ಈ ವಿಲನ್ ಲವರ್‌ಬಾಯ್ ಆಗಿದ್ದನ್ನು ನೀವೂ ನೋಡಿದ್ದೀರಿ. ‘ದುನಿಯಾ’ದ ಲೂಸ್‌ಮಾದ ಯೋಗಿ ಸಾಕಷ್ಟು ಚಿತ್ರಗಳಲ್ಲಿ ‘ಜಿಂಕೆ ಮರಿ’ಗಳ ಹಿಂದೆ ಓಡಿದ್ದಾರೆ. ಹೀರೋಯಿನ್‌ಗಳೂ ನಾಯಕ ಯೋಗಿಯನ್ನು ಮೆಚ್ಚಿ ಪ್ರಪೋಸ್ ಮಾಡಿದ್ದಾರೆ. ಇವೆಲ್ಲ ಸಿನಿಮಾಗಳಲ್ಲಾಯಿತು. ಈಗ ನಿಜ ಬದುಕಿನಲ್ಲೇ ಯೋಗಿಗೆ ಲವ್ವಾಗಿದೆ! ಲೂಸ್‌ಮಾದನ ಮನಸ್ಸು ಕದ್ದಿದ್ದು ಒಬ್ಬಳು ಸಾಫ್ಟ್ ವೇರ್ ಚೆಂದುಳ್ಳಿ!

ಸಾಮಾನ್ಯವಾಗಿ ಸ್ಯಾಂಡಲ್‌ವುಡ್ ಮಂದಿ ‘ನಾವು ಪ್ರೀತಿಸುತ್ತಿದ್ದೇವೆ’ ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವುದೇ ಬಹಳ ಕಡಿಮೆ. ಆ ಧೈರ್ಯಗಳೆಲ್ಲ ಬಾಲಿವುಡ್‌ಗೆ ಸೀಮಿತವೇನೋ ಎಂದುಕೊಂಡಿದ್ದ ನಮಗೆ ಯೋಗೀಶ್ ವಿಶಿಷ್ಟವಾಗಿ ಇಷ್ಟವಾಗ್ತಿದ್ದಾರೆ. ಇತ್ತೀಚೆಗಷ್ಟೇ ಬಹುದಿನಗಳ ಪ್ರೀತಿಯ ಮೂಲಕ ಯಶ್- ರಾಕಾ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಅದೇ ಅನುರಾಗದ ಹಾದಿಯಲ್ಲಿಯೇ ಯೋಗೀಶ್ ಸಾಗಿದ್ದಾರೆ.

ಅಂದಹಾಗೆ, ಯೋಗೀಶ್ ಪ್ರೀತಿಸುತ್ತಿರುವ ಚೆಲುವೆಯ ಹೆಸರು ಸಾಹಿತ್ಯ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಗಿ, ‘ಯೆಸ್, ನಾನೀಗ ಪ್ರೀತಿಯಲ್ಲಿದ್ದೇನೆ. ಕಳೆದೆರಡು ವರ್ಷದಿಂದ ಸಾಹಿತ್ಯಳ ಜತೆಗೆ ಪ್ರೀತಿ ಶುರುವಾಗಿದೆ. ಹಾಗಂತ ನಾವೇನೂ ಅಪರಿಚಿತರಲ್ಲ. 13 ವರ್ಷಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಬಲ್ಲವರಾಗಿದ್ದೇವೆ. ಸಾಹಿತ್ಯ ಸಿನಿಮಾ ಜಗತ್ತಿನಲ್ಲಿ ಇದ್ದವರಲ್ಲ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ’ ಎಂದು ಸಂಗಾತಿಯನ್ನು ಪರಿಚಯಿಸುತ್ತಾರೆ ಯೋಗಿ.

ಇವರಿಬ್ಬರ ಪ್ರೀತಿಗೆ ಯೋಗಿಯ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿದೆಯಂತೆ. ಅವರ ತಾಯಿ ಸಾಹಿತ್ಯ ಅವರನ್ನು ಮಗಳಂತೆ ಕಾಣುತ್ತಾರಂತೆ. ಮದುವೆ ವಿಚಾರ ಮಾತ್ರ ಇನ್ನೂ ಫೈನಲ್ ಆಗಿಲ್ಲ. ಸದ್ಯಕ್ಕೆ ಯೋಗೀಶ್ ಸಹೋದರ ಮಹೇಶ್ ಅವರ ವಿವಾಹ ನಿಶ್ಚಯವಾಗಿದೆ. ಮುಂದಿನ ತಿಂಗಳು ಹಸೆಮಣೆ ಏರುತ್ತಿದ್ದಾರೆ. ಆ ನಂತರವೇ ಯೋಗೀಶ್ ಮದುವೆ ಎನ್ನಲಾಗುತ್ತಿದೆ.