ಮಗಳ ಮದುವೆ ತಯಾರಿ ಹೇಗಿದೆ?

ಮದುವೆ ವಿಶೇಷವಾಗಿರುತ್ತದೆ. ಕುಟುಂಬದ ಸಂಭ್ರಮವಾಗಿಯೂ ನಡೆಯುತ್ತದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರ ವಾಸಿನಿ(ವೈಟ್‌ ಪೆಟಲ್ಸ್‌)ನಲ್ಲಿ ಮೇ 28 ಮತ್ತು 29 ಮದುವೆ. ಒಂದು ದಿನ ರಿಸೆಪ್ಷನ್‌, ಮತ್ತೊಂದು ದಿನ ಮದುವೆ. ಸುಮಾರು 40 ಕ್ಯಾಮೆರಾ ಸೆಟಪ್‌, ಹತ್ತು ಸಾವಿರ ಜನ ಕೂತು ಆರಾಮಾಗಿ ಮದುವೆ ನೋಡುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಸೋಫಾ ವ್ಯವಸ್ಥೆ ಇರತ್ತೆ. ನೂಕು ನುಗ್ಗಲು ಬೇಡ ಅಂತ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಲಾಗಿದೆ. ಜತೆಗೆ ಹಂಸಲೇಖ ಅವರ ಸಂಗೀತ ಕಾರ್ಯಕ್ರಮ ಇದೆ. ಚಿತ್ರರಂಗ, ಗೆಳೆಯರು, ನೆಂಟರು, ಮಾಧ್ಯಮ ಹೀಗೆ ಎಲ್ಲರನ್ನು ಅಹ್ವಾನಿಸುತ್ತಿದ್ದೇನೆ.

ಮಗಳ ಮದುವೆ ಹಾಡು ಗಿಫ್ಟ್‌ ಮಾಡಿದ್ದೀರಲ್ಲ?

ಹೌದು. ಮಗಳ ಮೇಲಿನ ಅಪ್ಪನ ಎಮೋಷನ್‌, ಲವ್‌ ತೋರಿಸುವ ಕ್ಷಣ ಅಂತ ಇದ್ದರೆ ಅದು ಮದುವೆ ಆಗಿ ಆಕೆ ಬೇರೆ ಮನೆಗೆ ಹೋಗುವಾಗ. ನನ್ನ ಪ್ರಕಾರ ಜಗತ್ತಿನ ಅತ್ಯುತ್ತಮ ಪ್ರೇಮ ಅಂದರೆ ಅದು ಅಪ್ಪ- ಮಗಳದ್ದು. ಮಗಳು ಹುಟ್ಟಿದ್ದಾಗ ಅಪ್ಪನೂ ಹುಟ್ಟುತ್ತಾನೆ. ಆದರೆ, ಮಗಳು ಬೆಳೆದು ನಿಂತಾಗ ಅಪ್ಪ ಮಗುವಾಗುತ್ತಾನೆ. ನನ್ನ ಈ ಭಾವುಕ ಕನಸುಗಳನ್ನು ಹೇಳುವುದಕ್ಕಾಗಿಯೇ ಹಾಡು ಕಂಪೋಸ್‌ ಮಾಡಿ ಆಕೆಗೆ ಗಿಫ್ಟ್‌ ಆಗಿ ಕೊಟ್ಟಿರುವೆ.

ಪಡ್ಡೆಹುಲಿ ಚಿತ್ರದಲ್ಲಿ ‘ನಾಗರಹಾವು’ ನೆರಳು ಇರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅದು ನಮ್ಮದೇ ಸಂಸ್ಥೆಯ ನಿರ್ಮಾಣದ ಚಿತ್ರ. ಅವತ್ತಿಗೂ, ಇವತ್ತಿಗೂ ನನ್ನ ನೆಚ್ಚಿನ ಪ್ರೇಮ ಕತೆಯ ಸಿನಿಮಾ ಅಂದರೆ ಅದು ‘ನಾಗರಹಾವು’ ಮಾತ್ರ. ಅವತ್ತಿನ ಕಾಲದಲ್ಲೇ ಒಂದು ಪ್ರೇಮ ಕತೆಯನ್ನು ಎಷ್ಟುಅದ್ಭುತವಾಗಿ ತೋರಿಸಬಹುದು ಎಂಬುದು ಆ ಸಿನಿಮಾ ಸಾಕ್ಷಿ.

