ಕಿರುತೆರೆ ರಿಯಾಲಿಟಿ ಶೋಗಳ ಮಟ್ಟಿಗೆ ನಂಬರ್‌ ಒನ್‌ ಆ್ಯಂಕರ್‌ ಎನ್ನುವ ಖ್ಯಾತಿ ನಟ ಅಕುಲ್‌ ಬಾಲಾಜಿ ಅವರದ್ದು. ಕನ್ನಡ ಅಷ್ಟುಮನರಂಜನೆ ವಾಹಿನಿಗಳ ರಿಯಾಲಿಟಿ ಶೋಗಳಿಗೆ ಅವರು ಬಹು ಬೇಡಿಕೆಯ ನಿರೂಪಕ. ‘ಕಿಕ್‌'ನಂತರ ಈಗ ‘ಸೂಪರ್‌ ಜೋಡಿ ‘ಸೀಜನ್‌ 2 ನಲ್ಲಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತಿಗೆ ಸಿಕ್ಕ ಅವರು, ಮತ್ತೊಂದು ಫ್ಲೇವರ್‌ನ ರಿಯಾಲಿಟಿ ಶೋ ವಿಶೇಷತೆಯ ಜತೆಗೆ ತಮ್ಮ ಆ್ಯಂಕರಿಂಗ್‌ ಜರ್ನಿ ಕುರಿತು ಮಾತನಾಡಿದರು

1)ಕಿಕ್‌' ನಂತರ ಮತ್ತೊಂದು ಫ್ಲೇವರ್‌ನ ರಿಯಾಲಿಟಿ ಶೋ ‘ಸೂಪರ್‌ ಜೋಡಿ'ಗೆ ನಿರೂಪಕರಾಗಿದ್ದೀರಿ, ಹೇಗಿತ್ತು ತಯಾರಿ?

ಅಂಥದ್ದೇನು ಹೊಸ ತರಹದ ಸಿದ್ಧತೆಯೇನಿಲ್ಲ. ಯಾಕಂದ್ರೆ, ಈ ಶೋ ನನಗೆ ಹೊಸದಲ್ಲ. ಈಗಾಗಲೇ ಬಂದು ಹೋದ ‘ಸೂಪರ್‌ ಜೋಡಿ ' ಮೊದಲ ಸೀಜನ್‌ಗೆ ಆ್ಯಂಕರ್‌ ಆಗಿದ್ದೇ ನಾನು. ಆ ಹೊತ್ತಿಗೆ ನಿಜಕ್ಕೂ ಅದೊಂದು ಸವಾಲಾಗಿತ್ತು. ಉಳಿದ ಚಾನೆಲ್‌ಗಳಲ್ಲೂ ದೊಡ್ಡ ಮಟ್ಟದ ಶೋಗಳು ಬರುತ್ತಿದ್ದವು. ಹಾಗಾಗಿ ಸಾಕಷ್ಟುಸಿದ್ಧತೆ ಮಾಡಿಕೊಂಡೇ ನಿರೂಪಣೆಗೆ ನಿಂತಿದ್ದೆ. ಅದೃಷ್ಟವೋ ಅಥವಾ ತಂಡದ ಶ್ರಮವೋ ಗೊತ್ತಿಲ್ಲ, ಅದು ಉಳಿದ ಚಾನೆಲ್‌ಗಳ ದೊಡ್ಡ ಮಟ್ಟದ ಶೋಗಳಿಗೂ ಫೈಟ್‌ ನೀಡಿತು. ನಿರೀಕ್ಷೆ ಮಾಡದಷ್ಟು ಸಕ್ಸಸ್‌ ಪಡೆಯಿತು. ಅದೇ ಶೋನ ‘ಸೀಜನ್‌ 2 'ಈಗ ಶುರುವಾಗಿದೆ. ಶೋನಲ್ಲಿರುವ ಟಾಸ್ಕ್‌ಗಳನ್ನು ಬಿಟ್ಟರೆ ನನಗಿಲ್ಲಿ ನಿಜಕ್ಕೂ ಸವಾಲು ಎನಿಸಿದ್ದು ಸ್ಪರ್ಧಿಗಳು. ಯಾಕಂದ್ರೆ ಅವರೆಲ್ಲ ಬಹುತೇಕ ಹೊಸಬರು. ಅವರನ್ನು ಹೇಗೆ ಹ್ಯಾಂಡಲ್‌ ಮಾಡಬೇಕು ಎನ್ನುವುದೇ ಸವಾಲು.

