ಅಲ್ಲಿ ಸೇರಿದ್ದ ಸಾವಿರಾರು ಸಂಖ್ಯೆ ಅಭಿಮಾನಿಗಳು, ಸಭಿಕರು, ಕಲಾರಸಿಕರ ಮುಂದೆ ತಮ್ಮ ಹೊಸ ಹಾದಿಯ ಭವಿಷ್ಯದ ಕನಸನ್ನು ಹೀಗೆ ಬಿಚ್ಚಿಟ್ಟು, ಭಾರೀ ಕರತಾಡನ, ಸಿಳ್ಳೆ, ಕೇಕೆ, ಜೈಕಾರ ಗಿಟ್ಟಿಸಿಕೊಂಡಿದ್ದು ನಟ ಉಪೇಂದ್ರ. ಅದು ‘ ಐ ಲವ್‌ ಯು’ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಸಂದರ್ಭ. ಭಾನುವಾರ ಈ ಚಿತ್ರದ ಆಡಿಯೋ ಬಿಡುಗಡೆಯ ಅದ್ಧೂರಿ ಸಮಾರಂಭ ದಾವಣಗೆರೆ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ನಡೆಯಿತು.

ಚಿತ್ರದ ನಾಯಕ ಉಪೇಂದ್ರ, ನಾಯಕಿಯರಾದ ರಚಿತಾ ರಾಮ್‌, ಸೋನು ಗೌಡ ಸೇರಿದಂತೆ ಹಲವು ಕಲಾವಿದರು ಆಗಮಿಸಿದ್ದರು. ಸಮಾರಂಭಕ್ಕೆ ಜನ ಸಾಗರವೇ ಹರಿದು ಬಂದಿತ್ತು. ಆಡಿಯೋ ಲಾಂಚ್‌ಗೂ ಮುನ್ನ, ‘ ಐ ಲವ್‌ ಯು’ ಚಿತ್ರದಲ್ಲಿನ ಒಂದಾನೊಂದು ಕಾಲದಲ್ಲಿ...ಎನ್ನುವ ಹಾಡಿಗೆ ಹೆಜ್ಜೆ ಹಾಕುವ ಮೂಲಕ ವೇದಿಕೆಗೆ ಬಂದರು ಉಪೇಂದ್ರ. ಮಾತಿಗೆ ನಿಂತ ಉಪೇಂದ್ರ, ಬೆಣ್ಣೆಯಂತಹ ಮನಸ್ಸಿನ ದಾವಣೆಗೆರೆಯ ಕಲಾರಸಿಕರೇ.....ಎಂದಿದ್ದು ಮತ್ತಷ್ಟುಸಿಳ್ಳೆ, ಕೇಕೆಗೆ ಉತ್ತೇಜನ ನೀಡಿತು.

