ಮೈಸೂರಿನಲ್ಲಿ ನಡೆದ ಕವಚ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನನ್ನ ಇಷ್ಟುವರ್ಷದ ಸಿನಿಮಾ ಜರ್ನಿಯಲ್ಲಿ ನಾನು ಅಲ್ಟಿಮೇಟ್‌ ಎನಿಸಿಲ್ಲ. ನಿರಂತರವಾಗಿ ಕಲಿಯುತ್ತಿದ್ದೇನೆ. ಅನೇಕ ಬಾರಿ ಸಿನಿಮಾದ ವಿಮರ್ಶೆಗಳನ್ನು ನೋಡಿ ಕಲಿತದ್ದು ಇದೆ. ಕವಚ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸಿರುವ ಮೀನಾಕ್ಷಿ ಎಂಬ ಪುಟ್ಟಬಾಲಕಿಯ ಸಹಜ ಅಭಿನಯ ನೋಡಿ ನಾನು ಕಲಿತಿದ್ದೇನೆ. ಸಿನಿಮಾದಲ್ಲಿ ಎಲ್ಲರೂ ಡಾ. ರಾಜಕುಮಾರ್‌, ಅಮಿತಾಬ್‌ ಬಚ್ಚನ್‌, ರಜನಿಕಾಂತ್‌ ಆಗಲು ಸಾಧ್ಯವಿಲ್ಲ. ಕವಚದಲ್ಲಿ ನನ್ನದು ಕುರುಡನ ಪಾತ್ರ. ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದೆ. ಎರಡು ಮೂರು ದಿನ ಅಂಧ ಶಿಕ್ಷಕರೊಬ್ಬರು ಬಂದು ನನಗೆ ಸ್ಟಿಕ್‌ ಹೇಗೆ ಹಿಡಿದುಕೊಳ್ಳಬೇಕು, ಕಣ್ಣನ್ನು ಹೇಗೆ ಆಡಿಸಬೇಕು ಎಂಬುದನ್ನು ಹೇಳಿಕೊಟ್ಟರು. ಈ ತಯಾರಿ ವೇಳೆ ತಲೆ ನೋವು ಕೂಡ ಬಂತು’ ಎಂಬುದಾಗಿ ಶಿವರಾಜ್‌ಕುಮಾರ್‌ ತಮ್ಮ ಅನುಭವ ಹಂಚಿಕೊಂಡರು.

‘ಮಲಯಾಳಂನ ಒಪ್ಪಂ ಚಿತ್ರದಲ್ಲಿ ಮೋಹನ್‌ಲಾಲ್‌ ಅವರು ಅಭಿನಯಿಸಿದ್ದರಲ್ಲಿ ಶೇ.30ರಷ್ಟುಬಂದರೂ ಸಿನಿಮಾ ಸಕ್ಸಸ್‌ ಎಂದು ಭಾವಿಸಿದ್ದೇನೆ. ನಿರ್ದೇಶಕ ಜಿ.ವಿ.ಆರ್‌. ವಾಸು ಅವರು, ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಟೇಕ್‌ ಸರಿಯಾಗಿ ಬರದಿದ್ದಾಗ ಮತ್ತೊಮ್ಮೆ ರೀ ಟೇಕ್‌ ತೆಗೆದುಕೊಂಡಿದ್ದಾರೆ. ಅಂಧನ ಪಾತ್ರವಾದ್ದರಿಂದ ಸ್ವಲ್ಪ ವಾಸು ಅವರು ಹೇಳಿದಂತೆಯೇ ಕೇಳಬೇಕಾಯಿತು. ಇಲ್ಲದಿದ್ದರೆ ನಾವೇ ಆಟವಾಡುತ್ತಿದ್ದೆವು’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಪ್ರಚಾರಕ್ಕೆ ಹೋಗಲ್ಲ, ‘ಬಡವ ನೀ ಮಡಗಿದಂಗಿರು’ ರೀತಿ ಇರುತ್ತೇನೆ: ಶಿವಣ್ಣ

‘ಕವಚ ಸಿನಿಮಾ ಯಾವಾಗಲೋ ಬಿಡುಗಡೆ ಆಗಬೇಕಿತ್ತು. ಯುಗಾದಿ ಸಂಭ್ರಮಕ್ಕಾಗಿ ಏ.5ರಂದು ಬಿಡುಗಡೆ ಆಗುತ್ತಿದೆ. ನಟಿ ಕೃತಿಕಾ ಜಯರಾಂ, ಇಶಾ ಕೋಪಿಕರ್‌, ರವಿಕಾಳೆ, ವಶಿಷ್ಠ, ತಬಲ ನಾಣಿ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸಣ್ಣ ಸಣ್ಣಪಾತ್ರವು ಅಗತ್ಯವೆನಿಸಿದೆ. ಒಪ್ಪಂ ಸಿನಿಮಾವನ್ನು ಹಾಗೆಯೇ ರಿಮೇಕ್‌ಗೊಳಿಸದೆ, ಸ್ವಲ್ಪಮಟ್ಟಿನ ಬದಲಾವಣೆ ಮಾಡಿಕೊಂಡಿದ್ದೇವೆ’ ಎಂದರು ಶಿವರಾಜಕುಮಾರ್‌.

