ನಡುವೆ ಅಂತರವಿರಲಿ ಚಿತ್ರ ಪ್ರೇಕ್ಷಕರ ಮನ ಮುಟ್ಟಿದೆ | ನಟಿ ಐಶಾನಿ ಶೆಟ್ಟಿ ರಜೆಯಲ್ಲೇ ಶೂಟಿಂಗ್ ಮುಗಿಸಿದ್ದಾರೆ | ಚಿತ್ರದ ಬಗ್ಗೆ ನಟಿ ಐಶಾನಿ ಶೆಟ್ಟಿ ಕನ್ನಡ ಪ್ರಭದೊಂದಿಗೆ ಮಾತನಾಡಿದ್ದಾರೆ. 

ಬೆಂಗಳೂರು (ಅ. 09): ಐಶಾನಿ ಶೆಟ್ಟಿ ಹಾಗೂ ಪ್ರಖ್ಯಾತ್ ಪರಮೇಶ್ ನಟನೆಯ ‘ನಡುವೆ ಅಂತರವಿರಲಿ’ ಚಿತ್ರ ನಿಧಾನಕ್ಕೆ ಪ್ರೇಕ್ಷಕರನ್ನು ತಲುಪುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್ ಪ್ರತಿಯೊಬ್ಬರಿಗೂ ಕಾಡುತ್ತಿದೆಯಂತೆ. ಇಂಥ ಆಪ್ತ ಚಿತ್ರದಿಂದ ಎರಡು ವರ್ಷಗಳ ನಂತರ ತೆರೆ ಮೇಲೆ ಬಂದಿರುವ ನಟಿ ಐಶಾನಿ ಶೆಟ್ಟಿ ಇಲ್ಲಿ ಮಾತನಾಡಿದ್ದಾರೆ.

ತೆರೆ ಮೇಲೆ ಕಾಣಿಸಿಕೊಂಡು ತುಂಬಾ ವರ್ಷ ಆಯಿತಲ್ಲ?

ಎರಡು ವರ್ಷಗಳ ಮೇಲಾಯಿತು. ನನ್ನ ಓದಿನ ಕಾರಣಕ್ಕೆ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ರಾಕೆಟ್ ಸಿನಿಮಾ ಮಾಡುವಾಗ ಆಗಷ್ಟೆ ಡಿಗ್ರಿ ಮುಗಿಸಿದ್ದೆ. ಆ ನಂತರ ನಾನು ಮಾಸ್ಟರ್ ಡಿಗ್ರಿ ಓದಲೇಬೇಕು ಅಂದುಕೊಂಡೆ. ಓದಿನ ಜತೆಗೆ ಸಿನಿಮಾ ಮಾಡಲಾಗದು ಎಂದುಕೊಂಡು ಎರಡು ವರ್ಷ ನಟನೆಯಿಂದ ದೂರವಾದೆ.

ಹಾಗಾದರೆ ಈಗ ತೆರೆಗೆ ಬಂದಿರುವ ನಡುವೆ ಅಂತರವಿರಲಿ ಮಾಡಿದ್ದು ಯಾವಾಗ?
ಆಗಾಗ ರಜೆ ತೆಗೆದುಕೊಂಡು, ಕಾಲೇಜಿನಲ್ಲಿ ಸಿಗುವ ಹಾಲಿಡೇಗಳನ್ನು ಬಳಸಿಕೊಂಡು ಈ ಸಿನಿಮಾ ಮುಗಿಸಿದೆ. ಸಾಹಸ ಮಾಡಿಯೇ ಚಿತ್ರೀಕರಣ ಮುಗಿಸಿದೆ.

ಈ ಚಿತ್ರಕ್ಕೆ ಅಷ್ಟು ಸಾಹಸ ಮಾಡುವ ಅಗತ್ಯ ಯಾಕಿತ್ತು?

ನಿರ್ದೇಶಕ ರವೀನ್ ಅವರು ಬಂದು ಕತೆ ಹೇಳಿದಾಗ ತುಂಬಾ ಇಷ್ಟವಾಯಿತು. ಓದು ಮುಗಿಸಿಕೊಂಡು ಬರುತ್ತೇನೆ ಎಂದರೆ ಈ ಸಿನಿಮಾ ನನ್ನಿಂದ ಕೈ ತಪ್ಪುವ ಸಾಧ್ಯತೆಗಳಿದ್ದವು. ಒಂದು ಒಳ್ಳೆಯ ಕತೆ ಇರುವ ಚಿತ್ರಕ್ಕೆ ನಾನೇ ನಾಯಕಿ ಆಗಬೇಕು ಅಂದುಕೊಂಡು ಕಷ್ಟವಾದರೂ ಈ ಚಿತ್ರವನ್ನು ಒಪ್ಪಿಕೊಂಡೆ.

ನಿಮ್ಮ ಯಾಕೆ ಈ ಚಿತ್ರದ ಕತೆ ಇಷ್ಟವಾಯಿತು?

