ಉದಯ್‌ ಪ್ರಕಾಶ್‌ ನಿರ್ದೇಶನದ ‘ವರದ’ ಚಿತ್ರದ ಚಿತ್ರೀಕರಣದ ವೇಳೆ ನಟ ವಿನೋದ್‌ ಪ್ರಭಾಕರ್‌ ಗಾಯಗೊಂಡಿದ್ದಾರೆ. 

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ‘ವರದ’ ಚಿತ್ರಕ್ಕೆ ಆ್ಯಕ್ಷನ್‌ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾಗ ವಿನೋದ್‌ ಅವರಿಗೆ ಎಡಗಾಲಿಗೆ ಸಣ್ಣ ಪ್ರಮಾಣದ ಏಟು ಬಿದ್ದಿದೆ. ತಕ್ಷಣವೇ ಅವರು ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದಿದ್ದಾರೆಂದು ಚಿತ್ರತಂಡ ಹೇಳಿದೆ.

‘ಚಿತ್ರದ ಫೈಟ್‌ ಸೀನ್‌ ಶೂಟಿಂಗ್‌. ನಾಯಕ ನಟ ವಿನೋದ್‌ ಅವರು ಸ್ವಲ್ಪ ದೂರದಿಂದ ಓಡಿ ಬಂದು ಜಂಪ್‌ ಮಾಡಬೇಕಿತ್ತು. ಅಂತೆಯೇ ಆ್ಯಕ್ಷನ್‌ ಹೇಳಿದಾಗ ಓಡಿ ಬಂದ ಅವರು, ಜಂಪ್‌ ಮಾಡಿದರು. ಕೆಳಗೆ ಕಾಲು ಊರುವಾಗ ಎಡಗಾಲು ಟ್ವಿಸ್ಟ್‌ ಆಗಿ ಬಿದ್ದರು.ಅದೃಷ್ಟವಶಾತ್‌ ಹೆಚ್ಚಿನ ಅನಾಹುತ ಆಗಲಿಲ್ಲ. ಕಾಲಿನ ಪಾದದ ಬಳಿ ಏಟು ಬಿದ್ದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಲಾಯಿತು. ಆ ನಂತರ ಎಂದಿನಂತೆ ಚಿತ್ರೀಕರಣ ಶುರುವಾಗಿದೆ’ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ. ‘ಆಟೋರಾಜ’ ಚಿತ್ರದ ನಂತರ ನಿರ್ದೇಶಕ ಉದಯ್‌ ಪ್ರಕಾಶ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರವೇ ‘ವರದ’. ಈಗಾಗಲೇ ಚಿತ್ರಕ್ಕೆ ಅರ್ಧದಷ್ಟುಚಿತ್ರೀಕರಣ ಆಗಿದೆ. ಈಗ ಆ್ಯಕ್ಷನ್‌ ಸನ್ನಿವೇಶಗಳನ್ನು ಮಾಗಡಿ ರಸ್ತೆಯಲ್ಲಿ ಸೆರೆ ಹಿಡಿಯುತ್ತಿದೆ.