ಹಾಡು, ಸಂಗೀತ ವಿಚಾರದಲ್ಲಿ ಪಡ್ಡೆಹುಲಿ ಈ ಕಾಲದ ‘ಪ್ರೇಮಲೋಕ’ನಾ?

ಒಂದಕ್ಕೊಂದು ಕಂಪೇರ್‌ ಮಾಡೋದು ಬೇಕಿಲ್ಲ. ಅದು ಪ್ರೇಮಲೋಕ, ಇದು ಪಡ್ಡೆಹುಲಿ. ಆಯಾ ಚಿತ್ರಗಳಿಗೆ ಅದರದ್ದೇ ಆದ ತೂಕ ಮತ್ತು ಮಹತ್ವ ಇರುತ್ತದೆ. ಹೀಗಾಗಿ ಒಂದರ ಜತೆ ಮತ್ತೊಂದನ್ನು ನಿಲ್ಲಿಸಿ ಕಂಪೇರ್‌ ಮಾಡದೆ ಹೊಸಬರ ಚಿತ್ರ ಅಂತ ನೋಡಿ. ಪಡ್ಡೆಹುಲಿಯಲ್ಲಿ 10 ಹಾಡುಗಳನ್ನು ಬಳಸಿರುವುದು ನಿರ್ದೇಶಕ ಗುರು ದೇಶಪಾಂಡೆ ಅವರ ಜಾಣ್ಮೆ. ಅದು ಕೂಡ ಕನ್ನಡದ ಭಾವಗೀತೆಗಳನ್ನು ಬಳಿಸಿಕೊಂಡಿರುವುದು ಇನ್ನೂ ಖುಷಿ ವಿಚಾರ.

ಹೀರೋ, ಕ್ರೇಜಿಸ್ಟಾರ್‌ ಅನಿಸಿಕೊಂಡ ನೀವು ಅಪ್ಪನ ಪಾತ್ರ ಮಾಡುವಾಗ ಏನನಿಸಿತು?

ನಾನು ನಟ. ಯಾವ ರೀತಿಯ ಪಾತ್ರ ಕೊಟ್ಟರೂ ಮಾಡುವೆ. ಆದರೆ, ಒಂದು ವೇಳೆ ಈಗ ವಿಷ್ಣುವರ್ಧನ್‌ ಇದ್ದಿದ್ದರೆ ಈ ಚಿತ್ರದಲ್ಲಿ ಶ್ರೇಯಸ್‌ಗೆ ತಂದೆಯಾಗಿ ವಿಷ್ಣು ಅವರೇ ಕಾಣಿಸಿಕೊಳ್ಳುತ್ತಿದ್ದರೇನೋ? ಯಾಕೆಂದರೆ ಶ್ರೇಯಸ್‌ ತಂದೆ ಸಾಹಸ ಸಿಂಹ ಅವರ ಪರಮ ಅಭಿಮಾನಿ. ಅವರಿಲ್ಲ, ನನಗೆ ಆ ಭಾಗ್ಯ ಸಿಕ್ಕಿದೆ.

ಇತ್ತೀಚೆಗೆ ನಿಮಗೆ ಯಾವ ರೀತಿಯ ಪಾತ್ರಗಳು ಬರುತ್ತಿವೆ?

ಅಪ್ಪ, ಅಣ್ಣ, ಮಾವನ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಕೇಳುತ್ತಿದ್ದಾರೆ. ಮೊನ್ನೆಯಷ್ಟೆಒಂದು ಚಿತ್ರದಲ್ಲಿ ತಾತನ ಪಾತ್ರ ಮಾಡುವಂತೆ ಕೇಳಿದರು. ಮಾಡುತ್ತೇನೆ ಎಂದಿದ್ದೇನೆ. ಹೀರೋ ಆಗಿ ಸಂಪಾದನೆ ಮಾಡಿದ್ದಕ್ಕಿಂತ ಹೆಚ್ಚಾಗಿ ಪೋಷಕ ಪಾತ್ರಧಾರಿಯಾಗಿ ಸಂಪಾದಿಸಿರುವುದು ಹೆಚ್ಚು.

ರವಿಚಂದ್ರನ್ ಕಿರಿಯ ಪುತ್ರ ಚಿತ್ರರಂಗ ಪ್ರವೇಶ!

ಕ್ರೇಜಿಸ್ಟಾರ್‌ ಇಮೇಜ್‌, ಪೋಷಕ ನಟ ಆದದ್ದು ಹೇಗೆ?

