ಒಂದೇ ಚಿತ್ರದ ಮೂಲಕ ಭರವಸೆ ಮೂಡಿಸಿದ ನಟಿ ಐಶಾನಿ ಶೆಟ್ಟಿ. ಇತ್ತೀಚೆಗೆ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದುಕೊಳ್ಳುತ್ತಿರುವಾಗಲೇ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಹೊಸ ಲುಕ್ಕು, ಹೊಸ ಫೋಟೋ ಶೂಟ್ ಜತೆಗೆ ಬಂದಿರುವ ಐಶಾನಿ ಅವರ ಹೊಸ ಸಿನಿಮಾ ಯಾವುದೆಂದು ಅವರೇ ಇಲ್ಲಿ ಹೇಳಿದ್ದಾರೆ.

ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರವಾದಂತೆ ಆಗಿದ್ದು ಯಾಕೆ?

ಅದಕ್ಕೆ ಕಾರಣ ನನ್ನ ಕಾಲೇಜು. ಯಾಕೆಂದರೆ ನಾನು ಚಿತ್ರರಂಗಕ್ಕೆ ಬಂದಾಗ ಡಿಗ್ರಿ ಓದುತ್ತಿದ್ದೆ. ಹೀಗಾಗಿ ಸಿನಿಮಾ ಒಂದು ಹವ್ಯಾಸವಾಗಿ ಆಯ್ಕೆ ಮಾಡಿಕೊಂಡೆ. ಮಾಸ್ಟರ್ ಡಿಗ್ರಿ ಮಾಡುವ ಹೊತ್ತಿಗೆ ಸಿನಿಮಾಗಳನ್ನು ಒಪ್ಪಿಕೊಳ್ಳುವುದಕ್ಕೆ ಆಗಲಿಲ್ಲ. ಕಾಲೇಜು ಮುಗಿಸಿದ ಮೇಲೆಯೇ ಸಿನಿಮಾ ಎಂದುಕೊಂಡಿದ್ದಕ್ಕೆ ನಟನೆಯಿಂದ ಗ್ಯಾಪ್ ಆಯ್ತು. ನಾಪತ್ತೆ ಅಂತೂ ಆಗಿಲ್ಲ.

ಈ ಕರಾವಳಿ ಬೆಡಗಿಯ ಪ್ರೇಮ ಪುರಾಣ ಓದಲೇಬೇಕು!

ಕಿರು ಚಿತ್ರದ ನಿರ್ದೇಶನದ ಅನುಭವ ಹೇಗಿತ್ತು?

ಕಾಂಜಿ ನನ್ನ ನಿರ್ದೇಶನದ ಕಿರು ಚಿತ್ರ. ನನಗೇ ಒಳ್ಳೆಯ ಹೆಸರು ತಂದು ಕೊಟ್ಟಿತು. ನಿರ್ದೇಶಕಿ ಯಾಗಿ ಚಿತ್ರರಂಗದ ಮತ್ತೊಂದು ವಿಭಾಗವನ್ನು ಹತ್ತಿರದಿಂದ ನೋಡಿದೆ. ಬೇರೆ ಬೇರೆ ಕಡೆ ಪ್ರಶಸ್ತಿಗಳು ಬಂದವು. ನಿರ್ದೇಶಕ ಒಂದು ಚಿತ್ರವನ್ನು ಕಟ್ಟುವ ಶ್ರಮ ಅರ್ಥವಾಯಿತು.

ರಜೆಯಲ್ಲೇ ಶೂಟಿಂಗ್ ಮುಗಿಸಿದ ನಟಿ ಇವರು!

ಈಗ ಯಾವ ಚಿತ್ರ ಒಪ್ಪಿಕೊಂಡಿದ್ದೀರಿ?