ರಾಮ್‌ಗೋಪಾಲ್‌ವರ್ಮ ಅವರ ಬಳಿ ಕೆಲಸ ಮಾಡುತ್ತಿದ್ದ ಜಿವಿಆರ್‌ ವಾಸು, ಅವರು ಇಷ್ಟುಬೇಗ ಸ್ವತಂತ್ರವಾಗಿ ಸಿನಿಮಾ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಒಳ್ಳೆಯ ನಿರ್ದೇಶನ ನೀಡಿದ್ದಾರೆ. ಅರ್ಜುನ್‌ ಜನ್ಯ ಉತ್ತಮ ಸಂಗೀತ ನೀಡಿದ್ದಾರೆ. ಅಂಧರ ಬದುಕು ಎಷ್ಟುಕಷ್ಟಎಂಬುದನ್ನು ಅರಿತಿದ್ದೇನೆ. ಆದ್ದರಿಂದ ಈ ಸಿನಿಮಾದಲ್ಲಿ ನನ್ನದು ಒಳ್ಳೆಯ ಪಾತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ಅಚ್ಚುಮೆಚ್ಚು

ಮೈಸೂರು ನನಗೆ ಅಚ್ಚುಮೆಚ್ಚು. ಜನುಮಾದ ಜೋಡಿ, ಸಿಂಹದಮರಿ ಸೇರಿದಂತೆ ಅನೇಕ ಸಿನಿಮಾ ಇಲ್ಲಿ ಚಿತ್ರೀಕರಣವಾಗಿದೆ. ಪ್ರತಿ ತಿಂಗಳು ಮೈಸೂರಿಗೆ ಬರುತ್ತೇನೆ. ಈ ಹಿಂದೆ ನಮ್ಮ ತಾಯಿ ನೋಡಿಕೊಳ್ಳುತ್ತಿದ್ದ ಶಕ್ತಿಧಾಮದ ಕೆಲಸವನ್ನು ಈಗ ನನ್ನ ಪತ್ನಿ ವಹಿಸಿಕೊಂಡಿರುವುದರಿಂದ ನಾನು ಅವರೊಂದಿಗೆ ಬರುತ್ತೇನೆ. ಇಲ್ಲಿನ ಹನುಮಂತು ಪಲಾವ್‌, ಮೈಲಾರಿ ದೋಸೆ ಬಹಳ ಇಷ್ಟಎಂದರು.

ಖಳನಟ ವಸಿಷ್ಠ ಸಿಂಹ ಮಾತನಾಡಿ, 2017 ಜನವರಿಯಲ್ಲಿಯೇ ಈ ಸಿನಿಮಾಕ್ಕೆ ಒಪ್ಪಂದ ಮಾಡಿಕೊಂಡೆ. ಆದರೆ ಕೆಲವೊಂದು ಬದಲಾವಣೆ ಮಾಡಿದ್ದರಿಂದ ತಡವಾಯಿತು. ಸುಮಾರು 8 ತಿಂಗಳ ಕಾಲ ಸ್ಕಿ್ರಪ್ಟಿನ ಶೇ. 40 ರಿಂದ 50 ಭಾಗವನ್ನು ಬದಲಿಸಲಾಯಿತು. ಒಪ್ಪಂ ನೋಡಿದರೆ ಇದೊಂದು ಹೊಸ ಸಿನಿಮಾ ರೀತಿಯೇ ಕಾಣುತ್ತದೆ. ನನ್ನ ರೋಲ್‌ ಈ ಸಿನಿಮಾದಲ್ಲಿ ಸ್ವಲ್ಪ ಭಿನ್ನವಾಗಿದೆ. ಮಫ್ತಿ, ಟಗರು ಬಳಿಕ ಶಿವರಾಜಕುಮಾರ್‌ ಅವರ ಜೊತೆ ಕವಚ ಮೂರನೇ ಸಿನಿಮಾ. ಈ ಸಿನಿಮಾ ನನ್ನನ್ನು ಭಾವನಾತ್ಮಕವಾಗಿ ತುಂಬಾ ಕಾಡಿದೆ ಎಂದರು.

ಚಲನಚಿತ್ರ ನಟಿ ಕೃತಿಕ, ಸಿನಿಮಾ ನಿರ್ದೇಶಕ ಜಿವಿಆರ್‌ ವಾಸು ಇದ್ದರು.