ದೃಶ್ಯ 1: ಜಯನಗರದಲ್ಲಿರುವ ಅಂಬರೀಶ್‌ ಮನೆ ಮುಂದೆ

ಅಂಬರೀಶ್‌: ಹಾ... ಹೇಳ್ರೋ... ಹೇಳ್ರೋ. ಏಯ್‌ ಯಾವನೋ ಅವ್ನು ಕೂಗೋದು

ಪತ್ರಕರ್ತರು: ಸಾರ್‌ ನಿಮ್ಮ ಬರ್ತಡೇ ಇವತ್ತು ಏನ್‌ ವಿಶೇಷ?

ಅಂಬರೀಶ್‌: ಏನ್‌ ವಿಶೇಷ, ವಯಸ್ಸಾಗೋಯಿತು. ಇನ್ನೇನಿರುತ್ತೆ ವಿಶೇಷ ಹೇಳಿ? ನೀವ್‌ ಬಂದಿರೋದೇ ವಿಶೇಷಪ್ಪ.

ಪತ್ರಕರ್ತರು: ಸಾರ್‌ ಹಂಗಲ್ಲ, ಇವತ್ತು ಏನೇನು ಮಾಡ್ತಿರಿ?

ಅಂಬರೀಶ್‌: ಅದೆಲ್ಲ ನಿನ್ಗೆ ಯಾಕ್‌ ಹೇಳಬೇಕು!

ಪತ್ರಕರ್ತರು: ಯಾರೆಲ್ಲ ಏನ್‌ ಗಿಫ್ಟ್‌ ಕೊಟ್ರು? ಸುಮಲತಾ ಮೇಡಮ್‌ ಕೊಟ್ಟದುಬಾರಿ ಗಿಫ್ಟ್‌ ಏನು?

ಅಂಬರೀಶ್‌: ಎಲ್ರು ಕೊಟ್ರು. ನೀವೇ ಏನೂ ಕೊಟ್ಟಿಲ್ಲ. ಸುಮಲತಾ ಲಾಸ್ಟ್‌ ಟೈಮ್‌ ಕೊಟ್ಟಿದ್ದು ಈ ಸರ್ತಿ ಏನೂ ಕೊಟ್ಟಿಲ್ಲ ಹೋಗಿ.

ಮಾತುಕತೆಯ ನಡುವೆ ಅಭಿಮಾನಿಗಳು: ಮಂಡ್ಯದ ಗಂಡು ಅಂಬರೀಶಣ್ಣನಿಗೆ ಜೈ... ರೆಬೆಲ್‌ ಸ್ಟಾರ್‌ ಅಂಬರೀಶ್‌ ಅಣ್ಣನಿಗೆ ಜೈ

ಅಂಬರೀಶ್‌: ಲೇ ಯಾವನೋ ಅವ್ನು... ತಗೊಂಡು ಬಾರೋ ಆ ಕೇಕ್‌ ಇಲ್ಲಿ.

ಮುಂದೆ ಹೂವಿನ ಹಾರುಗಳು, ಕೇಕ್‌ ಕಟ್ಟಿಂಗ್‌ಗಳ ನಡುವೆ ಅಭಿಮಾನಿಗಳ ಜೈ ಕಾರ. ಮಾಧ್ಯಗಳ ಜತೆ ಒಂದಿಷ್ಟುತಮಾಷೆ.

ದೃಶ್ಯ 2: ಸ್ಟಾರ್‌ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಟಿ

ಅಂಬರೀಶ್‌: ಸ್ವಲ್ಪ ಲೇಟಾಗೋಯಿತು. ಬಟ್‌ ಸಾರಿ ಕೇಳಲ್ಲ. ನೀವೆಲ್ಲ ನಮ್ಮೋರೇ ಅಲ್ವಾ ಅದಕ್ಕೆ.

ಫೋಟೋಗ್ರಾಫರ್‌: ರಾತ್ರಿ ಬೇಗ ಮಲಗಿದ್ದರೆ, ಈಗ ತಡ ಆಗುತ್ತಿರಲಿಲ್ಲ ಹ್ಹಹ್ಹ...

