ಅವರು ನೀಲ್ ನಿತಿನ್ ಮುಖೇಶ್ ಅಭಿನಯದ ‘ಬೈಪಾಸ್ ರೋಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎರಡು ದಿನಗಳ ಚಿತ್ರೀಕರಣ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಹಿಂದಿರುಗಿದ್ದಾರೆ. ನಮನ್ ನಿತೀಶ್ ನಿರ್ದೇಶನ ಈ ಚಿತ್ರ ಮಲ್ಟಿಸ್ಟಾರರ್ ಚಿತ್ರ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್. ನೀಲ್ ನಿತೀಶ್ ಜತೆಗೆ ರಜತ್ ಕಪೂರ್ ಹಾಗೂ ಆದಾ ಶರ್ಮ ಸೇರಿ ಹಲವು ಜನಪ್ರಿಯ ನಟ-ನಟಿಯರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿರುವ ಭಾವನಾ
ರಾವ್, ನಾಯಕ ನೀಲ್ ನಿತೀಶ್ ಜೋಡಿ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

‘ಮ್ಯಾನೇಜರ್ ಮೂಲಕ ಈ ಚಿತ್ರದ ಸಂಪರ್ಕ ಸಿಕ್ಕಿತು. ನಿರ್ದೇಶಕ ನಮನ್ ನಿತೀಶ್ ಒಮ್ಮೆ ಆಡಿಷನ್‌ಗೂ ಬಂದು ಹೋಗುವಂತೆ ಹೇಳಿದ್ದರು. ಅಂತೆಯೇ ಮುಂಬೈಗೂ ಹೋಗಿ ಆಡಿಷನ್ ಮುಗಿಸಿಕೊಂಡು ಬಂದಿದ್ದೆ. ಆನಂತರ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಬಂತು. ಮತ್ತೆ ಮುಂಬೈಗೆ ಹೋಗಿ, ನನ್ನ ಪಾತ್ರದ ಬಗ್ಗೆ ಕೇಳಿದೆ. ಫ್ಯಾಷನ್ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗಿ. ತುಂಬಾ ಮಾಡರ್ನ್. ಹಾಗೆಯೇ ಅದಕ್ಕೆ ಸ್ವಲ್ಪ ಗ್ರೇ ಶೇಡ್ ಕೂಡ ಇದೆ. ಇಂಟರೆಸ್ಟಿಂಗ್ ಅಂತೆನಿಸಿತು. ನಿರ್ದೇಶಕರು ಪಾತ್ರದ ಡೀಟೈಲ್ಸ್ ಹೇಳುತ್ತಿದ್ದಂತೆ ಓಕೆ ಅಂದೆ. ಆ ಪ್ರಕಾರ ಈಗ ಎರಡು ದಿನಗಳ ಕಾಲದ ಚಿತ್ರೀಕರಣದಲ್ಲೂ ಭಾಗವಹಿಸಿ ಬಂದಿದ್ದೇನೆ. ಎರಡನೇ ಹಂತದ ಚಿತ್ರೀಕರಣ ಜನವರಿ 20 ರಿಂದ ಶುರುವಾಗಲಿದೆ’ ಎನ್ನುತ್ತಾರೆ ನಟಿ ಭಾವನಾ.


ಕನ್ನಡದ ಜತೆಗೆ ಮೂರು ತಮಿಳು ಚಿತ್ರಗಳಲ್ಲೂ ಅಭಿನಯಿಸಿರುವ ಭಾವನಾ ರಾವ್, ಈಗ ಬಾಲಿವುಡ್‌ಗೂ ಕಾಲಿಟ್ಟು ಕುತೂಹಲ ಮೂಡಿಸಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಜೋಗಿ ಪ್ರೇಮ್ ಅಭಿನಯದ ‘ಗಾಂಧಿಗಿರಿ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಂಕ್ರಾಂತಿ ಹೊತ್ತಿಗೆ ಮತ್ತೊಂದು ಹೊಸ ಸಿನಿಮಾವೂ ಅನೌನ್ಸ್ ಆಗಲಿದೆ ಎನ್ನುತ್ತಾರೆ.