ಆರಂಭದಲ್ಲಿ ಬೇರೆಯದ್ದೇ ರೀತಿಯಲ್ಲಿ ಸೌಂಡ್ ಮಾಡಿದ್ದ ಐ ಲವ್ ಯೂ ಚಿತ್ರದ ಮೂಲಕವಂತೂ ಫ್ಯಾಮಿಲಿ ಆಡಿಯನ್ಸ್ ಮತ್ತು ಆರ್ ಚಂದ್ರು ಅವರ ನಡುವಿನ ಬಂಧ ಮತ್ತಷ್ಟು ಆಪ್ತವಾಗಿದೆ.

ಐ ಲವ್ ಯೂ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಒಟ್ಟಾಗಿರೋ ಎರಡನೇ ಚಿತ್ರ. ಈ ಜೋಡಿಯ ಎರಡನೇ ಪ್ರಯತ್ನ ಎಂಥಾ ಕಮಾಲ್ ಸೃಷ್ಟಿಸಲಿದೆ ಎಂಬ ಕುತೂಹಲ ಚಿತ್ರರಂಗದಲ್ಲಿಯೇ ಇತ್ತು. ಆದರೀಗ ಈ ಜೋಡಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೈಲಿಗಲ್ಲಾಗುವ ರೀತಿ ದಾಖಲೆಗೆ ರೂವಾರಿಯಾಗಿದೆ.

ಐ ಲವ್ ಯೂ ಚಿತ್ರದ ಕಲೆಕ್ಷನ್ ಮುಟ್ಟಿತು 22 ಕೋಟಿ

ಉಪ್ಪಿ ವೃತ್ತಿ ಬದುಕಿನ ಈ ವರೆಗಿನ ಅಷ್ಟೂ ದಾಖಲೆಗಳನ್ನು ಬ್ರೇಕ್ ಮಾಡುವಂಥ ಕಲೆಕ್ಷನ್‍ನೊಂದಿಗೆ ಚಂದ್ರು ಬತ್ತಳಿಕೆಯ ಅಪರೂಪದ ಚಿತ್ರವಾಗಿ ಐ ಲವ್ ಯೂ ಸಾಗಿದೆ.

ಯಶಸ್ಸಿಗೆ ಕಾರಣವಾಗಿರೋದು ಕಥೆಯ ಸೊಗಸು ಮತ್ತು ನಿರೂಪಣೆಯ ಕುಸುರಿ. ಆರ್ ಚಂದ್ರು ಅವರಿಲ್ಲಿ ಪ್ರೀತಿ ಪ್ರೇಮ ಮತ್ತು ಮೋಹಗಳ ಕಥೆಯನ್ನು ಇದೀಗ ಸವಕಲಾಗುತ್ತಿರೋ ಸಂಬಂಧಗಳೊಂದಿಗೆ ನಾಜೂಕಿನಿಂದಲೇ ಬೆಸೆದಿದ್ದಾರೆ. ಎಲ್ಲ ಸಂಬಂಧಗಳೂ ಯಾಂತ್ರಿಕವಾಗಿರೋ ಈ ಕಾಲ ಮಾನದಲ್ಲಿ ಅದರ ಮಹತ್ವವೇನೆಂಬುದನ್ನು ಐ ಲವ್ ಯೂ ಮೂಲಕವೇ ಅವರು ಸಾರಿದ್ದಾರೆ.

ನೂರನೇ ದಿನದತ್ತ ಐ ಲವ್ ಯೂ ಯಾನ

ಪ್ರತಿಯೊಬ್ಬರಿಗೂ ನಾಟುವಂಥಾ ಪರಿಣಾಮಕಾರಿ ಸಂದೇಶವನ್ನೂ ಕೊಟ್ಟಿದ್ದಾರೆ. ಭರ್ಜರಿ ಎಂಟರ್ ಟೈನ್ಮೆಂಟ್ ಜೊತೆ ಬದುಕಿನ ವಾಸ್ತವದ ಮುಖಾಮುಖಿ ಮತ್ತು ಎಲ್ಲರ ಬದುಕಿಗೂ ಹತ್ತಿರವಾದ ಕಥಾ ಹಂದರದೊಂದಿಗೆ ಐ ಲವ್ ಯೂ ಚಿತ್ರ ಪ್ರೇಕ್ಷಕರ ಮನ ಸೋಕಿದೆ. ಆದ್ದರಿಂದಲೇ ಯುವ ಸಮೂಹದ ಜೊತೆಗೇ ಎಲ್ಲ ವರ್ಗದ ಪ್ರೇಕ್ಷಕರೂ ಐ ಲವ್ ಯೂ ಮೇಲೆ ಮೋಹಿತರಾಗಿದ್ದಾರೆ.

ಫ್ಯಾಮಿಲಿ ಪ್ರೇಕ್ಷಕರ ದಂಡೇ ರಾಜ್ಯಾದ್ಯಂತ ಥೇಟರಿನತ್ತ ಹರಿದು ಬರುತ್ತಿದೆ. ಇದುವೇ ಐ ಲವ್ ಯೂ ಚಿತ್ರದ ಯಶಸ್ಸಿನ ನಾಗಾಲೋಟಕ್ಕೆ ಹೊಸ ಕಸುವು ತುಂಬಿದೆ.