ಉಪೇಂದ್ರ ಹೇಳಿದ್ದು

  • ಸಿನಿಮಾ ನನ್ನ ದಾರಿ, ಪ್ರಜಾಕೀಯ ನನ್ನ ಗುರಿ.
  • ದಾವಣಗೆರೆ ನನಗೆ ಅದೃಷ್ಟದ ಊರು. ‘ಎ’ ಚಿತ್ರದ ಶತದಿನೋತ್ಸವ ಕಾರ್ಯಕ್ರಮ ನಡೆದಿದ್ದೇ ಇಲ್ಲಿ. ಅವತ್ತು ಕೂಡ ಜನಸಾಗರವೇ ಇಲ್ಲಿ ಸೇರಿತು. ಆ ಸೆಂಟಿಮೆಂಟ್‌ ದಾವಣಗೆರೆಯನ್ನು ನನಗೆ ಆಗಾಗ ನೆನೆಪಿಸುತ್ತಲೇ ಇರುತ್ತದೆ.
  • ನಾನು ಸಿನಿಮಾಕ್ಕೆ ಬಂದಿದ್ದೇ, ಜನರಿಗೆ ಏನಾದ್ರೂ ಕೊಡ್ಬೇಕು ಅಂತ. ಕೊಡಲು ಹೊರಡುವ ಮುನ್ನ ನೇಮ್‌ ಆ್ಯಂಡ್‌ ಫೇಮ್‌ ಬೇಕಾಗುತ್ತದೆ. ಫೇಮ್‌ ಇದ್ದಾಗಲೇ ಜನ ನಾಲ್ಕು ಮಾತು ಕೇಳ್ತಾರೆ. ಇವತ್ತು ಆ ಹಂತಕ್ಕೆ ಬಂದಿದ್ದೇನೆ. ಅದೆಲ್ಲವೂ ಜನರಿಂದಲೇ ಸಿಕ್ಕ ಆಶೀರ್ವಾದ. ಆ ಋುಣ ತೀರಿಸುವುದಕ್ಕಾಗಿಯೇ ಈಗ ಪ್ರಜಾಕೀಯ ಶುರು ಮಾಡಿದ್ದೇನೆ. ಅದು ಪ್ರಜೆಗಳ ಪಕ್ಷ. ಅದನ್ನು ಪ್ರೋತ್ಸಾಹಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜ್ಞಾವಂತರ ಪ್ರಜೆಗಳದ್ದು.
  • ಎರಡು ವರ್ಷದ ನಂತರ ಮತ್ತೆ ತೆರೆ ಮೇಲೆ ಬರುತ್ತಿದ್ದೇನೆ. ನಿರ್ದೇಶಕ ಚಂದ್ರು ಜತೆಗೆ ಎರಡನೇ ಸಿನಿಮಾ. ಚಂದ್ರು ಹೊಸ ಬಗೆಯಲ್ಲಿ ಈ ಸಿನಿಮಾ ಮಾಡಿದ್ದಾರೆ. ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು.

ಉಪ್ಪಿ ಚಿತ್ರಕ್ಕೆ ರವಿಚಂದ್ರನ್‌ ಸಂಗೀತ

ಆರ್‌. ಚಂದ್ರು ನಿರ್ದೇಶನ ಹಾಗೂ ಉಪೇಂದ್ರ ಅಭಿನಯದ ಐ ಲವ್‌ ಯು ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಸದ್ಯಕ್ಕೆ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಇನ್ನು ಮೂರು ಹಾಡುಗಳು ಫೆ.18 ರಂದು ಮಂಡ್ಯದಲ್ಲಿ ಲಾಂಚ್‌ ಆಗುತ್ತಿವೆ. ಚಿತ್ರದ ಇಷ್ಟುಹಾಡುಗಳ ಪೈಕಿ ಐದು ಹಾಡುಗಳಿಗೆ ಡಾ. ಕಿರಣ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಳಿದ ಒಂದು ಹಾಡಿಗೆ ಸಂಗೀತ ಸ್ಪರ್ಶ ನೀಡಿದ್ದು ರವಿಚಂದ್ರನ್‌. ಹಾಡಿನ ಸಾಹಿತ್ಯ ಕೇಳಿದವರು, ತಾವೇ ಸಂಗೀತ ನೀಡುವುದಾಗಿ ಡಿಸೈಡ್‌ ಮಾಡಿದರಂತೆ. ಆ ಮೂಲಕ ಉಪ್ಪಿ ಸಿನಿಮಾಕ್ಕೊಂದು ಕೊಡುಗೆ ನೀಡುವುದು ಕ್ರೇಜಿಸ್ಟಾರ್‌ ಉದ್ದೇಶವಾಗಿತ್ತು. ಈಗ ಆ ಹಾಡು ಬಿಡುಗಡೆಯಾದರೆ, ದೊಡ್ಡ ಹವಾ ಸೃಷ್ಟಿಸುತ್ತೆ ಎನ್ನುವ ವಿಶ್ವಾಸ ನಿರ್ದೇಶಕ ಆರ್‌. ಚಂದ್ರು ಅವರದ್ದು.