2)ಅಂದ್ರೆ, ನೀವು ಈ ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಹುಚ್ಚ ವೆಂಕಟ್‌ ಅವರನ್ನು ಕುರಿತು ಮಾತನಾಡುತ್ತಿದ್ದೀರಾ?

ಅಯ್ಯೋ, ಅವರೊಬ್ಬರು ಮಾತ್ರವಲ್ಲ , ಸಾಕಷ್ಟುಜನರು ಇಲ್ಲಿ ಹೊಸಬರು. ವಿಶೇಷವಾಗಿ ಹುಚ್ಚ ವೆಂಕಟ್‌ ಅವರನ್ನು ನಾನು ಇಲ್ಲಿಯ ತನಕ ಮುಖಾಮುಖಿ ಭೇಟಿ ಆಗಿಲ್ಲ. ಅವರ ಬಗ್ಗೆ ಕೇಳಿ ತಿಳಿದು­ ಕೊಂಡಿದ್ದು ಮಾತ್ರ. ಅವರೂ ಕೂಡ ಈ ಶೋನ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಗೊತ್ತಾದಾಗ ನನ್ನ ಹೆಂಡತಿ ಸಣ್ಣದಾಗಿ ಆಕ್ಷೇಪ ಎತ್ತಿದ್ದರು. ‘ನೋಡ್ರಿ ಹುಷಾರು...'ಅಂತ ಎಚ್ಚರಿಕೆ ಕೊಟ್ರು. ಅಮ್ಮ ಕೂಡ ‘ಎಚ್ಚರಿಕೆಯಿಂದ ಪ್ರೋಗ್ರಾಮ್‌ ಮಾಡಪ್ಪಾ'ಅಂತ ಹೇಳಿದ್ರು.ಯಾಕಂದ್ರೆ ಯಾರದ್ದೋ ಸಿಟ್ಟು, ಆಕ್ರೋಶಕ್ಕೆ ಇನ್ನೇನೋ ಯಡವಟ್ಟು ಆದೀತು ಎನ್ನುವ ಆತಂಕ ಅವರದ್ದು. ಆದ್ರೆ, ನಾನು ಅವರಿಗೆ ಹೇಳಿದ್ದು ಒಂದೇ ಮಾತು, ‘ಸುಮ್ನೆ ನೀವು ನೋಡ್ತಾ ಇರಿ.. .ಅಲ್ಲಿ ನೀವು ಬೇರೆ ತರಹದ ವೆಂಕಟ್‌ ಅವರನ್ನೇ ಕಾಣುತ್ತೀರಿ. ಹುಚ್ಚ ವೆಂಕಟ್‌ ಹೀಗೂ ಇರ್ತಾರಾ ಅಂತ ನೀವೇ ಆಚ್ಚರಿ ಪಡ್ತೀರಿ ' ಎಂದು ಭರವಸೆ ಕೊಟ್ಟಿದ್ದೇನೆ. ಇದೇ ಮಾತನ್ನು ನಾನು ಕಿರುತೆರೆ ವೀಕ್ಷಕರಿಗೂ ಹೇಳುತ್ತಿದ್ದೇನೆ. ನಿಮಗೆಲ್ಲ ಬೇರೆ ತರಹದ ವೆಂಕಟ್‌ ಇಲ್ಲಿ ಕಾಣಿಸಿಕೊಳ್ಳುವುದು ಗ್ಯಾರಂಟಿ.

3)ಹುಚ್ಚ ವೆಂಕಟ್‌ ಅವರಂತಹ ವ್ಯಕ್ತಿಗಳನ್ನು ಪಳಗಿಸುವ ವಿದ್ಯೆ ನಿಮಗೆ ಗೊತ್ತಿದೆ ಅಂತನಾ?

