈಟ್ ಆಗಿದ್ದೇ ಹೆಚ್ಚು. 

ಮೊದಲ ಸಲ ನಿಮ್ಮನ್ನು ನೋಡಿ ಅಂಬರೀಷ್ ತಮಾಷೆ ಮಾಡಿದ್ರಂತೆ ಹೌದಾ?
ಸುದೀಪ್ ಸರ್ ಮತ್ತು ನಿರ್ಮಾಪಕ ಮಂಜು ಅವರೊಂದಿಗೆ ಮೊದಲ ಸಲ ನಾನು ಅವರ ಮನೆಗೆ ಹೋಗಿದ್ದೆ. ಈತನೇ ಸಿನಿಮಾದ ನಿರ್ದೇಶಕ ಅಂತ ಸುದೀಪ್ ಸರ್ ಪರಿಚಯ ಮಾಡಿಕೊಟ್ಟರು. ಹಾಗೆಂದಾಕ್ಷಣ ನಕ್ಕು, ಇವನ್ನೇನು ಇಷ್ಟು ಸಣ್ಣ ಹುಡುಗ, ಡೈರೆಕ್ಷನ್ ಮಾಡ್ತಾನಾ ಅಂದ್ರು ಅಂಬರೀಷ್. ಆಮೇಲೆ ಸಿನಿಮಾದ ಸಿದ್ಧತೆಯ ಪೂರ್ಣ ವಿವರ ಕೊಟ್ಟಾಗ ಅವರಲ್ಲೂ ಭರವಸೆ ಬಂತು. ಒಳ್ಳೆಯದಾಗಲಿ ಅಂತ ಆಶೀರ್ವಾದ ಮಾಡಿದ್ರು. ಅವರ ಆಶೀರ್ವಾದದಿಂದಲೇ ಸಿನಿಮಾ ಈ ಹಂತಕ್ಕೆ ಬಂದಿದೆ.

ಸಿನಿಮಾ ಈಗ ಯಾವ ಹಂತದಲ್ಲಿದೆ, ಚಿತ್ರಕರಣ ಹೇಗಿತ್ತು?
ಶೂಟಿಂಗ್ ಕಂಪ್ಲೀಟ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಪ್ರಗತಿಯಲ್ಲಿದೆ. ಒಟ್ಟು 60 ದಿನ ಚಿತ್ರೀಕರಣದ ಅವಧಿ. ಬೆಂಗಳೂರು, ಮೈಸೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆದಿದೆ. ಅಂಬರೀಷ್ ಅಣ್ಣ, ಸುದೀಪ್ ಸರ್ ಜತೆಗೆ ಸುಹಾಸಿನಿ ಮೇಡಂ ಸೇರಿದಂತೆ ಎಲ್ಲರೂ ಬೆಂಬಲವೂ ಚೆನ್ನಾಗಿತ್ತು. ಅಂಬರೀಷ್ ಅವರು ನೋಡಲು ಒರಟಾಗಿ ಕಂಡರೂ ಅವರ ಮನಸ್ಸು ಮಗುವಿನ ರೀತಿ ಇದೆ.  

ಸುದೀಪ್ ಅವರ ಇನ್ವಾಲ್‌ಮೆಂಟ್ ಬಗ್ಗೆ ಹೇಳೋದಾದ್ರೆ..

ಸಿನಿಮಾದ ನಿಜವಾದ ಕ್ಯಾಪ್ಟನ್ ಅವರೇ. ಪ್ರತಿ ಫ್ರೇಮ್ ಅವರದೇ ಕಲ್ಪನೆ. ಸ್ಕ್ರೀನ್ ಪ್ಲೇ, ಲೋಕೇಷನ್, ಆರ್ಟಿಸ್ಟ್ ಎಲ್ಲವೂ ಅವರೇ ಡಿಸೈಡ್ ಮಾಡಿದ್ದು. ಅಲ್ಲಿಂದ ಚಿತ್ರೀಕರಣ ಮುಗಿಸಿಕೊಂಡು ಬಂದು ಎಡಿಟಿಂಗ್ ಕುಳಿತಾಗಲೂ ಪ್ರತಿ ದಿನ ಅವರೇ ಸ್ಟುಡಿಯೋಕ್ಕೆ ಬಂದು ಹೀಗೆಯೇ ಬರಬೇಕು ಅಂತ ಕಾಳಜಿ ವಹಿಸಿದರು. ಅವರ ಸಹಕಾರದಿಂದಲೇ ಇಷ್ಟೆಲ್ಲ ಆಯಿತು. ನನ್ನದು ನಿರ್ದೇಶನ ಮಾತ್ರ. ನನಗೆ ಸಂಚಿತ್ (ಸುದೀಪ್ ಅಕ್ಕನ ಮಗ) ಸಹಕಾರವೂ ಸಿಕ್ಕಿತು.

 

-ದೇಶಾದ್ರಿ ಹೊಸ್ಮನೆ 

Follow Us:
Download App:
  • android
  • ios