ಅಂಬರೀಶ್‌: ಹಾ... ಹೌದೌದು ಸುಮ್ನಿರಪ್ಪ.

ಪೋಟೋಗ್ರಾಪರ್‌: ಆಯ್ತು ಗ್ರೂಪ್‌ ಆಗಿ ನಿಂತುಕೊಳ್ಳಿ ಫೋಟೋ ತೆಗೆಯಬೇಕು

ಅಂಬರೀಶ್‌: ಅಯ್ಯೋ ಸಾಕ್‌ ಬಿಡೋ, ಎಷ್ಟು ಫೋಟೋ ತೆಗೀತೀಯ. ಹಾಕೋದು ಮಾತ್ರ ಇಷ್ಟೇ ಇಷ್ಟುಉದ್ದ ಹಾಕಕ್ಕೆ ಎಷ್ಟು ಫೋಟೋ ತೆಗೆತೀಯ.

ಕನ್ನಡ ಚಿತ್ರರಂಗದ ಹಿರಿಯಣ್ಣ, ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಹೆಸರು ನೆನಪು ಮಾಡಿಕೊಂಡರೆ ಇಂಥ ಹತ್ತಾರು ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ಅಂಬರೀಶ್‌ ಅವರು ಇದ್ದಿದ್ದೇ ಹೀಗೆ. ಡೋಂಟ್‌ ಕೇರ್‌ ಮನುಷ್ಯ. ಹಾಗಂತ ಯಾರಿಗೂ ನೋಯಿಸುವ ಮಾತುಗಳನ್ನು ಆಡುತ್ತಿರಲಿಲ್ಲ.

ಆ ಗತ್ತು, ಸಿಟ್ಟು, ಗದುರುವಿಕೆಯ ದಾಟಿಯಲ್ಲಿ ಅಂಬರೀಶ್‌ ಮಾತನಾಡಿದರೆ ಅವರ ಅಭಿಮಾನಿಗಳಿಗೂ ಮಾತ್ರವಲ್ಲ, ಮಾಧ್ಯಮದವರಿಗೂ ಖುಷಿ. ಅವರ ಸಿನಿಮಾ ಕಾರ್ಯಕ್ರಮ, ಪ್ರತಿ ವರ್ಷ ಅವರ ಹುಟ್ಟು ಹಬ್ಬಕ್ಕೆ ಅವರ ಮನೆಗೆ ಹೋಗಿ ಒಂದಿಷ್ಟುಪ್ರಶ್ನೆ ಕೇಳಿ ಕಾಲೆಳೆಸಿಕೊಂಡು, ಸಿಟ್ಟು ತರಿಸಿ, ತಮಾಷಿ ಮಾಡಿ ಬಂದರೇನೇ ಏನೂ ಸಂತೋಷ. ಆದರೆ, ಈ ವರ್ಷ ಅಂಬರೀಶ್‌ ಅವರು ಇಲ್ಲ.

ಬೆಂಗಳೂರಿನ ಜಯನಗರದಲ್ಲಿರುವ ಅವರ ಮನೆಯ ಮುಂದೆ ಈ ವರ್ಷ ಮೊದಲಿನ ದೃಶ್ಯ ಮರುಕಳಿಸದೆ ಇರಬಹುದು. ಆದರೆ, ಅಂಥ ಹತ್ತಾರು ದೃಶ್ಯಗಳನ್ನು ಅಂಬರೀಶ್‌ ಬಿಟ್ಟು ಹೋಗಿದ್ದಾರೆ. ಹೀಗಾಗಿ ಅಂಬರೀಶ್‌ ಇಲ್ಲದ ಮೊದಲ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಅಂಬರೀಶ್‌ ಜಯಂತೋತ್ಸವ, ಸ್ವಾಭಿಮಾನಿ ಸಮಾವೇಶ ಸೇರಿದಂತೆ ಎಲ್ಲವೂ ರೆಬೆಲ್‌ ಸ್ಟಾರ್‌ ಸಂಭ್ರಮವನ್ನು ರಂಗೇರಿಸುತ್ತಿದೆ. ಇಷ್ಟಕ್ಕೂ ಅಂಬಿ ಸಂಭ್ರಮ ಹೇಗಿರುತ್ತೆ?