ಇದಕ್ಕೆ ‘ಮಾಣಿಕ್ಯ’ ಹಾಗೂ ‘ದೃಶ್ಯ’ ಚಿತ್ರಗಳು ಕಾರಣಕ್ಕೆ. ಈ ಎರಡೂ ಚಿತ್ರಗಳಲ್ಲಿ ತಂದೆಯಾಗಿ ನಾನು ಕಾಣಿಸಿಕೊಂಡಾಗ ಜನ ದೊಡ್ಡ ಮಟ್ಟದಲ್ಲಿ ಮೆಚ್ಚಿಕೊಂಡರು. ಜತೆಗೆ ರವಿಚಂದ್ರನ್‌ ದ್ರಾಕ್ಷಿ ಮಾತ್ರ ಎಸೆಯಲ್ಲ, ಅದ್ಭುತವಾಗಿ ನಟಿಸುತ್ತಾರೆ ಎನ್ನುವ ಭಾವನೆ ಮೂಡಿಸಿತು.

ಈ ಹಿಂದೆ ನೀವು ಇಂಥ ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳೇ ಮಾಡಿಲ್ಲವೇ?

‘ರಾಮಾಚಾರಿ’, ‘ಹಳ್ಳಿ ಮೇಷ್ಟು್ರ’ ಚಿತ್ರಗಳನ್ನು ನೀವು ಹೇಗೆ ಮರೆಯುತ್ತೀರಿ!? ಆದರೂ ಜನ ನನ್ನ ಅದೇ ದ್ರಾಕ್ಷಿ, ನಾಯಕಿ ಹೊಕ್ಕಳು, ಹೂವು, ಶೃಂಗಾರಕ್ಕೆ ಸೀಮಿತ ಮಾಡಿ ನೋಡುತ್ತಿದ್ದಾರೆ. ನಾನು ಒಂದು ಸಲ ದ್ರಾಕ್ಷಿ ಹಾಕಿದ್ದಕ್ಕೆ ಜನ ಇನ್ನೂ ನನೆಪಿಟ್ಟುಕೊಂಡಿದ್ದಾರೆ ಅಂದರೆ ದ್ರಾಕ್ಷಿ ಮೇಲೆ ಮೋಹ ಅವರಿಗೇ ಎಷ್ಟಿದೆ ನೋಡಿ....!

ಸರಿ, ನಿಮ್ಮ ನಿರ್ದೇಶನದ ಸಿನಿಮಾಗಳು ಎಲ್ಲಿವರೆಗೂ ಬಂದಿವೆ?

ಸದ್ಯಕ್ಕೆ ನನ್ನ ಮಗಳ ಮದುವೆಯಲ್ಲಿ ಬ್ಯುಸಿ. ಮದುವೆ ನಂತರ ರಾಜೇಂದ್ರ ಪೊನ್ನಪ್ಪ ಸಿನಿಮಾ ಶುರುವಾಗಲಿದೆ.

ನನ್ನ ಪಾಲಿನ ಏಪ್ರಿಲ್‌ ಸಂಭ್ರಮ:

ನನಗೆ ಏಪ್ರಿಲ್‌ ತಿಂಗಳು ಮರೆಯಲಾಗದ ಸಂಭ್ರಮ ಕ್ಷಣಗಳನ್ನು ಉಳಿಸುತ್ತಿದೆ. ಅದು ಹೇಗೆ ಅಂದರೆ...

  • ಏಪ್ರಿಲ್‌ 17 ನನ್ನ ತಂದೆ ವೀರಸ್ವಾಮಿ ಹುಟ್ಟು ಹಬ್ಬ.
  • ಏಪ್ರಿಲ್‌ 19 ನನ್ನ ಮಗನ ಸಮಾನರಾದ ಶ್ರೇಯಸ್‌ ನಟನೆಯ ಪಡ್ಡೆಹುಲಿ ಸಿನಿಮಾ ತೆರೆಗೆ ಬರುತ್ತಿದೆ.
  • ಏಪ್ರಿಲ್‌ 24 ಡಾ ರಾಜ್‌ಕುಮಾರ್‌ ಜನ್ಮದಿನ.
  • ಮೇ 28 ಮತ್ತು 29 ನನ್ನ ಮಗಳು ಗೀತಾಂಜಲಿ ಮದುವೆ.
  • ಅಂಬರೀಶ್‌ ಹುಟ್ಟುಹಬ್ಬದಂದೇ ನನ್ನ ಮಗಳು ಹೊಸ ಜೀವನಕ್ಕೆ ಕಾಲಿಡುತ್ತಿರುವುದು.