ಮೊದಲನೆಯದಾಗಿ ಇಂಥ ಕತೆಗಳು ಈಗಿನ ಜನರೇಷನ್‌ಗೆ ತುಂಬಾ ಅಗತ್ಯವಿದೆ. ಹದಿಹರೆಯದ ವಯಸ್ಸಿಗೆ ಬಂದ ಕೂಡಲೇ, ನಮ್ಮ ಕಾಲ ಮೇಲೆ ನಾವು ಹಾರುತ್ತೇವೆ ಎನ್ನುವ ಭಾವನೆ ಮೂಡುವಷ್ಟರಲ್ಲಿ ಹೆತ್ತವರು ನಮಗೆ ಶತ್ರುಗಳಾಗಿ ಕಾಣುತ್ತಾರೆ. ಅದರಲ್ಲೂ ಪ್ರೀತಿ- ಪ್ರೇಮ ಅಂತ ಓಡಾಡುವವರಿಗೆ ಎಲ್ಲರು ವಿಲನ್‌ಗಳಾಗಿ ಕಾಣುತ್ತಾರೆ.

ಹಾಗೆ ನಮ್ಮಿಂದ ಖಳನಾಯಕರು ಎನಿಸಿಕೊಳ್ಳುವ ಹೆತ್ತವರ ಸಂಕಷ್ಟ ಎಷ್ಟು ಮಂದಿಗೆ ಗೊತ್ತಿದೆ? ನಾವೇ ಹೋಗುವ ದಾರಿ ಎಷ್ಟರ ಮಟ್ಟಿಗೆ ಸೂಕ್ತವಾಗಿರುತ್ತದೆ ಎನ್ನುವ ವಿಚಾರಗಳನ್ನು ತುಂಬಾ ಸರಳವಾಗಿ ಈ ಚಿತ್ರದಲ್ಲಿ ಅಡಕವಾಗಿದ್ದವು. ಅದೇ ನನ್ನ ಈ ಚಿತ್ರದಲ್ಲಿ ನಟಿಸುವುದಕ್ಕೆ ಸ್ಫೂರ್ತಿ ಕೊಟ್ಟು ಇಷ್ಟವಾಗುವಂತೆ ಮಾಡಿದ್ದು.

ಈ ಚಿತ್ರ ನೋಡಿದವರು ಏನನ್ನುತ್ತಿದ್ದಾರೆ?

ನಾನು ಎರಡು ವರ್ಷಗಳ ನಂತರ ತೆರೆ ಮೇಲೆ ಬಂದಿದ್ದೇನೆ. ತುಂಬಾ ಮುದ್ದಾಗಿ ಕಾಣುತ್ತಿದ್ದೇನೆ. ನಟನೆಯಲ್ಲಿ ಹೊಸತನ ಕಾಣುತ್ತಿದ್ದೇನೆ ಎನ್ನುತ್ತಿದ್ದಾರೆ. ಜತೆಗೆ ನನಗೆ ಒಪ್ಪುವಂತಹ ಪಾತ್ರ ಇದಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ನೋಡಿ ತುಂಬಾ ಮಂದಿ ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಿಶೇಷ ಅಂದರೆ ರಾಜಕೀಯ ಮುಖಂಡರಾದ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಪ್ರೇಕ್ಷಕರ ಜತೆ ಕೂತು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಮುಂದೆ ಸಿನಿಮಾ ಮಾಡುತ್ತೀರಾ ಅಥವಾ ಎಜುಕೇಷನ್ ಮುಂದುವರಿಸುತ್ತೀರಾ?

ಪರೀಕ್ಷೆ ಮುಗಿಸಿದ್ದೇನೆ. ಇನ್ನೇನಿದ್ದರೂ ನನ್ನ ಗಮನ ಸಿನಿಮಾ ಕಡೆ. ಪರೀಕ್ಷೆ ಮುಗಿಸಿಕೊಂಡು ನಡುವೆ ಅಂತರವಿರಲಿ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ಇದೊಂದು ರೀತಿಯಲ್ಲಿ ನನ್ನ ರೀ ಎಂಟ್ರಿ ಎನ್ನುವಂತೆ ಎಲ್ಲರಿಂದಲೂ ಮೆಚ್ಚುಗೆ ಗಳಿಸುತ್ತಿದೆ. ಜತೆಗೆ ಈ ಸಿನಿಮಾದಿಂದ ನನಗೆ ಮತ್ತೆ ಅವಕಾಶಗಳು ಬರುತ್ತಿದೆ. ನಾನು ಕೇಳಿದ ಕತೆಗಳಲ್ಲಿ ಎರಡು ತುಂಬಾ ಚೆನ್ನಾಗಿವೆ. ಅದರ ಅಧಿಕೃತ ಘೋಷಣೆ ಸದ್ಯದಲ್ಲೇ ಮಾಡಲಾಗುವುದು.

ಈಗ ನೀವು ಯಾರ ರೀತಿಯ ಕತೆಗಳನ್ನು ಎದುರು ನೋಡುತ್ತಿದ್ದೀರಿ?
ನನ್ನ ಪಾತ್ರ, ಕತೆ ಮತ್ತು ಚಿತ್ರತಂಡ ಇವಿಷ್ಟನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತೇನೆ. ಭಿನ್ನವಾಗಿರುವ ವಿಭಿನ್ನ ಪಾತ್ರಗಳು, ಕತೆಯಲ್ಲಿ ನನ್ನ ಪಾತ್ರಕ್ಕೆ ಮಹತ್ವ ಇರುವಂತಹ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತೇನೆ.

-ಆರ್. ಕೇಶವಮೂರ್ತಿ