Alpha Box Office Collection: ಆಲಿಯಾ ಭಟ್ ಮತ್ತು ಶರ್ವರಿ ನಟನೆಯ ಸ್ಪೈ ಚಿತ್ರ 'ಆಲ್ಫಾ'ಗೆ ನಿರೀಕ್ಷಿತ ಓಪನಿಂಗ್ ಸಿಕ್ಕಿಲ್ಲ. ಆದರೆ, ಮೊದಲ ದಿನವೇ ವಿಶ್ವಾದ್ಯಂತ ₹17.42 ಕೋಟಿ ಗಳಿಕೆ ಮಾಡಿದೆ.
ಆಲಿಯಾ ಭಟ್ ಮತ್ತು ಶರ್ವರಿ ನಟನೆಯ ಸ್ಪೈ ಚಿತ್ರ 'ಆಲ್ಫಾ'ಗೆ ನಿರೀಕ್ಷಿತ ಓಪನಿಂಗ್ ಸಿಕ್ಕಿಲ್ಲ. ಆದರೆ, ಮೊದಲ ದಿನವೇ ವಿಶ್ವಾದ್ಯಂತ ₹17.42 ಕೋಟಿ ಗಳಿಕೆ ಮಾಡಿದೆ. ಇದು YRF ಸ್ಪೈ ಯೂನಿವರ್ಸ್‌ನ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಈ ಬಗ್ಗೆ ನಟಿ ಶರ್ವರಿ ತಮ್ಮ ನಿರೀಕ್ಷೆ ಹಂಚಿಕೊಂಡಿದ್ದಾರೆ.
'ಆಲ್ಫಾ'ಗೆ ನೀರಸ ಪ್ರತಿಕ್ರಿಯೆ
ಆಲಿಯಾ ಭಟ್ ಮತ್ತು ಶರ್ವರಿ ನಟನೆಯ 'ಆಲ್ಫಾ' ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. YRF ಸ್ಪೈ ಯೂನಿವರ್ಸ್‌ನ ಈ ಹೊಸ ಸಿನಿಮಾದಲ್ಲಿ ಬಾಬಿ ಡಿಯೋಲ್, ಅನಿಲ್ ಕಪೂರ್ ಕೂಡ ನಟಿಸಿದ್ದು, ಹೃತಿಕ್ ರೋಷನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ತಾರಾಗಣ ಮತ್ತು YRF ಸ್ಪೈ ಯೂನಿವರ್ಸ್‌ನ ಜನಪ್ರಿಯತೆ ಇದ್ದರೂ, ಸಿನಿಮಾ ನಿರೀಕ್ಷಿಸಿದಷ್ಟು ಸದ್ದು ಮಾಡಿಲ್ಲ. ಆದರೂ, ಚಿತ್ರತಂಡದ ಪ್ರಕಾರ, ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಉತ್ತಮ ಆರಂಭವನ್ನೇ ಪಡೆದಿದೆ.
YRF ಸಂಸ್ಥೆಯ ಪ್ರಕಾರ, 'ಆಲ್ಫಾ' ಸಿನಿಮಾ ಬಿಡುಗಡೆಯಾದ ಮೊದಲ ದಿನ ವಿಶ್ವಾದ್ಯಂತ ₹17.42 ಕೋಟಿ ಗಳಿಸಿದೆ. "ಭಾರತದಲ್ಲಿ ₹11.20 ಕೋಟಿ GBOC (₹9.25 ಕೋಟಿ NBOC) ಮತ್ತು ವಿದೇಶದಲ್ಲಿ ₹6.22 ಕೋಟಿ GBOC (USD 647k) ಗಳಿಸಿದೆ" ಎಂದು YRF ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಶಿವ್ ರಾವೈಲ್ ನಿರ್ದೇಶನದ 'ಆಲ್ಫಾ', YRF ಸ್ಪೈ ಯೂನಿವರ್ಸ್‌ನ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ.
ಬ್ಯಾಕ್-ಟು-ಬ್ಯಾಕ್ ಸಿನಿಮಾಗಳ ಬಗ್ಗೆ ಶರ್ವರಿ ಮಾತು
ಶುಕ್ರವಾರ, ಶರ್ವರಿ ತಮ್ಮ ಸಹನಟಿ ಆಲಿಯಾ ಜೊತೆಗಿನ ಹಲವು ತೆರೆಮರೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ಇವತ್ತು ಅಧಿಕೃತವಾಗಿ ಆಲ್ಫಾ ಡೇ! ತೆರೆಮೇಲೆ ಭರ್ಜರಿ ಆ್ಯಕ್ಷನ್, ತೆರೆಹಿಂದೆ ಒಳ್ಳೊಳ್ಳೆ ಕ್ಷಣಗಳು! ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ #Alpha ನೋಡಿ," ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ, ಶರ್ವರಿ ಎರಡು ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಒಂದು ಭಾವನಾತ್ಮಕ ಪ್ರೇಮಕಥೆ 'ಮೈ ವಾಪಸ್ ಆವೂಂಗಾ' ಮತ್ತು ಇನ್ನೊಂದು ಆ್ಯಕ್ಷನ್ ಡ್ರಾಮಾ 'ಆಲ್ಫಾ'.
