ಶರಣ್ ಹಾಗೂ ರಾಗಿಣಿ ಜತೆಯಾಗಿ ನಟಿಸುತ್ತಿರುವ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಹೆಸರು ‘ಅಧ್ಯಕ್ಷ ಇನ್ ಅಮೆರಿಕ’. ಇದರ ಮುಕ್ಕಾಲು ಭಾಗದ ಚಿತ್ರೀಕರಣ ಅಮೆರಿಕದಲ್ಲೇ ನಡೆದಿದೆ. ಇನ್ನುಳಿದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಇದುವರೆಗೆ ಈ ಚಿತ್ರದ ಕುರಿತಾಗಿ ಯಾವುದೇ ಸುದ್ದಿಯನ್ನುಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ.

ಇದೊಂದು ಪಕ್ಕಾ ಕಾಮಿಡಿ ಚಿತ್ರ. ಪುಂಡ ಹುಡುಗನಿಗೆ ಅಮೆರಿಕಾ ನೋಡಬೇಕು ಅನ್ನುವುದು ಕನಸು. ತಾನಂದುಕೊಂಡಂತೆಯೇ ಅವನು ಅಮೆರಿಕಾಗೆ ಹೋಗುತ್ತಾನೆ. ಅಲ್ಲಿ ಏನಾಗುತ್ತದೆ ಅನ್ನುವುದೇ ಕಥಾ ಹಂದರ.

ಸಂಭಾಷಣೆಕಾರ ಯೋಗ ಆತ್ಮಾನಂದ ಈ ಚಿತ್ರದ ನಿರ್ದೇಶಕ. ಅವರಿಗಿದು ಮೊದಲ ಸಿನಿಮಾ. ಪೀಪಲ್ಸ್ ಟೆಕ್ ಎನ್ನುವ ಸಂಸ್ಥೆ ಚಿತ್ರ ನಿರ್ಮಾಣವಾಗುತ್ತಿದ್ದು, ಅಮೆರಿಕದ ಸಿಯಾಟಲ್‌ನಲ್ಲಿ ಚಿತ್ರೀಕರಣಗೊಂಡಿದೆ. ‘ವಿಕ್ಟರಿ 2’ ಚಿತ್ರದ ಚಿತ್ರೀಕರಣ ಬ್ಯುಸಿ ಶೆಡ್ಯೂಲ್ ನಡುವೆಯೇ ಶರಣ್ ಅಮೆರಿಕಕ್ಕೆ ಹಾರಿದ್ದಕ್ಕೆ ಈ ಚಿತ್ರದ ಚಿತ್ರೀಕರಣವೇ ಕಾರಣವಾಗಿತ್ತು. ಹಾಗಾಗಿ ಸೈಲೆಂಟ್ ಆಗಿಯೇ ಚಿತ್ರೀಕರಣಕ್ಕೆ ಅಮೆರಿಕಕ್ಕೆ ಹಾರಿದ್ದ ಚಿತ್ರತಂಡ ಅಲ್ಲಿಯೇ ಮುಕ್ಕಾಲು ಭಾಗದ ಚಿತ್ರೀಕರಣ ಮುಗಿಸಿಕೊಂಡು ಬಂದು, ಬಾಕಿಯಿರುವ ಚಿತ್ರೀಕರಣವನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಡೆಸುತ್ತಿದೆ.

ಈ ಕುರಿತು ಶರಣ್ ಹೇಳಿದ್ದು

* ಕಾಮಿಡಿ ನನ್ನ ಟ್ರಂಪ್ ಕಾರ್ಡ್. ಆ ಗೆರೆ ದಾಟಲು ನನ್ನಿಂದ ಸಾಧ್ಯವೇ ಇಲ್ಲ. ಹಾಸ್ಯ ಕಲಾವಿದ ಎನ್ನುವ ಕಾರಣಕ್ಕಾಗಿಯೇ ಪ್ರೇಕ್ಷಕರು ನನ್ನ ಸಿನಿಮಾ ನೋಡುತ್ತಾರೆ. ಅದೇ ಜಾನರ್‌ನ ಮತ್ತೊಂದು ಸಿನಿಮಾವಿದು. ವಿಶಿಷ್ಟ ಕತೆ ಮತ್ತು ಚಿತ್ರಕತೆಯ ಸಿನಿಮಾ. ನಮಗೆಲ್ಲಾ ಅಮೆರಿಕ ಒಂದು ಸೋಜಿಗದ ದೇಶ. ಅಲ್ಲಿಗೆ ಹೋಗಬೇಕೆನ್ನುವುದು ಪ್ರತಿಯೊಬ್ಬರ ಆಸೆ. ಹಾಗೆಯೇ ಈ ಚಿತ್ರದ ಕಥಾ ನಾಯಕನಿಗೂ ಅಮೆರಿಕದ ಹುಚ್ಚು. ತಾನಂದುಕೊಂಡಂತೆ ಕೊನೆಗೂ ಆತ ಅಮೆರಿಕಕ್ಕೆ ಹೋಗುತ್ತಾನೆ.

* ರಾಗಿಣಿ ಜತೆಗೆ ಇದೇ ಮೊದಲು ಅಭಿನಯಿಸುತ್ತಿರುವುದು. ಅವರು ನನ್ನ ಸ್ಟಾರ್ ಗಿರಿ ಪ್ರಶ್ನೆ ಮಾಡದೇ ಅಭಿನಯಿಸಲು ಒಪ್ಪಿಕೊಂಡಿದ್ದು ಖುಷಿ ಕೊಟ್ಟಿತು. ಯಾಕಂದ್ರೆ ಶರಣ್ ಸಿನಿಮಾ ಅಂದ್ರೆ ನಾಯಕಿ ಆಗಿ ಬರಲು ಹಿಂದೆ ಮುಂದೆ ನೋಡುವ ನಾಯಕಿಯರು ಇಲ್ಲೂ ಇದ್ದಾರೆ. ಅಂತಹ ಅನುಭವ ಆಗಿದೆ. ಪಾತ್ರಗಳಿಗೆ ತಕ್ಕಂತೆ ಇಬ್ಬರ ಕಾಂಬಿನೇಷನ್ ಚೆನ್ನಾಗಿದೆ.

* ಪಾತ್ರಗಳಿಗೆ ತಕ್ಕಂತೆ ಅಭಿನಯಿಸುವ ಕಲಾವಿದನ ನಾನು. ಹೊಸ ಬಗೆಯ ಪಾತ್ರ ಬೇಕು ಅಂತ ನಿರೀಕ್ಷೆ ಮಾಡುತ್ತೇನೆ. ಅದೃಷ್ಟ ಎನ್ನುವ ಹಾಗೆ ಅಂತಹ ಪಾತ್ರಗಳೇ ಬರುತ್ತಿವೆ.

ರಾಗಿಣಿ ನನ್ನ ಸ್ಟಾರ್‌ಗಿರಿ ಪ್ರಶ್ನೆ ಮಾಡದೇ ಅಭಿನಯಿಸಲು ಒಪ್ಪಿಕೊಂಡಿದ್ದು ಖುಷಿ ಕೊಟ್ಟಿತು. ಶರಣ್ ಸಿನಿಮಾ ಅಂದ್ರೆ ನಾಯಕಿ ಆಗಲು ಹಿಂದೆ ಮುಂದೆ ನೋಡುವ ನಾಯಕಿಯರು ಇಲ್ಲೂ ಇದ್ದಾರೆ. ಅಂತಹ ಅನುಭವ ಆಗಿದೆ- ಶರಣ್