ಅದೇನೋ ಗೊತ್ತಿಲ್ಲ, ಅಂತಹ ಯಾವುದೇ ಮಂತ್ರ ಶಕ್ತಿಯಂತೂ ನನಗಿಲ್ಲ. ಆದರೆ, ನಿರೂಪಕನಾಗಿ ನಾನು ಶೋ ನಲ್ಲಿ ನಿಂತಾಗ ಎಂಥವರನ್ನು ಪಳಗಿಸುವ ವಿದ್ಯೆಯೊಂದನ್ನು ದೇವರು ನನಗೆ ಕೊಟ್ಟಿದ್ದಾನೆಂದೇ ನಂಬಿದ್ದೇನೆ. ಯಾಕಂದ್ರೆ, ಆರಂಭದಿಂದ ಇಲ್ಲಿ ತನಕ ಲೆಕ್ಕ ಹಾಕಿದರೆ ಸಾಕಷ್ಟುರಿಯಾಲಿಟಿ ಶೋಗಳಿಗೆ ನಾನು ನಿರೂಪಕನಾ­ಗಿದ್ದು ನಿಮಗೂ ಗೊತ್ತು. ಒಂದಲ್ಲ ಅವೆಲ್ಲವೂ ಬೇರೆ ಬೇರೆ ತರಹದ ಕಾರ್ಯಕ್ರಮ. ಅಲ್ಲಿ ಬಂದವರೆಲ್ಲರೂ ನಾನಾ ಬಗೆಯ ಜನರು. ಸಾಕಷ್ಟುಮಂದಿ ಸೆಲಿಬ್ರಿಟಿಗಳೂ ಇದ್ದರು.ಅವರೆಲ್ಲರ ನಡುವೆಯೂ ನಾನು ಇಲ್ಲಿ ತನಕ ಸಾಗಿ ಬಂದಿದ್ದೇ­ನೆಂದರೆ, ಅದಕ್ಕೆ ಕಾರಣ ದೇವರ ದಯೆ ಮತ್ತು ನನ್ನ ಶ್ರಮ.

4)ನೀವೇ ಹೇಳುವ ಹಾಗೆ ಇಷ್ಟೆಲ್ಲ ವಿಭಿನ್ನ ಬಗೆಯ ರಿಯಾಲಿಟಿ ಶೋಗಳನ್ನು ನಿಭಾಯಿಸಲು ಸಾಧ್ಯವಾಗಿದ್ದು ಹೇಗೆ?

ಜೀವನದಲ್ಲಿ ಎಲ್ಲ ತರಹದ ಅಡುಗೆ ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಮನುಷ್ಯನಿಗೆ ಇದೆ. ಹಾಗಾಗಿ ಒಮ್ಮೆ ಬಿರಿಯಾನಿ ಬೇಕು ಎನ್ನುತ್ತೇವೆ, ಮಗದೊಮ್ಮೆ ಮುದ್ದೆ , ಸೊಪ್ಪು ಸಾರ್‌ ಬೇಕು ಎನಿಸುತ್ತೆ. ಇವೆಲ್ಲವನ್ನು ತಿಂದರೂ ನಾವು ಜೀರ್ಣಿಸಿಕೊಳ್ಳುತ್ತೇವೆ. ಹಾಗೆಯೇ ಎಲ್ಲ ತರಹದ ಕಾರ್ಯಕ್ರಮಗಳನ್ನು ಹ್ಯಾಂಡಲ್‌ ಮಾಡಬೇಕು ಅನ್ನೋದನ್ನು ನಾನು ಚಾಲೆಂಜ್‌ ಆಗಿಯೇ ತೆಗೆದುಕೊಂಡೆ. ಹಾಗೆ ನೋಡಿದರೆ, ಭಾರತದಲ್ಲಿ ಒಬ್ಬನೇ ವ್ಯಕ್ತಿ ಇಷ್ಟೊಂದು ಬಗೆಯ ರಿಯಾಲಿಟಿ ಶೋಗೆ ನಿರೂಪಕನಾಗಿದ್ದು ಎನ್ನುವ ಹೆಮ್ಮೆ ನನಗಿದೆ. ಇದಕ್ಕೆ ಕಾರಣವಾಗಿದ್ದು ಶ್ರಮ, ಶ್ರದ್ದೆ ಮತ್ತು ಸಾಧಿಸುವ ಹಸಿವು. ಅವಕಾಶ ಹುಡುಕಿಕೊಂಡು ಬಂದಾಗೆಲ್ಲ ಆಗೋದಿಲ್ಲ ಎಂದಿಲ್ಲ. ಆಯ್ತು ಮಾಡುತ್ತೇನೆ..ಓಕೆ ಅಂತ ಹೇಳುವುದು ನನ್ನ ಸ್ವಭಾವ. ‘ಶ್ರಮ ಪಡದೇ ಯಾವುದು ಸಿಗೋದಿಲ್ಲ, ಮನುಷ್ಯ ಯಶಸ್ಸು ಕಾಣುವುದಕ್ಕೆ ಶ್ರಮ ಪಡಬೇಕು 'ಎನ್ನುವ ಮಾತನ್ನು ನನ್ನ ತಂದೆ ಹೇಳುತ್ತಿದ್ದರು. ಆ ಮಾತನ್ನು ಪ್ರತಿಕ್ಷಣವೂ ನೆನಪಿಸಿಕೊಂಡು ಬರುತ್ತಿದ್ದೇನೆ. ಆ ನಿಟ್ಟಿನಲ್ಲಿ ನನ್ನ ಶ್ರಮದಿಂದ ಸಾಧ್ಯವಾಗಿದ್ದು ಇದು.