ಈ ಬಗ್ಗೆ ಮಾತನಾಡಿದ ಶರ್ವರಿ, "'ಮೈ ವಾಪಸ್ ಆವೂಂಗಾ' ಚಿತ್ರಕ್ಕೆ ಸಿಗುತ್ತಿರುವ ಪ್ರೀತಿಗೆ ನಾನು ನಿಜಕ್ಕೂ ಆಭಾರಿಯಾಗಿದ್ದೇನೆ. ಒಬ್ಬ ನಟಿಯಾಗಿ, ಜನರ ಮನಸ್ಸಿಗೆ ಹತ್ತಿರವಾಗುವ ಕಥೆಗಳ ಭಾಗವಾಗಲು ನಾವು ಕನಸು ಕಾಣುತ್ತೇವೆ. ಪ್ರೇಕ್ಷಕರು ನನ್ನ ನಟನೆಯನ್ನು ಮನಸಾರೆ ಮೆಚ್ಚಿಕೊಳ್ಳುತ್ತಿರುವುದು ನನಗೆ ತುಂಬಾ ಖುಷಿ ಮತ್ತು ತೃಪ್ತಿ ನೀಡಿದೆ. ನನ್ನ ವೃತ್ತಿಜೀವನದ ಈ ದೊಡ್ಡ ಯಶಸ್ಸಿಗೆ ಇಮ್ತಿಯಾಜ್ ಅಲಿ ಸರ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಈ ಸಿನಿಮಾದ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲಬೇಕು. ಈ ಸಿನಿಮಾದ ಕ್ಯಾಪ್ಟನ್ ಆಗಿ, ಅವರ ದೃಷ್ಟಿಕೋನ ಮತ್ತು ಈ ಕಥೆಯ ಮೇಲಿನ ಅವರ ಪ್ರೀತಿ ದೇಶಾದ್ಯಂತ ಜನರನ್ನು ತಲುಪಿದೆ," ಎಂದರು.
ಅವರು ಮುಂದುವರಿಸಿ, "ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಮತ್ತು ಈ ವಿಶೇಷ ಸಿನಿಮಾವನ್ನು ಇಷ್ಟು ಪ್ರೀತಿಯಿಂದ ಸ್ವೀಕರಿಸಿದ ಪ್ರತಿಯೊಬ್ಬರಿಗೂ ನಾನು ಸದಾ ಕೃತಜ್ಞಳಾಗಿರುತ್ತೇನೆ. ನಾವು ಯಾಕೆ ಸಿನಿಮಾಗಳನ್ನು ಮತ್ತು ನಟನೆಯನ್ನು ಇಷ್ಟಪಡುತ್ತೇವೆ ಎಂಬುದನ್ನು ಇಂತಹ ಕ್ಷಣಗಳು ನೆನಪಿಸುತ್ತವೆ. ಸಿನಿಮಾವು ನಮ್ಮೆಲ್ಲರನ್ನೂ ಒಂದುಗೂಡಿಸಿ, ಸಂತೋಷವನ್ನು ಹಂಚಬಲ್ಲದು. ಈ ತಿಂಗಳು ಈಗಾಗಲೇ ತುಂಬಾ ವಿಶೇಷವಾಗಿದೆ ಮತ್ತು ನನ್ನ 'ಆಲ್ಫಾ' ಚಿತ್ರಕ್ಕೂ ಇದೇ ರೀತಿ ಬೆಂಬಲ ಸಿಗಲಿ ಎಂದು ಕಾಯುತ್ತಿದ್ದೇನೆ. ಪ್ರೇಕ್ಷಕರಿಂದ ಅದೇ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ ಎಂದು ಭಾವಿಸುತ್ತೇನೆ. ಒಂದೇ ತಿಂಗಳಲ್ಲಿ 'ಮೈ ವಾಪಸ್ ಆವೂಂಗಾ' ಮತ್ತು 'ಆಲ್ಫಾ' ಎರಡೂ ಸಿನಿಮಾಗಳು ಗೆದ್ದರೆ, ಅದು ನನ್ನ ಕನಸು ನನಸಾದಂತೆ! ಸದ್ಯಕ್ಕೆ, ಈ ಖುಷಿಯಲ್ಲೇ ಮುಳುಗಿದ್ದೇನೆ ಮತ್ತು ಮುಂದಿನದನ್ನು ಎದುರು ನೋಡುತ್ತಿದ್ದೇನೆ," ಎಂದು ಹೇಳಿದರು.