ಕಂಠೀರವದಲ್ಲಿ ಅಭಿಮಾನಿಗಳ ಜಾತ್ರೆ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್‌ ಅವರ ಸಮಾಧಿಗೆ ಅವರ ಕುಟುಂಬದವರಿಂದ ಪೂಜೆ ನಡೆಯಲಿದೆ. ಸುಮಲತಾ ಅಂಬರೀಶ್‌, ದರ್ಶನ್‌, ಯಶ್‌, ಅಭಿಷೇಕ್‌ ಹೀಗೆ ಹಲವರು ಬೆಳಗ್ಗೆ ನಡೆಯುವ ಕುಟುಂಬದವರ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಬೆಳಗ್ಗಿನಿಂದಲೇ ಅಂಬರೀಶ್‌ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಜತೆಗೆ ಚಿತ್ರರಂಗದ ಹಲವರು ಕಂಠೀರವ ಸ್ಟುಡಿಯೋಗೆ ಆಗಮಿಸಲಿದ್ದಾರೆ.

ಮಂಡ್ಯದಲ್ಲಿ ಅಂಬರೀಶ್‌ ಜಯಂತೋತ್ಸವ

ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರ ಸಾರಥ್ಯದಲ್ಲಿ ಮಂಡ್ಯ ನಗರದಲ್ಲಿ ಸ್ವಾಮಿ ವಿಜಯೋತ್ಸವ ನಡೆಯಲಿದ್ದು, ಈ ಸಮಾವೇಶವೇ ಅಂಬಿ ಜಯಂತ್ಯೋತ್ಸವವು ಆಗಲಿದೆ.

ಮಧ್ಯಾಹ್ನ 2 ಗಂಟೆಗೆ ಸಿಲ್ವರ್‌ ಜ್ಯುಬಿಲಿ ಪಾರ್ಕ್ನಲ್ಲಿ ಈ ಸಮಾವೇಶ ನಡೆಯಲಿದ್ದು, ದರ್ಶನ್‌ ಹಾಗೂ ಯಶ್‌ ಜತೆಯಾಗಲಿದ್ದಾರೆ. ಹೀಗಾಗಿ ಅಂಬರೀಶ್‌, ದರ್ಶನ್‌, ಯಶ್‌ ಅಭಿಮಾನಿಗಳು ಸೇರಿದಂತೆ ಸುಮಲತಾ ಗೆಲುವಿಗೆ ದುಡಿದ ಮಂಡ್ಯ ಜನ ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.

ಅಂಬರೀಶ್‌ ಪುಸ್ತಕ ಬಿಡುಗಡೆ

ಇದೇ ಸ್ವಾಭಿಮಾನಿ ವಿಜಯೋತ್ಸವದ ವೇದಿಕೆಯಲ್ಲಿ ಹಿರಿಯ ನಟ ಅಂಬರೀಶ್‌ ಅವರ ಜೀವನ ಪುಟಗಳನ್ನು ಒಳಗೊಂಡ ‘ಅಂಬರೀಶ್‌- ವ್ಯಕ್ತಿ, ವ್ಯಕ್ತಿತ್ವ, ವರ್ಣರಂಜಿತ ಬದುಕು’ ಎನ್ನುವ ಪುಸ್ತಕ ಬಿಡುಗಡೆ ಆಗಲಿದೆ. ಸಿನಿಮಾ ಪತ್ರಕರ್ತ ಶರಣ್‌ ಹುಲ್ಲೂರು ಬರೆದಿರುವ ಈ ಪುಸ್ತಕವನ್ನು ಬೆಂಗಳೂರಿನ ಜಮೀಲ್‌ ತಮ್ಮ ಸಾವಣ್ಣ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್‌, ದರ್ಶನ್‌, ಯಶ್‌, ರಾಕ್‌ಲೈನ್‌ ವೆಂಕಟೇಶ್‌, ದೊಡ್ಡಣ್ಣ ಅವರು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಅಮರ್‌ ವಿಶೇಷ ಟೀಸರ್‌ ಅನಾವರಣ