ಎರಡು ಚಿತ್ರಗಳು ಇವೆ, ‘ನಮ್ ಗಣಿ ಬಿಕಾಂ ಪಾಸ್’ ಹಾಗೂ ಗುಳ್ಟು ನವೀನ್ ಜತೆಗೆ ನಟಿಸುತ್ತಿರುವ ಸಿನಿಮಾ. ಎರಡೂ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಗಣೇಶನ ಹಬ್ಬಕ್ಕೆ ‘ನಮ್ ಗಣಿ ಬಿಕಾಂ ಪಾಸ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ತುಂಬಾ ಒಳ್ಳೆಯ ರೆಸ್ಪಾನ್ಸ್ ಬಂತು. ಗುಳ್ಟು ನವೀನ್ ಜತೆ ಮಾಡುತ್ತಿರುವ ಚಿತ್ರದ ಟೈಟಲ್, ಫಸ್ಟ್ ಲುಕ್ ಸದ್ಯದಲ್ಲೇ ಅನಾವರಣಗೊಳ್ಳಲಿದೆ.

ಚಿತ್ರಗಳಲ್ಲಿ ನಿಮ್ಮ ಪಾತ್ರ ಹೇಗಿದೆ?

ನಮ್ ಗಣಿ ಬಿಕಾಂ ಪಾಸ್ ಚಿತ್ರ ಹೊಸಬರ ತಂಡ. ಅಭಿಷೇಕ್ ಶೆಟ್ಟಿ ಎಂಬುವವರು ಈ ಚಿತ್ರದ ನಿರ್ದೇಶಕ ಹಾಗೂ ಹೀರೋ. ಈ ಹಿಂದೆ ‘ಸೆಕೆಂಡ್ ಹಾಫ್’ ಚಿತ್ರವನ್ನು ನಿರ್ಮಿಸಿದ್ದ ನಾಗೇಶ್ ಈ ಚಿತ್ರದ ನಿರ್ಮಾಪಕರು. ಇಲ್ಲಿ ನಾನು ಎರಡು ರೀತಿಯ ಪಾತ್ರ ಮಾಡಿದ್ದೇನೆ. ಅ ಪೈಕಿ ಹೈಸ್ಕೂಲ್ ಹುಡುಗಿ ಪಾತ್ರವೂ ಇದೆ. ತುಂಬಾ ಹೊಸದಾಗಿದೆ. ಶ್ರೀಧರ್ ನಿರ್ದೇಶಿಸಿ, ನಾನು ಮತ್ತು ಗುಳ್ಟು ನವೀನ್ ನಟಿಸುತ್ತಿರುವ ಚಿತ್ರಕ್ಕೆ ಒಂದು ಶೆಡ್ಯೂಲ್ ಚಿತ್ರೀಕರಣ ಆಗಿದೆ.

ಕ್ರೈಮ್ ಕತೆಯ ಚಿತ್ರ. ಪ್ರಯೋಗಾತ್ಮಕ ಸಿನಿಮಾ. ಇಲ್ಲಿ ನನ್ನ ಪಾತ್ರವೇ ಹೈಲೈಟ್. ಹೀಗಾಗಿ ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಮಹತ್ವ ಇದ್ದು, ಎಲ್ಲ ಪಾತ್ರಗಳ ಫಸ್ಟ್ ಲುಕ್ ಜತೆಗೆ ಟೈಟಲ್‌ಅನ್ನು ಸದ್ಯದಲ್ಲೇ ರಿವಿಲ್ ಮಾಡಲಿದ್ದಾರೆ.

ಎರಡೂ ಚಿತ್ರಗಳ ಪೈಕಿ ಯಾವ ಚಿತ್ರದ ಪಾತ್ರ ನಿಮಗೇ ಹತ್ತಿರವಾಗಿದೆ?

ಎರಡರಲ್ಲೂ ಪಾತ್ರ ಚೆನ್ನಾಗಿದೆ. ಒಂದು ಕಾಲೇಜು, ಹೈಸ್ಕೂಲ್‌ನ ಹುಡುಗಿ. ಆದರೆ, ಕ್ರೈಮ್ ಕತೆಯಲ್ಲಿ ನಾನು ಮಾಡುತ್ತಿರುವ ಪಾತ್ರ ಹೊಸ ಜಾನರ್. 

- ಆರ್. ಕೇಶವಮೂರ್ತಿ