5)ನಟನಾಗಿ ಕಾಣದ ಸಕ್ಸಸ್‌ ನಿಮಗೆ ನಿರೂಪಣೆಯಲ್ಲಿ ಸಾಧ್ಯವಾಗಿದೆ ಅಂತ ಅಂದುಕೊಳ್ಳಬಹುದಾ?

ಖಂಡಿತವಾಗಿಯೂ ನಾನು ನಾನು ಸ್ಟಾರ್‌ ಆಗಬೇಕೆಂದು ಬಂದವನಲ್ಲ. ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುವುದೇ ದೊಡ್ಡದು ಎನ್ನುವ ಆಸೆಯಿಂದ ಬಂದವನು. ಯಾಕಂದ್ರೆ ನಂಗೆ ಯಾವುದೇ ಬ್ಯಾಕ್‌ಗ್ರೌಂಡ್‌ ಇಲ್ಲ. ಯಾರು ಗಾಡ್‌ ಫಾದರ್‌ ಇಲ್ಲ. ನಿಜಕ್ಕೂ ನನಗಿರುವ ಗಾಡ್‌ಫಾದರ್‌ ಅಂದ್ರೆ ಶ್ರಮ , ಕಷ್ಟಮತ್ತು ಸೆಲಿಬ್ರಿಟಿಗಳು. ಅವರಿಂದಲೇ ನಾನು ಇಲ್ಲಿ ತನಕ ಬಂದಿದ್ದೇನೆ. ಹಾಗಾಗಿ ಸೋಲು-ಗೆಲುವು ಅಂತೆಲ್ಲ ನಾನು ಯೋಚಿಸಿಲ್ಲ. ಅವಕಾಶ ಸಿಕ್ಕಾಗ ದುಡಿಯಬೇಕು ಎನ್ನುವ ಸೂತ್ರಕ್ಕೆ ಮಾತ್ರ ಬೆಲೆ ಕೊಟ್ಟವನು ನಾನು. ಅದೇ ಸೂತ್ರ ಇಲ್ಲಿ ತನಕ ಕೈ ಹಿಡಿದಿದೆ.

6)ಕನ್ನಡ, ತೆಲುಗು ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ನಿರೂಪಕನಾಗಿಯೇ ಸಾಕಷ್ಟುಬ್ಯುಸಿ ಆಗಿರುವ ತಾವು ಖಾಸಗಿ ಬದುಕಿನ ಬಗ್ಗೆ ಏನು ಹೇಳುತ್ತೀರಿ?

