‘ಪೊಗರು’ಚಿತ್ರದ ನಾಯಕಿ ಜಾಗಕ್ಕೆ ‘ಕಿರಿಕ್ ಪಾರ್ಟಿ’ ಖ್ಯಾತಿಯ ರಶ್ಮಿಕಾ ಮಂದಣ್ಣ ಅಥವಾ ನ್ಯೂಜಿಲೆಂಡ್ ಬೆಡಗಿ ಲತಾ ಹೆಗೆಡೆ ಅವರ ಹೆಸರು ಚಾಲ್ತಿಗೆ ಬಂದಿವೆ. ಇವರಿಬ್ಬರಲ್ಲಿಯೇ ಒಬ್ಬರು, ಧ್ರುವ ಸರ್ಜಾ ಜತೆಗೆ ಡ್ಯುಯೆಟ್ ಹಾಡುವುದು ಗ್ಯಾರಂಟಿ ಎನ್ನುತ್ತಿವೆ ಮೂಲಗಳು.
ಬೆಂಗಳೂರು (ನ.22): ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ಹೀರೋಯಿನ್ ಆಯ್ಕೆ ಸರ್ಕಸ್'ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಗಡಿಯಾಚೆಗಿನ ಸ್ಟಾರ್ ನಟಿಯರ ಮೇಲಿದ್ದ ಚಿತ್ರ ತಂಡದ ಕಣ್ಣು ಈಗ ಕನ್ನಡದ ನವ ನಟಿಯರ ಮೇಲೆ ಬಿದ್ದಿದೆ. ಸದ್ಯಕ್ಕೀಗ ‘ಪೊಗರು’ಚಿತ್ರದ ನಾಯಕಿ ಜಾಗಕ್ಕೆ ‘ಕಿರಿಕ್ ಪಾರ್ಟಿ’ ಖ್ಯಾತಿಯ ರಶ್ಮಿಕಾ ಮಂದಣ್ಣ ಅಥವಾ ನ್ಯೂಜಿಲೆಂಡ್ ಬೆಡಗಿ ಲತಾ ಹೆಗೆಡೆ ಅವರ ಹೆಸರು ಚಾಲ್ತಿಗೆ ಬಂದಿವೆ. ಇವರಿಬ್ಬರಲ್ಲಿಯೇ ಒಬ್ಬರು, ಧ್ರುವ ಸರ್ಜಾ ಜತೆಗೆ ಡ್ಯುಯೆಟ್ ಹಾಡುವುದು ಗ್ಯಾರಂಟಿ ಎನ್ನುತ್ತಿವೆ ಮೂಲಗಳು.
ಎಲ್ಲಕ್ಕಿಂತ ಮೊದಲು ಈ ಚಿತ್ರದ ನಾಯಕಿ ಜಾಗಕ್ಕೆ ಕೇಳಿ ಬಂದ ಹೆಸರು ಶ್ರುತಿ ಹಾಸನ್. ಅವರನ್ನು ಕರೆ ತರಲು ನಿರ್ದೇಶಕ ನಂದಕಿಶೋರ್ ಸಾಕಷ್ಟು ಸರ್ಕಸ್ ನಡೆಸಿದ್ದಾರೆ ಅನ್ನೋ ಸುದ್ದಿ ಕೇಳಿಬಂದಿತ್ತು. ಈಗ ಅದೇ ಜಾಗಕ್ಕೆ ರಶ್ಮಿಕಾ ಮಂದಣ್ಣ ಹಾಗೂ ಲತಾ ಹೆಗಡೆ ಹೆಸರು ಕೇಳಿ ಬಂದಿವೆ. ಇಂಟರೆಸ್ಟಿಂಗ್ ಅಂದರೆ ಪರಭಾಷಾ ನಟಿ ಶ್ರುತಿ ಹಾಸನ್ ಕರೆ ತರುವ ಯತ್ನಕ್ಕೆ ಬ್ರೇಕ್ ಬಿದ್ದಿದ್ದರ ಹಿಂದೆ ಒಂದು ಕತೆ ಇದೆ.
ಶ್ರುತಿ ಹಾಸನ್ ಕರೆ ತರುವ ನಿರ್ದೇಶಕರ ಪ್ರಯತ್ನಕ್ಕೆ ಹಿನ್ನೆಡೆ ಆಗಿದ್ದಕ್ಕೆ ಮೂಲ ಕಾರಣ ಧ್ರುವ ಸರ್ಜಾ. ಹೀಗೆನ್ನುತ್ತಿವೆ ಮೂಲಗಳು. ಕಾರಣ, ಅವರು ಅಭಿನಯಿಸಿದ ಮೂರು ಸಿನಿಮಾಗಳು ಸೂಪರ್ ಡ್ಯೂಪರ್ ಹಿಟ್. ಆ ಸಿನಿಮಾಗಳಲ್ಲಿ ನಾಯಕಿ ಆಗಿದ್ದವರೆಲ್ಲರೂ ಕನ್ನಡದ ನಟಿಯರೇ. ಇಷ್ಟಾಗಿಯೂ ತಮ್ಮ ಮುಂದಿನ ಸಿನಿಮಾಗೆ ಪರಭಾಷೆ ನಟಿಯನ್ನು ಕರೆತರುವುದು ಅವರಿಗೆ ಮನಸ್ಸಿರಲಿಲ್ಲವಂತೆ. ಮೇಲಾಗಿ ಅವರಿಬ್ಬರಿಗೂ ಜೋಡಿಯೇ ಅಲ್ಲ ಎನ್ನುವ ಮಾತುಗಳು ಅವರ ಅಭಿಮಾನಿಗಳಿಂದಲೂ ಕೇಳಿಬಂದಿದ್ದವು. ಇವೆಲ್ಲ ಲೆಕ್ಕಾಚಾರದ ನಡೆಯುತ್ತಿರುವಾಗಲೇ ಶ್ರುತಿ ಹಾಸನ್, ‘ಸದ್ಯಕ್ಕೆ ತಾನು ಬ್ಯುಸಿ. ಡೇಟ್ಸ್ ಇಲ್ಲ’ ಎಂದು ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ ಎಂದು ಸಾರಿದ್ದರು.
ಹೀಗಾಗಿ ಚಿತ್ರತಂಡ ಕನ್ನಡದ ನಟಿಯರ ಹಿಂದೆ ಬಿದ್ದಿದೆ ಎನ್ನುತ್ತಿವೆ ಮೂಲಗಳು. ಮೂಲದ ಪ್ರಕಾರ, ನಿರ್ದೇಶಕ ನಂದ ಕಿಶೋರ್ ಮುಂದೆ ಎರಡು ಹೆಸರುಗಳು ಇವೆ. ಒಂದು ರಶ್ಮಿಕಾ ಮಂದಣ್ಣ. ಮತ್ತೊಂದು ನ್ಯೂಜಿಲೆಂಡ್ ಬೆಡಗಿ ಲತಾ ಹೆಗಡೆ ಹೆಸರು. ಇವರಿಬ್ಬರಲ್ಲಿ ಒಬ್ಬರನ್ನು ಚಿತ್ರದ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.
