ಮುಂಬೈ (ಜು. 11): ಇಸ್ರೋದ ಐತಿಹಾಸಿಕ ಮಂಗಳಯಾನದ ಕುರಿತ ಬಾಲಿವುಡ್‌ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ‘ಮಿಷನ್‌ ಮಂಗಲ್‌’ ಹೆಸರಿನ ಈ ಚಿತ್ರ ಮಂಗಳಯಾನ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕರ್ನಾಟಕದ ಮೂವರು ಸೇರಿದಂತೆ 5 ಮಹಿಳಾ ವಿಜ್ಞಾನಿಗಳ ಸಾಧನೆಯ ಮೇಲೆ ಬೆಳಕು ಚೆಲ್ಲಲಿದೆ.

ವಿಶ್ವದ ಹೈಯೆಸ್ಟ್ ಪೇಯ್ಡ್ ನಟರಲ್ಲಿ ‘ಕೇಸರಿ’ ಹೀರೋ

ಕರ್ನಾಟಕದವರಾದ ಅನುರಾಧಾ ಟಿ.ಕೆ. ಹಾಗೂ ಬನ್ನಿಹಟ್ಟಿಪರಮೇಶ್ವರಪ್ಪ ದಾಕ್ಷಾಯಿಣಿ, ನಂದಿನಿ ಹರಿನಾಥ್‌, ಉತ್ತರ ಪ್ರದೇಶದವರಾದ ರಿತು ಕಾರಿಧಲ್‌, ಪಶ್ಚಿಮ ಬಂಗಾಳದವಾದ ಮೌಮಿತಾ ದತ್ತಾ ಮಂಗಳಯಾನ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇವರಲ್ಲದೇ ಈ ಯೋಜನೆಯಲ್ಲಿ ಭಾಗಿಯಾದ 17 ಎಂಜಿನಿಯರ್‌ಗಳು ವಿಜ್ಞಾನಿಗಳ ಸಾಧನೆಯ ಬಗ್ಗೆಯೂ ಚಿತ್ರ ಬೆಳಕು ಚೆಲ್ಲಲಿದೆ. ಅಕ್ಷಯ್‌ ಕುಮಾರ್‌ ಚಿತ್ರದಲ್ಲಿ ಮುಖ್ಯ ಭೂಮಿಕೆಯನ್ನು ನಿಭಾಯಿಸಲಿದ್ದಾರೆ.

ಅಲ್ಲದೇ ವಿದ್ಯಾಬಾಲನ್‌, ಸೋನಾಕ್ಷಿ ಸಿನ್ಹಾ, ತಾಪಸಿ ಪನ್ನು, ಕೀರ್ತಿ ಕುಲ್ಹಾರಿ ಹಾಗೂ ನಿತ್ಯಾ ಮೆನನ್‌ ಮಹಿಳಾ ವಿಜ್ಞಾನಿಗಳ ಪಾತ್ರವನ್ನು ನಿಭಾಯಿಸಲಿದ್ದಾರೆ. ಜಗನ್‌ ಶಕ್ತಿ ನಿರ್ದೇಶನದ ಮಿಷನ್‌ ಮಂಗಲ್‌ ಚಿತ್ರ ಆ.15 ರಂದು ತೆರೆ ಕಾಣಲಿದೆ.

‘ಮಿಷನ್ ಮಂಗಲ್‌’ನಲ್ಲಿ ಅಕ್ಷಯ್ ಜೊತೆ ಕನ್ನಡದ ಹೆಮ್ಮೆಯ ನಟ ದತ್ತಣ್ಣ

ಬೆಂಗಳೂರಿನವರಾದ ಅನುರಾಧಾ ಟಿ.ಕೆ. 1982ರಲ್ಲಿ ಇಸ್ರೋಗೆ ಸೇರ್ಪಡೆಯಾಗಿದ್ದಾರೆ. ಇಸ್ರೋದ ಉಪಗ್ರಹ ಯೋಜನೆ ನಿರ್ದೇಶಕಿಯಾದ ಮೊದಲ ಮಹಿಳೆ ಎನಿಸಿದ್ದಾರೆ. ಭದ್ರಾವತಿಯವರಾದ ದಾಕ್ಷಾಯಿಣಿ 1984ರಲ್ಲಿ ಇಸ್ರೋಗೆ ಸೇರಿದ್ದರು. ಇನ್ನೊಬ್ಬ ಮಹಿಳಾ ವಿಜ್ಞಾನಿ ನಂದಿನಿ ಹರಿನಾಥ್‌ ಕೂಡ ಬೆಂಗಳೂರಿನವರಾಗಿದ್ದಾರೆ.