ದುಡಿಮೆ ಜತೆಗೆ ಖಾಸಗಿ ಬದುಕು ಅಷ್ಟುಸುಲಭವಲ್ಲ. ತುಂಬಾ ಕಠಿಣ. ಎಲ್ಲದಕ್ಕೂ ಹೊಂದಾಣಿಕೆ ಬೇಕು. ಆ ಹೊಂದಾಣಿಕೆ ನಮ್ಮಲ್ಲಿದೆ.ಯಾವುದೇ ಶೋ ಒಪ್ಪಿಕೊಳ್ಳುವ ಮುನ್ನ ಪತ್ನಿ ಜತೆಗೆ ಚರ್ಚೆ ಮಾಡುತ್ತೇನೆ. ಓಕೆ ಅಂದ್ರೆ ಒಪ್ಪಿಗೆ ಹೇಳುತ್ತೇನೆ. ಹಾಗಂತ ಅವರು ಎಂದಿಗೂ ನಾನು ಒಪ್ಪಿಕೊಳ್ಳುವ ಶೋ ಗೆ ಬೇಡ ಎಂದಿಲ್ಲ. ಎಷ್ಟೋ ಬಾರಿ ಅವರ ಪ್ರೋತ್ಸಾಹದಿಂದಲೇ ಉತ್ಸಾಹದಿಂದ ಶೋಗಳನ್ನು ಒಪ್ಪಿಕೊಂಡು ಮುಗಿಸಿದ್ದೇನೆ. ಇಂತಹ ಬೆಂಬಲ ಇದ್ದಾಗ ಯಾವುದು ಕಷ್ಟಆಗುವುದಿಲ್ಲ. ಶೂಟಿಂಗ್‌ ಇಲ್ಲದ ದಿನಗಳಲ್ಲಿ ಮನೆಯಲ್ಲಿ ಪತ್ನಿ ಮತ್ತು ಮಗು ಜತೆಗೆ ಕಳೆಯುತ್ತೇನೆ.

7) ಕಲರ್ಸ್‌ ಕನ್ನಡದ ‘ಡ್ಯಾನ್ಸಿಂಗ್‌ ಸ್ಟಾರ್‌'ನಿಂದ ಉದಯದ ‘ಕಿಕ್‌'ಗೆ ಹಾರಿದ್ದು ಸಂಭಾವನೆ ಕಾರಣಕ್ಕೆ ಎನ್ನುವ ಮಾತುಗಳ ಬಗ್ಗೆ ಏನು ಹೇಳುತ್ತೀರಿ?

ಅದಕ್ಕೆ ಕಾರಣ ಸಂಭಾವನೆ ವಿಚಾರವಲ್ಲ. ನಟ ಶಿವರಾಜ್‌ ಕುಮಾರ್‌ ಅವರ ಜತೆಗೊಂದು ರಿಯಾಲಿಟಿ ಶೋ ಮಾಡಬೇಕೆನ್ನುವ ತುಡಿತ. ಅಲ್ಲಿಂದ ಬರುವುದಕ್ಕೂ ಮುನ್ನ ನಾನು ರವಿ ಸಾರ್‌ ಅವರನ್ನು ಕೇಳಿದ್ದೆ. ಅವರು ‘ಹೋಗಪ್ಪ ನೀನು ಮಾಡು, ಒಳ್ಳೆಯದಾಗಲಿ. ಒಳ್ಳೆಯ ಅವಕಾಶ ಸಿಗುತ್ತಿದೆ ಹೋಗು ಎಂದು ಹಾರೈಸಿದ್ದರು. ಬಟ್‌ ಅವರು ಒಂದು ಮಾತು ಹೇಳಿದ್ರು, ‘ನಿನ್ನ ಮಿಸ್‌ ಮಾಡ್ಕೋಬೇ­ಕಾಗುತ್ತದೆ'­ಅಂದಿದ್ರು. ಅವರ ಸಹಕಾರ, ಸಲಹೆ ಅಲ್ಲವೂ ನನಗಿದೆ. ಸಮಯ ಬಂದ್ರೆ ಮತ್ತೆ ನಾನು ಕಲರ್ಸ್‌ಗೆ ಹೋಗಬಹುದು.

-ದೇಶಾದ್ರಿ ಹೊಸ್ಮನೆ`