ನಾಗಶೇಖರ್‌ ನಿರ್ದೇಶಿಸಿ, ಅಭಿಷೇಕ್‌ ಮೊದಲ ಬಾರಿಗೆ ನಟಿಸಿರುವ ‘ಅಮರ್‌’ ಚಿತ್ರತಂಡದಿಂದಲೂ ಅಂಬರೀಶ್‌ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಮೇ.29ರಂದು ಬೆಳಗ್ಗೆ ‘ಅಮರ್‌’ ಚಿತ್ರದ ವಿಶೇಷವಾದ ಟೀಸರ್‌ ಬಿಡುಗಡೆ ಮಾಡಲಿದ್ದು, ಇದನ್ನು ಅಂಬರೀಶ್‌ ಅವರಿಗೆ ಅರ್ಪಣೆ ಮಾಡುತ್ತಿದ್ದಾರೆ. ಸಂದೇಶ್‌ ನಾಗರಾಜ್‌ ನಿರ್ಮಾಣದ ಚಿತ್ರವಿದು. ಮೇ 31ರಂದು ಸಿನಿಮಾ ತೆರೆಗೆ ಬರುತ್ತಿದೆ. ಯೂಟ್ಯೂಬ್‌ನಲ್ಲಿ ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ.

ಅಂಬಿ- ವಿಷ್ಣು ಪುತ್ಥಳಿ

ಕನ್ನಡ ಚಿತ್ರರಂಗದ ಕುಚುಕು ಗೆಳೆಯರು ಅಂದರೆ ಅದು ಅಂಬರೀಶ್‌ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್‌ ಅವರು. ಈ ಕಾರಣಕ್ಕೆ ಅಭಿಮಾನ್‌ ಸ್ಟುಡಿಯೋದಲ್ಲಿರುವ ವಿಷ್ಣು ದಾದಾ ಅವರ ಸ್ಮಾರಕದ ಪಕ್ಕದಲ್ಲೇ ಅಂಬರೀಶ್‌ ಅವರ ಅಂತ್ಯ ಸಂಸ್ಕಾರ ಮಾಡಬೇಕೆಂದು ಆಗ ಅಭಿಮಾನಿಗಳು ಒತ್ತಡ ಮಾಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.

ಈಗ ಅಂಬರೀಶ್‌ ಹುಟ್ಟು ಹಬ್ಬದ ಅಂಗವಾಗಿ ಸಾಹಸಸಿಂಹ ಹಾಗೂ ರೆಬೆಲ್‌ ಸ್ಟಾರ್‌ ಜೋಡಿ ಪುತ್ಥಳಿಗಳನ್ನು ಅಭಿಮಾನಿಗಳೇ ಸ್ಥಾಪಿಸುತ್ತಿದ್ದಾರೆ. ಅದರ ಮೊದಲ ಅಂಗವಾಗಿ ಚಾಮರಾಜಪೇಟೆಯ ಟಿಆರ್‌ ಮಿಲ್‌ ಬಳಿ ಇಬ್ಬರ ಜೋಡಿ ಪುತ್ಥಳಿಯನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲೇ ಇದು ಮೊದಲು. ಮುಂದೆ ರಾಜ್ಯದ ಬೇರೆ ಬೇರೆ ಕಡೆ ಇದೇ ರೀತಿ ಜೋಡಿ ಪುತ್ಥಳಿಯನ್ನು ಅಭಿಮಾನಿಗಳು ಪ್ರತಿಷ್ಠಾಪಿಸಲಿದ್ದಾರೆ.